Gutka Ban ಶಿವಮೊಗ್ಗ: ಏನ್ರೀ ಮಾರ್ರ ಬೆಳ್ಗೆ ಬೆಳ್ಗೆ ಬ್ರೇಕಿಂಗ್ ನ್ಯೂಸ್ ನೋಡುದ್ರ, ನಾವಿಲ್ಲಿ ಕಟ್ಟಿಟ್ಟಿದ್ ಮೂಟೆ ಅಡ್ಕೆ ಮಂಡಿಗ್ ಬಿಡನಾ ಅಂತ, apmc ಚೀಟಿ ನೋಡ್ತಾ ಕಾಯ್ತಾ ಇದ್ರೆ, ಸರ್ಕಾರದವ್ರು ಒಂದೆ ಸಲ ಗರ್ನಲ್ ಇಟ್ಟು ಡಂ ಅನ್ಸ್ ಬಿಟ್ಯಾರೆ ನೋಡಿ, ಅಡ್ಕೆ ರೇಟು 6 ಏರ್ತಿಲ್ಲ 3 ಕ್ಕೆ ಇಳಿತಿಲ್ಲ, ಇದ್ರ ಮಧ್ಯೆ ಗುಟ್ಕಾ ಬ್ಯಾನ್ ಅಂತೆ ಹಿಂಗಾದ್ರೆ ನಮ್ಮ ಕತೆ ಎಂತದ್ರಿ
ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋ ಹಾಗೂ ಕಿರು ಫಿಲ್ಮ್ ಸಿಟಿ ನಿರ್ಮಾಣ: ಜಮೀನು ಪರಿಶೀಲನೆ
ಇದೊಂತರಾ ಗಟ್ಟಿ ಸುದ್ದಿನೇ! ಈ ಸುದ್ದಿನ ಕೇಳಿ ಮಲ್ನಾಡವ್ರು ಮನಸ್ಸನ್ನು ಚೊಗ್ರಾಗ್ ಬಿಟ್ಯದೆ. ಯಾವಾಗ 2 ತಿಂಗ್ಳು ಹಿಂದೆ ಸಿಎಂ ಡಿ.ಕೆ. ಶಿವಕುಮಾರ್ ಅವ್ರು ಗುಟ್ಕಾದಲ್ಲಿ ಡ್ರಗ್ಸ್ ಇರೋ ಅಂಶ ಕೇಳಿಬರ್ತಿದೆ, ಅದೇನಾದ್ರು ಸಾಬೀತಾದ್ರೆ ಗುಟ್ಕಾನ ಬ್ಯಾನ್ ಮಾಡ್ತೀವಿ ಅಂತ ಹೇಳಿದ್ರೋ, ಆ ಮಾತು ಇವಾಗ ನಿಜ ಆಗ್ಯದೆ ನೋಡಿ.
ಕರ್ನಾಟಕ್ದಲ್ಲಿ ಇನ್ನೋಂದ್ ವರ್ಷ ತಂಬಾಕು ಮತ್ತು ನಿಕೋಟಿನ್ ಯುಕ್ತ ಗುಟ್ಕಾ ಮತ್ತು ಪಾನ್ ಮಸಾಲಾದಂತಹ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಮತ್ ಮಾರಾಟನ ಬ್ಯಾನ್ ಮಾಡ್ತೀವಿ ಅಂತ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ನೋಟಿಸ್ ಹಾಕ್ಯಾರೆ. ಕಾನೂನು ಇವತ್ತಿಂದನೇ ಜಾರಿಗ್ ಬಂದ್ಯಾದ್ರೀ. ಇದನ್ನು ಮೀರಿ ಏನಾದ್ರು ಲಾಕ್ ಲೀಕ್ ಮಾಡಿ ಮಾರಕ್ ಹೋದ್ರೋ ಅಮೇಲ್ ನೋಡಿ ಜೈಲೇ ಗತಿ ಅಂತೆ.
ಯಾವಾಗ ಈ ವಿಚಾರ ಬಂತೋ, ಆಗ ಮಲ್ನಾಡವ್ರಿಗೆ – ಅದ್ರಲ್ಲೂ ಅಡ್ಕೆ ಬೆಳಿಯೋರ್ಗೆ ತಲೆಬಿಸಿ ಸುರುವಾಗಿದೆ. ಒಂದು ಬದಿ ಭಾರಿ ಲಾಭ ಇದೆ ಅಂತ ಬಯ್ಲ್ ಸೀಮೇಲು ಅಡ್ಕೆ ಬೆಳಿತಿದರೆ, ಮಲ್ಆಡಲ್ಲಿ ನೋಡುದರೆ ಫಸಲು ಕಮ್ಮಿ, ಕೊಳೆ ಜಾಸ್ತಿ, ಮರ ಆಕಾಶ ಕಂಡ್ರೆ ರೇಟ್ ನೇಲ ಕಾಣ್ತಿದೆ.. ಇದರ ಮಧ್ಯೆ ಗುಟ್ಕಾ ಬ್ಯಾನ್ ಅಂದ್ರೆ, ಅದನ್ನೇ ನಂಬ್ಕೊಂಡಿರೋ ಜೀವಕ್ಕೆ ಹೆಂಗಾಗಲ್ಲ ಹೇಳಿ?
ಇದ್ರು ಮಧ್ಯೆ ನಮ್ ತೀರ್ಥಹಳ್ಳಿ ಶಾಸಕ್ರು ಹಾಗೆ ಅಡಿಕೆ ಮಾರಾಟ ಸಹಕಾರ ಸಂಘಗಳ ಮಹಾಮಂಡಲದ ಅಧ್ಯಕ್ಷ ಆರಗ ಜ್ಞಾನೇಂದ್ರಣ್ಣ ರೈತ್ರು ಪರವಾಗಿ ಬೆಳಿಗ್ಗೆ ಬೆಳಿಗ್ಗೆನೇ ಒಂದು ವಿಡಿಯೋ ಮಾಡಿ ಫೇಸ್‌ಬುಕ್ ಅಲ್ಲಿ ಹಾಕಿ ಸರ್ಕಾರಕ್ಕೆ ಮನವಿ ಮಾಡ್ಯಾರೆ.
20 ದಿನದಿಂದ ಅಡ್ಕೆ ರೇಟ್ ಕಮ್ಮಿ ಆಗ್ತಾ ಉಂಟು, ಇದ್ರು ಮಧ್ಯೆ ದೇಶದಲ್ಲೇ ಹೆಚ್ ಅಡ್ಕೆ ಬೆಳಿಯೋದು ನಮ್ ಕರ್ನಾಟಕದಲ್ಲಿ, ಇಲ್ಲೇ ನೀವು ಗುಟ್ಕಾ ಬ್ಯಾನ್ ಮಾಡಿದ್ರೆ ಹೆಂಗ್, ರಾಜ್ಯದ 12 ಜಿಲ್ಲೇಲಿ ಲಕ್ಷಾಂತ್ರ ರೈತರು ಅಡ್ಕೆನೇ ನಂಬ್ಕಂಡ್ ಅದರೆ. ಹಿಂಗಿರ್ತ ಸಡನ್ ಆಗಿ ಬ್ಯಾನ್ ಮಾಡುದ್ರೆ ರೈತ್ರ ಜೀವ್ನ ಅತಂತ್ರ ಆಗ್ತದೆ. ದಯ್ವಿಟ್ಟು ಈತರ ಎಲ್ಲಾ ಮಡ್ಬೇಡಿ ಅಂತ ರಿಕ್ಚೆಸ್ಟ್ ಮಾಡ್ಯಾರೆ. ಅಡ್ಕೆ ಬೆಳೆಯೋ ಶಾಸಕರನೆಲ್ಲಾ ಕರ್ಕೊಂಡು ಸಿ ಎಂಗೆ ಹೋಗಿ ಕೇಳ್ಕೊಳೋ ಪ್ಲಾನ್ ಅಲ್ಲದರೆ
ಈ ಸತಿ ನೋಡಿದ್ರೆ ಅಡ್ಕೆ ಮರದ ಬುಡದಲ್ಲಿ ರಾಶಿ ರಾಶಿ ಅಡ್ಕೆ ಉದ್ರಿ ಬೀಳ್ತಾ ಇವೆ. ಆದ್ರೂ ಸಾಯ್ಲಿ, ಪಾಲಿಗೆ ಬಂದಿದ್ದು ಪಂಚಾಮೃತ’ ಅಂತ ಏನೋ ಮಾಡಿ ಔಷಧಿ ಹೊಡೆದು, ಚೇಣಿ ಕೊಡೋರು ಚೇಣಿ ಕೊಟ್ಟು, ಮನೆಯಲ್ಲೇ ಮಾಡೋರು ಮನೆಯಲ್ಲೇ ಅಡ್ಕೆ ಮಾಡ್ಕೊಂಡು ಇರೋಣ ಅಂತಿದ್ರೆ, ಸರ್ಕಾರ ಬ್ಯಾನ್ ಪಟಾಕಿ ಹಾರ್ಸಿ ತಲೆಬಿಸಿ ತಂದಿಟ್ಟಿದೆ. ಎಂತದೋ ದೇವರಿಟ್ಟಂಗೆ ಆಗ್ತದೆ, ಎಂತಾಗ್ತದೋ ಆಗ್ಲಿ.
ವರದಿ : ಪ್ರತಾಪ್ ತೀರ್ಥಹಳ್ಳಿ
