Basarikatte Teacher Assault ಕೊಪ್ಪ: ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಸರ್ಕಾರಿ ಅತಿಥಿ ಶಿಕ್ಷಕಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಮರಕ್ಕೆ ಕಟ್ಟಿ ಹಾಕಿದ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಬಸರೀಕಟ್ಟೆ ಸಮೀಪ ಮಂಗಳವಾರ ಸಂಜೆ ನಡೆದಿದೆ.
ಶಾಂತಿಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಪೂರ್ವ ಎಂಬುವವರು ಕರ್ತವ್ಯ ಮುಗಿಸಿ ಬಸರೀಕಟ್ಟೆಯಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದಾಗ, ಚರ್ಚ್ ಸಮೀಪ ಮಾಸ್ಕ್ ಧರಿಸಿದ್ದ ವ್ಯಕ್ತಿಯೊಬ್ಬ ಹಿಂಬದಿಯಿಂದ ಬಂದು ರಾಡ್‌ನಿಂದ ತಲೆಗೆ ಹೊಡೆದಿದ್ದಾನೆ. ನಂತರ ಆಕೆಯನ್ನು ಅಡಿಕೆ ಮರಕ್ಕೆ ಸೀರೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಕಟ್ಟಿ ಹಾಕಿದ್ದಾನೆ. ಯುವತಿಯ ಬಾಯಿಗೆ ಮಣ್ಣು ಸಹ ಹಾಕಲಾಗಿತ್ತು ಮತ್ತು ಹಣೆಯ ಭಾಗಕ್ಕೆ ಗಂಭೀರ ಪೆಟ್ಟಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಯುವತಿ ಕೂಗುತ್ತಿದ್ದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ತಕ್ಷಣ ಬಂದು ಆಕೆಯನ್ನು ರಕ್ಷಿಸಿದ್ದಾರೆ. ತಕ್ಷಣ ಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಜಯಪುರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

