ಭದ್ರಾವತಿ: ನೆರೆಹೊರೆಯವರೊಂದಿಗೆ ಕೆಲಸದ ವಿಚಾರವಾಗಿ ಗಲಾಟೆ ವಿವಾದ ಹಾಗೂ ಜಾತಿ ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಅಗರದಹಳ್ಳಿಯ ನಿವಾಸಿ ಸುರೇಶ್ ಎ.ವಿ (54) ಎಂಬಾತನಿಗೆ ಶಿಕ್ಷೆ ವಿಧಿಸಿದೆ.
ಘಟನೆಯ ಹಿನ್ನೆಲೆ
2022ರ ಫೆಬ್ರವರಿ 25ರಂದು ರಾತ್ರಿ ಆರೋಪಿತ ಸುರೇಶ್ ತನ್ನ ಮನೆಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಈ ವೇಳೆ ಶಬ್ದದಿಂದ ಮಕ್ಕಳಿಗೆ ಓದಲು ತೊಂದರೆಯಾಗುತ್ತಿದೆ ಎಂದು ದೂರುದಾರರು ಮನವಿ ಮಾಡಿದ್ದರು. ಆದರೆ, ಇದರಿಂದ ಕೆರಳಿದ ಸುರೇಶ್, ದೂರುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಲ್ಲದೆ, ಅಗರದಹಳ್ಳಿ ಕಾಲುದಾರಿಯಲ್ಲಿ ಅವರನ್ನು ಅಡ್ಡಗಟ್ಟಿ ಜಾತಿ ನಿಂದನೆ ಮಾಡಿದ್ದನು ಎನ್ನಲಾಗಿದೆ, ಈ ಹಿನ್ನೆಲೆ ಆರೋಪಿತನ ಮೇಲೆ ಪ್ರಕರಣ ದಾಖಲಾಗಿತ್ತು.
ಅಂದಿನ ಡಿವೈಎಸ್‌ಪಿ ಉಮೇಶ್ ಈಶ್ವರ್ ನಾಯ್ಕ್ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ. ಅವರು ವಾದ ಮಂಡಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಆರೋಪಿತನ ಮೇಲಿನ ದೂರು ದೃಢಪಟ್ಟ ಹಿನ್ನೆಲೆಯಲ್ಲಿ ಈ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ಐಪಿಸಿ ಕಲಂ 504, 506, 341 ಮತ್ತು ಎಸ್.ಸಿ-ಎಸ್.ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸುರೇಶ್‌ಗೆ 2 ವರ್ಷ ಕಠಿಣ ಕಾರಾವಾಸ ಹಾಗೂ 50,500 ರೂಪಾಯಿ ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ 25,000 ರೂಪಾಯಿಯನ್ನು ದೂರುದಾರರಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
Bhadravathi Jail for Man who Abused Neighbor

Bhadravathi Jail for Man who Abused Neighbor

