ಶಿವಮೊಗ್ಗ: ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಜನಿಸಿದ್ದ ನಾಲ್ಕೂ ಏಷ್ಯಾಟಿಕ್ ಸಿಂಹದ ಮರಿಗಳ ಸಾವು

ಹಂಚಿಕೊಳ್ಳಿ
WhatsApp Facebook X Telegram
Tyavarekoppa Safari Welcomes 5 New Animals, Including First White Tiger
Tyavarekoppa Safari Welcomes 5 New Animals, Including First White Tiger

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮದಲ್ಲಿ ಏಷ್ಯಾಟಿಕ್ ಸಿಂಹಿಣಿ ಸಾರಾ ಜನ್ಮ ನೀಡಿದ್ದ 4 ಸಿಂಹದ ಮರಿಗಳು ಮೃತಪಟ್ಟಿವೆ. ಸುಮಾರು 4 ದಿನಗಳ ಹಿಂದೆ ಮರಿಗಳು ಮೃತಪಟ್ಟಿದ್ದು, ಶನಿವಾರ ಈ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಮಲೆನಾಡು ಟುಡೆಗೆ ಲಯನ್ ಸಫಾರಿಯ ಮೂಲಗಳು ಅಧಿಕೃತವಾಗಿ ಮಾಹಿತಿ ದೃಢಪಡಿಸಿವೆ.

ಸಿಂಹಧಾಮದಲ್ಲಿ 4 ಮರಿಗಳು ಸಾವು

ತ್ಯಾವರೆಕೊಪ್ಪ ಮೃಗಾಲಯದಲ್ಲಿ ಏಷ್ಯಾಟಿಕ್ ಸಿಂಹಗಳ ಸಂತಾನೋತ್ಪತ್ತಿಗೆ ಮಾಡಲಾಗಿದ್ದ ಪ್ರಯತ್ನದ ನಡುವೆ ಈ ಘಟನೆ ಸಂಭವಿಸಿದ್ದು, ಹಿನ್ನಡೆಯುಂಟುಮಾಡಿದೆ. ಅಳಿವಿನಂಚಿನ ಪ್ರಭೇದಗಳ ಪಟ್ಟಿಯಲ್ಲಿರುವ ಏಷ್ಯಾಟಿಕ್ ಸಿಂಹಗಳ ಸಂತತಿ ವೃದ್ಧಿಯ ಉದ್ದೇಶದಿಂದ ಕಳೆದ ವರ್ಷ ಮಧ್ಯಪ್ರದೇಶದ ಇಂದೋರ್‌ನಿಂದ ಏಷ್ಯಾಟಿಕ್ ಸಿಂಹ ಶಿವ ಹಾಗೂ 5 ವರ್ಷದ ಸಿಂಹಿಣಿ ಸಾರಾ ಅವರನ್ನು ಶಿವಮೊಗ್ಗಕ್ಕೆ ತರಲಾಗಿತ್ತು. ಇದೇ ವೇಳೆ ಮೂರು ಹುಲಿಗಳನ್ನೂ ಇಂದೋರ್‌ನಿಂದ ಇಲ್ಲಿಗೆ ತರಲಾಗಿತ್ತು.

ಸಂತಾನೋತ್ಪತ್ತಿ ಉದ್ದೇಶದಿಂದ ಕರೆತರಲಾಗಿದ್ದ ಸಾರಾ ತ್ಯಾವರೆಕೊಪ್ಪದಲ್ಲಿ 4 ಮರಿಗಳಿಗೆ ಜನ್ಮ ನೀಡಿತ್ತು. ಶಿವಮೊಗ್ಗದಲ್ಲಿ ಏಷ್ಯಾಟಿಕ್ ಸಿಂಹಕ್ಕೆ ಮರಿಗಳು ಜನಿಸಿರುವುದು ಇದೇ ಮೊದಲ ಬಾರಿಯಾಗಿದ್ದರಿಂದ ಮೃಗಾಲಯದಲ್ಲಿ ಈ ಸಿಂಹಗಳ ಸಂತತಿ ವೃದ್ಧಿಯ ನಿರೀಕ್ಷೆ ಗರಿಗೆದರಿತ್ತು. ಆದರೆ, ಜನಿಸಿದ ನಾಲ್ಕೂ ಮರಿಗಳು ಬದುಕುಳಿಯಲಿಲ್ಲ.

ಈ ಕುರಿತು ಮಾಹಿತಿ ನೀಡಿರುವ ಮೃಗಾಲಯದ ಅಧಿಕಾರಿಗಳು, ಸಾರಾಗೆ ಇದು ಮೊದಲ ಗರ್ಭಧಾರಣೆಯಾಗಿದ್ದರಿಂದ ಮರಿಗಳ ಲಾಲನೆ ಪಾಲನೆಯ ಅರಿವು ಇರಲಿಲ್ಲ ಎಂದು ತಿಳಿಸಿದ್ದಾರೆ. ಹುಟ್ಟಿದ ಮರಿಗಳನ್ನು ಹೇಗೆ ಸ್ವಚ್ಛಗೊಳಿಸಬೇಕು ಹಾಗೂ ಅವುಗಳಿಗೆ ಹೇಗೆ ಹಾಲುಣಿಸಬೇಕು ಎಂಬ ತಾಯ್ತನದ ಅನುಭವದ ಕೊರತೆಯಿಂದಾಗಿ ಮರಿಗಳು ಮೃತಪಟ್ಟಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಒಮ್ಮೆ ಸೇರಿದ ನಂತರ ಮೂರು ತಿಂಗಳ ಗರ್ಭಧಾರಣೆಯ ಅವಧಿ ಇರುತ್ತದೆ. ಆದರೆ, ತಿಂಗಳ ಮಧ್ಯದಲ್ಲಿ ಪ್ರಾಣಿಯು ಮತ್ತೊಮ್ಮೆ ಸೇರಿದ ಕಾರಣ ವೈದ್ಯರು ಇದನ್ನು ಸೂಡೋ ಪ್ರೆಗ್ನೆನ್ಸಿ ಅಥವಾ ಮಿಥ್ಯ ಗರ್ಭಧಾರಣೆ ಎಂದು ಭಾವಿಸಿದ್ದರು. ಅಲ್ಲದೆ, ಪ್ರಾಣಿಯ ದೇಹದಲ್ಲಿ ಯಾವುದೇ ದೈಹಿಕ ಬದಲಾವಣೆಗಳು ಕಾಣಿಸದ ಕಾರಣ ಅದು ಗರ್ಭಿಣಿ ಎಂಬುದು ಅಧಿಕಾರಿಗಳಿಗೂ ನಿಖರವಾಗಿ ತಿಳಿದಿರಲಿಲ್ಲ. ಹುಟ್ಟಿದ ಮರಿಗಳಲ್ಲಿ ಸಾಕಷ್ಟು ಶಕ್ತಿ ಇರಲಿಲ್ಲ ಹಾಗೂ ತಾಯಿ ಪ್ರಾಣಿ ಅವುಗಳಿಗೆ ಹಾಲು ಕುಡಿಸದೆ ನಿರ್ಲಕ್ಷ್ಯ ಮಾಡಿದ್ದರಿಂದ ಮರಿಗಳು ಸಾವನ್ನಪ್ಪಿವೆ ಎಂದು ಗೊತ್ತಾಗಿದೆ.

ಪ್ರಾಣಿಗಳಲ್ಲಿ ಮೊದಲ ಗರ್ಭಧಾರಣೆಯ ವೇಳೆ ಈ ರೀತಿಯಾಗುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಈ ಹಿಂದೆ ಗದಗ ಮೃಗಾಲಯದಲ್ಲೂ ಪ್ರಾಣಿಯೊಂದು ಮೊದಲ ಬಾರಿ ಮರಿಗಳನ್ನು ನೋಡಿಕೊಳ್ಳಲು ವಿಫಲವಾಗಿತ್ತು. ಆನಂತರ ಎರಡನೇ ಬಾರಿಗೆ ಕೇವಲ ಒಂದೆರಡು ಮರಿಗಳನ್ನು ಉಳಿಸಿಕೊಂಡು, ಮೂರನೇ ಬಾರಿಗೆ ಮರಿಗಳನ್ನು ಸಂಪೂರ್ಣವಾಗಿ ನೋಡಿಕೊಳ್ಳಲು ಕಲಿತಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor