Shivamogga Farmers ಶಿವಮೊಗ್ಗ: ರಾಜ್ಯದಲ್ಲಿ ಗೊಬ್ಬರ ಪೂರೈಕೆ ಕಡಿಮೆಯಾಗುತ್ತಿರುವ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯಾದ್ಯಂತ ಹೋರಾಟ ನಡೆಸುತ್ತಿರುವಂತೆಯೇ, ಶಿವಮೊಗ್ಗ ಜಿಲ್ಲೆಯ 35 ಸಾವಿರ ರೈತರನ್ನು ಒಕ್ಕಲೆಬ್ಬಿಸಲು ನೋಟಿಸ್ ನೀಡುತ್ತಿರುವ ಕ್ರಮದ ವಿರುದ್ಧವೂ ಶಾಸಕ ಬಿವೈ ವಿಜಯೇಂದ್ರ ಹೋರಾಟ ಮಾಡಬೇಕೆಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ. ಶ್ರೀನಿವಾಸ್ ಆಗ್ರಹಿಸಿದ್ದಾರೆ.
Shivamogga Farmers ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತೀ.ನಾ. ಶ್ರೀನಿವಾಸ್, ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ ಮತ್ತು ತೀರ್ಥಹಳ್ಳಿ ಭಾಗದ ಸಾವಿರಾರು ರೈತರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಉಳಿದ ಭಾಗದ ರೈತರಿಗೂ ನೋಟಿಸ್ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಶಿಕಾರಿಪುರದ ಶಾಸಕರಾದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ರೈತರಿಗೆ ಗೊಬ್ಬರ ವಿತರಣೆ ಆಗುತ್ತಿಲ್ಲ ಎಂದು ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದಾರೆ. ಅದು ತಪ್ಪಲ್ಲ, ಅದರ ವಿರುದ್ಧ ಹೋರಾಟಕ್ಕೆ ಕರೆ ನೀಡಿದಂತೆ, ಈ ಒಕ್ಕಲೆಬ್ಬಿಸುವ ನೋಟಿಸ್ ವಿರುದ್ಧವೂ ಹೋರಾಟ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಹಿಂದೆ ಬಗರ್‌ಹುಕುಂ ಸಾಗುವಳಿದಾರರು ಮತ್ತು ಭೂ ಹಕ್ಕಿಗಾಗಿ ಬಿ.ಎಸ್. ಯಡಿಯೂರಪ್ಪ ಅವರು ಸೈಕಲ್ ಏರಿ ಹೋರಾಟ ಮಾಡಿದ್ದರು ಎಂದು ಸ್ಮರಿಸಿದ ತೀ.ನಾ. ಶ್ರೀನಿವಾಸ್, ಅವರ ಮಕ್ಕಳು ಈಗ ರೈತಪರ ಹೋರಾಟ ಮಾಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬಂಗಾರಪ್ಪ ಅವರು ಭೂ ಹಕ್ಕಿಗಾಗಿ ರಾಜ್ಯದಲ್ಲಿ ಧ್ವನಿ ಎತ್ತಿದ್ದರು. ಆದರೆ ಅವರದ್ದೇ ಮನೆ ಸಮೀಪದ ರೈತರಿಗೆ ನೋಟಿಸ್ ನೀಡಿದ್ದರೂ ಉಸ್ತುವಾರಿ ಸಚಿವರು ಉತ್ತರ ನೀಡುತ್ತಿಲ್ಲ ಎಂದು ತೀ.ನಾ. ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.
Shivamogga Farmers ಅರಣ್ಯ ಸಚಿವರ ಬದಲಾವಣೆಗೆ ಆಗ್ರಹ
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ದನಕರುಗಳನ್ನು ಅರಣ್ಯಕ್ಕೆ ಮೇಯಲು ಬಿಡಬಾರದು ಎಂಬ ಆದೇಶ ಹೊರಡಿಸಿರುವುದಕ್ಕೆ ತೀ.ನಾ. ಶ್ರೀನಿವಾಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಮಲೆನಾಡು ಭಾಗದಲ್ಲಿ ದನಗಳನ್ನು ಅರಣ್ಯಕ್ಕೆ ಬಿಡದೆ ಎಲ್ಲಿಗೆ ಬಿಡಬೇಕು?” ಎಂದು ಪ್ರಶ್ನಿಸಿದ ಅವರು, “ಅರಣ್ಯ ಸಚಿವರು ಮಾನಸಿಕ ಸ್ಥಿಮಿತೆ ಕಳೆದುಕೊಂಡಿದ್ದಾರೆ, ಸಿದ್ದರಾಮಯ್ಯ ಸರ್ಕಾರ ಕೂಡಲೇ ಅವರನ್ನು ಬದಲಾವಣೆ ಮಾಡಬೇಕು” ಎಂದು ಆಗ್ರಹಿಸಿದರು.
