ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ : ಏಜ್ ಇಸ್ ಜಸ್ಟ್ ಎ ನಂಬರ್ ಎಂಬ ಮಾತು ಇತ್ತೀಚಿನ ದಿನಗಳಲ್ಲಿ ಸತ್ಯವಾಗುತ್ತಿದೆ. ಕಿರಿಯರು ಮಾಡಲು ಸಾಧ್ಯವಾಗದ ಕೆಲಸವನ್ನು ವಯಸ್ಕರು ಮಾಡುವುದು, ವಯಸ್ಕರು ಮಾಡಲಾಗದ ಕೆಲಸವನ್ನು ಕಿರಿಯರು ಸಣ್ಣ ವಯಸ್ಸಿನಲ್ಲಿಯೇ ಮಾಡುವುದಕ್ಕೆ ಸಾಮಾನ್ಯವಾಗಿ ಏಜ್ ಇಸ್ ಜಸ್ಟ್ ಎ ನಂಬರ್ ಎಂದು ಕರೆಯಲಾಗುತ್ತದೆ. ಇದರ ಬಗ್ಗೆ ನಾವು ಇಷ್ಟು ಟಿಪ್ಪಣಿ ಕೊಡುತ್ತಿದ್ದೇವೆ ಎಂದರೆ ಈ ಮ್ಯಾಟರ್ ದೊಡ್ಡದೇ ಇದೆ. ಇವತ್ತು ನಾವು ಹೇಳೋಕೆ ಹೊರಟಿರುವುದು ಬಾಲಕನೊಬ್ಬ ವಯಸ್ಸು ಮೀರಿದ ಸಾಧನೆಯೊಂದನ್ನು ಮಾಡಿ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಗೆ ತನ್ನ ಹೆಸರನ್ನು ನೋಂದಾಯಿಸಿರುವುದರ ಕುರಿತಾಗಿ.
ಹೌದು, ಶಿವಮೊಗ್ಗ ಜಿಲ್ಲೆ ಸೊರಬದ ಜಡೆ ಗ್ರಾಮದ ಕೃಷಿಕ ದಂಪತಿಯ ಪುತ್ರನೊಬ್ಬ ಸಣ್ಣ ವಯಸ್ಸಿನಲ್ಲಿಯೇ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ನೋಂದಾಯಿಸಿದ್ದಾನೆ. ಆತನ ಹೆಸರು ವಿರಾಟ್. ಜಡೆ ಗ್ರಾಮದ ಶಿವಕುಮಾರ ಸ್ವಾಮಿ ಹಾಗೂ ಆರ್. ಕೆ. ಅರುಣಾ ದಂಪತಿಯ ಪುತ್ರ. ಪ್ರಸ್ತುತ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, 7 ನೇ ತರಗತಿ ಓದುತ್ತಿದ್ದಾನೆ. ಈ ವಯಸ್ಸಿನಲ್ಲಿ ಆತ ಮಾಡಿದ ಸಾಧನೆ ಏನೆಂದು ನೋಡುವುದಾದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಅಂದರೆ 17 ನಿಮಿಷದಲ್ಲಿ ಫ್ರೀ ಸ್ಟೈಲ್ ಎಫ್ಪಿವಿ ಡ್ರೋನ್ ಅನ್ನು ಜೋಡಿಸುವ ಮೂಲಕ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದಾನೆ.
ಫ್ರೀ ಸ್ಟೈಲ್ ಎಫ್ಪಿವಿ ಡ್ರೋನ್ ಎಂದರೆ ಏನು?
ಅಯ್ಯೋ ಅದನ್ನೇನು ಜೋಡಿಸಬಹುದು ಬಿಡಿ ಎಂದು ನೀವು ಅಂದುಕೊಂಡಿರಬಹುದು. ಆದರೆ ಆತ ಜೋಡಿಸಿದ್ದು ಸಾಮಾನ್ಯ ಡ್ರೋನ್ ಅಲ್ಲ. ಅದು ಫ್ರೀ ಸ್ಟೈಲ್ ಎಫ್ಪಿವಿ ಡ್ರೋನ್. ಇದರ ಬಗ್ಗೆ ತಿಳಿದುಕೊಳ್ಳುವುದಾದರೆ, ಎಫ್ಪಿವಿ ಡ್ರೋನ್ ಎಂದರೆ ಪೈಲಟ್ ತನ್ನ ಕಣ್ಣಿಗೆ ವಿಶೇಷ ವಿಆರ್ ಗಾಗಲ್ಸ್ ಧರಿಸಿ, ಡ್ರೋನ್ ಕ್ಯಾಮೆರಾ ನೋಡುವ ದೃಶ್ಯವನ್ನು ನೇರವಾಗಿ ಕಾಣುತ್ತಾ ಹಾರಿಸುವ ತಂತ್ರಜ್ಞಾನ. ಫ್ರೀಸ್ಟೈಲ್ ಎಂದರೆ ಇದರಲ್ಲಿ ವೇಗಕ್ಕಿಂತ ಹೆಚ್ಚಾಗಿ ಗಾಳಿಯಲ್ಲಿ ಜಿಗಿಯುವುದು, ರೊಟೇಟ್ ಮಾಡುವುದು, ಕಟ್ಟಡ ಅಥವಾ ಮರಗಳ ನಡುವೆ ಸಾಹಸಮಯವಾಗಿ ಹಾರಿಸುವುದು ಮುಖ್ಯವಾಗಿರುತ್ತದೆ.
ಡ್ರೋನ್ ಜೋಡಣೆ ಎಷ್ಟು ಕಠಿಣ?
ಬಿಡಿಭಾಗಗಳಿರುವ ಎಫ್ಪಿವಿ ಫ್ರೀಸ್ಟೈಲ್ ಡ್ರೋನ್ ಕಿಟ್ ಅನ್ನು ಜೋಡಿಸುವುದು ಸುಲಭದ ಮಾತಲ್ಲ. ಇದರಲ್ಲಿ ಅತ್ಯಂತ ಸಣ್ಣ ಸಣ್ಣ ಸ್ಕ್ರೂಗಳನ್ನು ಬಿಗಿಗೊಳಿಸುವುದು, ಮದರ್ಬೋರ್ಡ್ಗೆ ವೈರ್ಗಳನ್ನು ಬೆಸುಗೆ ಹಾಕುವುದು ಹಾಗೂ ಕ್ಯಾಮೆರಾ ಸೆಟ್ಟಿಂಗ್ಸ್ ಮಾಡುವುದು ಸೇರಿರುತ್ತದೆ. ಸಾಮಾನ್ಯವಾಗಿ ನುರಿತ ತಜ್ಞರಿಗೇ ಇಷ್ಟೆಲ್ಲಾ ಮಾಡಿ ಡ್ರೋನ್ ಸಿದ್ಧಪಡಿಸಲು 2 ರಿಂದ 3 ಗಂಟೆ ಸಮಯ ಬೇಕಾಗುತ್ತದೆ. ಆದರೆ ವಿರಾಟ್, 31 ಡಿಸೆಂಬರ್ 2025 ರಂದು ಈ ಎಲ್ಲಾ ಕೆಲಸಗಳನ್ನು ಕೇವಲ 17 ನಿಮಿಷ 18 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದಾನೆ.
17 ನಿಮಿಷಗಳ ಅವಧಿಯಲ್ಲಿ ಕಾರ್ಬನ್ ಫೈಬರ್ ಬಾಡಿ ಮತ್ತು ರೆಕ್ಕೆಗಳನ್ನುಸ್ಕ್ರೂ ಮಾಡುವುದು, ನಾಲ್ಕೂ ಮೂಲೆಗಳಿಗೆ ಬ್ರಷ್ಲೆಸ್ ಮೋಟರ್ಗಳನ್ನು ಬಿಗಿಗೊಳಿಸುವುದು, ಫ್ಲೈಟ್ ಕಂಟ್ರೋಲರ್ಹಾಗೂ ಬೋರ್ಡ್ಗೆ ವೈರಿಂಗ್-ಸೋಲ್ಡರಿಂಗ್ ಮಾಡುವುದು, ಕ್ಯಾಮೆರಾ ಮತ್ತು ರಿಸೀವರ್ ಅನ್ನು ನಿಖರವಾಗಿ ಫ್ರೇಮ್ ಒಳಗೆ ಕೂರಿಸುವುದು ಸೇರಿದಂತೆ ಎಲ್ಲಾ ಹಂತಗಳನ್ನು ಮಿಂಚಿನ ವೇಗದಲ್ಲಿ ಪೂರ್ಣಗೊಳಿಸಿ ಸೈ ಎನಿಸಿಕೊಂಡಿದ್ದಾನೆ.
ಅಕ್ಟೋಬರ್ನಲ್ಲಿ ಈ ದಾಖಲೆ ಮುರಿಯಬೇಕೆಂದಿದ್ದೇನೆ: ವಿರಾಟ್
ಈ ಕುರಿತಾಗಿ ಮಾತನಾಡಿದ ವಿರಾಟ್ ಎಸ್, “ನನಗೆ ಟೆಕ್ನಿಕಲ್ ವಿಚಾರದಲ್ಲಿ ಮೊದಲಿನಿಂದಲೂ ಬಹಳ ಆಸಕ್ತಿ ಇತ್ತು. ನಾನು ಬೆಂಗಳೂರಿನ ಶಾಲೆಯಲ್ಲಿ 5 ನೇ ತರಗತಿಗೆ ಸೇರಿದಾಗ ಅಲ್ಲಿ ರೋಬೋಟಿಕ್ಸ್ ಕ್ಲಾಸ್ಗಳು ನಡೆಯುತ್ತಿತ್ತು. ಅಲ್ಲಿ ಇದರ ಬಗ್ಗೆ ತಿಳಿಸಿಕೊಟ್ಟಾಗ ನನಗೆ ಆಸಕ್ತಿ ಮೂಡಿತ್ತು. ನಂತರ ಮೊಬೈಲ್ನಲ್ಲಿ ಅದರ ಬಗ್ಗೆ ರಿಸರ್ಚ್ ಮಾಡಿ ತಿಳಿದುಕೊಂಡು, ಪೋಷಕರ ಪ್ರೋತ್ಸಾಹದಿಂದ ಈ ಸಾಧನೆ ಮಾಡಿದ್ದೇನೆ. ಈ ಸಾಧನೆ ನನಗೆ ಖುಷಿ ತಂದಿದೆ. ಮುಂದಿನ ಅಕ್ಟೋಬರ್ ದಸರಾ ಸಮಯದಲ್ಲಿ ನನ್ನ ಈ ಇಂಟರ್ನ್ಯಾಷನಲ್ ವರ್ಲ್ಡ್ ರೆಕಾರ್ಡ್ ದಾಖಲೆ ನಾನೇ ಮುರಿಯಬೇಕೆಂದಿದ್ದೇನೆ, ಅದಕ್ಕೆ ಎಲ್ಲಾ ರೀತಿಯ ಸಿದ್ಧತೆಯನ್ನು ನಡೆಸುತ್ತಿದ್ದೇನೆ ಎಂದರು.
ಮೊದಲಿನಿಂದಲೂ ಟೆಕ್ನಿಕಲ್ ವಿಚಾರದಲ್ಲಿ ಆತನಿಗೆ ಆಸಕ್ತಿ ಹೆಚ್ಚಿತ್ತು: ಆರ್. ಕೆ. ಅರುಣಾ (ತಾಯಿ)
ಮಗನ ಸಾಧನೆ ಕುರಿತಾಗಿ ತಾಯಿ ಅರುಣಾ ಆರ್. ಕೆ. ಮಾತನಾಡಿ, “ಆತನಿಗೆ ಮೊದಲಿನಿಂದಲೂ ಟೆಕ್ನಿಕಲ್ ವಿಚಾರವಾಗಿ ಬಹಳ ಆಸಕ್ತಿ ಇತ್ತು. ಆತನಿಗೆ ಏನೇ ಆಟಿಕೆಗಳನ್ನು ಕೊಡಿಸಿದರೂ ಸಹ ಅದನ್ನು ಓಪನ್ ಮಾಡಿ ಅದರಲ್ಲಿ ಏನಾದರೂ ಕ್ರಿಯೇಟಿವ್ ಆಗಿ ಮಾಡುತ್ತಿದ್ದ. ನಾನು ಮೊದಲಿನಿಂದಲೂ ಓದಿನ ಕಡೆ ಗಮನ ಕೊಡು ಎಂದು ಹೇಳುತ್ತಿದ್ದೆ. ಓದಿನೊಡನೆ ಈ ಸಾಧನೆ ಮಾಡಿದ್ದು ನಮಗೆ ಬಹಳ ಹೆಮ್ಮೆ ಇದೆ” ಎಂದರು.
ಮಧು ಬಂಗಾರಪ್ಪರಿಂದ ಬಾಲಕನಿಗೆ ಸನ್ಮಾನ
ಈ ಮಾಹಿತಿಯನ್ನು ತಿಳಿದ ತಕ್ಷಣವೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಾಲಕನ ಹಿನ್ನೆಲೆಯನ್ನು ಕಲೆಹಾಕಿ, ಆತನನ್ನು ಹಾಗೂ ಪೋಷಕರನ್ನು ಕರೆಸಿ ಸನ್ಮಾನ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಸಚಿವರು, 17 ನಿಮಿಷದಲ್ಲಿ ಫ್ರೀಸ್ಟೈಲ್ ಡ್ರೋನ್ ಜೋಡಿಸುವುದು ಕಷ್ಟಸಾಧ್ಯದ ಮಾತು. ಕೇವಲ 12 ವರ್ಷದ ವಯಸ್ಸಿನಲ್ಲಿ ಇಂಥ ಸಾಧನೆ ಮಾಡಿದ ವಿದ್ಯಾರ್ಥಿಗಳು ಸಿಗುವುದು ವಿರಳ. ಆಧುನಿಕ ಜಗತ್ತಿನಲ್ಲಿ ವಿರಾಟ್ ವಿದ್ಯಾರ್ಥಿಯ ಕೊಡುಗೆ ಅಪಾರವಾಗಿದ್ದು, ಮುಂದೆಯೂ ಇಂಥ ಅನ್ವೇಷಣೆಯಿಂದ ಇನ್ನಷ್ಟು ಸಾಧನೆ ಮಾಡಲಿ ಎಂದು ಆಶಿಸುತ್ತೇನೆ. ಅವರ ಸಾಧನೆ ತಾಲೂಕಿನ ಹೆಮ್ಮೆಯೂ ಹೌದು” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹೀಗೆ 7 ನೇ ತರಗತಿಯ ಬಾಲಕ, ತಜ್ಞರೇ ಸುಲಭವಾಗಿ ಮಾಡಲು ಸಾಧ್ಯವಾಗದ ಕಠಿಣ ಕೆಲಸವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಮಾಡಿ ಸಾಧಿಸಿರುವುದು ನಿಜಕ್ಕೂ ಪ್ರಶಂಸನೀಯ. ಭವಿಷ್ಯದಲ್ಲಿ ತನ್ನದೇ ಹೆಸರಿನಲ್ಲಿರುವ ಈ ವಿಶ್ವ ದಾಖಲೆಯನ್ನು ತಾನೇ ಮುರಿಯಬೇಕೆಂಬ ಆತನ ಕನಸು ಮತ್ತು ತುಡಿತ ನಿಜವಾದ ಸಾಧಕರ ಲಕ್ಷಣ. ಈ ಸಾಧನೆ ಶಿವಮೊಗ್ಗ ಜಿಲ್ಲೆಗೆಷ್ಟೇ ಅಲ್ಲದೆ ಇಡೀ ಕರ್ನಾಟಕ ರಾಜ್ಯಕ್ಕೇ ಹೆಮ್ಮೆಯ ವಿಷಯ. ಬಾಲಕ ವಿರಾಟ್ ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಹೊಸ ದಾಖಲೆಗಳನ್ನು ನಿರ್ಮಿಸಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದೇ ನಮ್ಮ ಮಲೆನಾಡು ಟುಡೇ ಬಳಗದ ಆಶಯ.
ವರದಿ ಪ್ರತಾಪ್ ತೀರ್ಥಹಳ್ಳಿ
