Shivamogga news today :ಶಿವಮೊಗ್ಗ, ಜುಲೈ 19: ದೀರ್ಘಕಾಲದಿಂದ ಬಗರ್ ಹುಕುಂ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಹಕ್ಕು ಪತ್ರ (ಮಂಜೂರಾತಿ) ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಬಗರ್ ಹುಕುಂ ಸಕ್ರಮೀಕರಣ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರಿ ಆದೇಶಗಳ ಕುರಿತು ಗೊಂದಲಗಳಿದ್ದು, ಅಧಿಕಾರಿಗಳು ರೈತರಿಗೆ ವರದಿ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ಸಮಿತಿ ಆರೋಪಿಸಿದೆ.
Shivamogga news today : ಮನವಿಯಲ್ಲಿ ಏನಿದೆ
ಸುಮಾರು 30-40 ವರ್ಷಗಳಿಂದ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ಅನೇಕ ರೈತರು 1990-91 ಮತ್ತು 1998-99ರ ಅವಧಿಯಲ್ಲಿ ಫಾರಂ ನಂ. 50 ಮತ್ತು 53 ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈಗಾಗಲೇ ಬಗರ್ ಹುಕುಂ ಸಮಿತಿ ರಚನೆಯಾಗಿದ್ದು, ಉಪವಿಭಾಗಾಧಿಕಾರಿಗಳ ಮೇಲ್ಮನವಿಯಲ್ಲಿಯೂ ಅನುಮತಿ ಪಡೆದಿದ್ದರೂ, ಸದರಿ ಅನುಮತಿ ಪತ್ರ ಗ್ರಾಮ ಲೆಕ್ಕಾಧಿಕಾರಿಗಳ ವರದಿಗೆ ಹೋದಾಗ, ಅವರು ವರದಿ ನೀಡದೆ ಜಿಲ್ಲಾಧಿಕಾರಿಗಳ ಮೇಲೆ ನೆಪ ಹೇಳಿ ನಿರಾಕರಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸರ್ಕಾರಿ ಸುತ್ತೋಲೆಯ ಪ್ರಕಾರ, ಫಾರಂ-57ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ರೈತರಿಗೆ ಮಾತ್ರ ನಗರ ವ್ಯಾಪ್ತಿಯ 10 ಕಿ.ಮೀ. ಒಳಗಿದ್ದರೆ ವರದಿ ನೀಡಬಾರದೆಂಬ ಆದೇಶವಿದೆ. ಆದರೆ, ಈ ಆದೇಶವು ಫಾರಂ 50 ಮತ್ತು 53 ಅರ್ಜಿಗಳಿಗೆ ಅನ್ವಯಿಸುವುದಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ.


ಅಲ್ಲದೆ, ಈ ಹಿಂದೆ ಸರ್ವೇ ಇಲಾಖೆಯವರು ನೀಡಿದ ವರದಿಯು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿರುವ ಸಮಿತಿ, ಆ ವರದಿಯನ್ನು ಪುನರ್ ಪರಿಶೀಲಿಸುವಂತೆ ಮತ್ತು ಫಾರಂ 50 ಹಾಗೂ 53ರ ಅರ್ಜಿಗಳನ್ನು ಪರಿಗಣಿಸಿ ರೈತರಿಗೆ ಸಾಗುವಳಿ ಹಕ್ಕು ನೀಡುವಂತೆ ಸೂಕ್ತ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿಕೊಂಡಿದೆ.
ಈ ಸಂದರ್ಭದಲ್ಲಿ ಬಗರ್ ಹುಕುಂ ಸಮಿತಿಯ ಸದಸ್ಯ ಎಸ್. ಗಿರೀಶ್ ಅವರ ನೇತೃತ್ವದಲ್ಲಿ ನಡೆದ ಈ ಮನವಿ ಸಲ್ಲಿಕೆ ವೇಳೆ ಕಲಗೋಡು ರತ್ನಾಕರ್, ನಾಗೇಂದ್ರಪ್ಪ ಫಾರಂ, ಸೊಗನೆ ಕೃಷ್ಣಪ್ಪ, ಪ್ರವೀಣ್, ಮಧುಸೂಧನ್, ವೇಲು ಕಲ್ಲಾಪುರ ಮಂಜಣ್ಣ, ವೆಂಕಟೇಶ್, ಕಟೀಕೆರೆ ಹುಚ್ಚಪ್ಪ, ಮಂಜುನಾಥ್, ಸಂಜಯ್, ಮಂಜನಾಯ್ಕ್ ಕಲ್ಲಾಪುರ, ಹರೀಶ್ ನಾಯ್ಕ ನಿದಿಗೆ, ಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
