ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಸುರಿದ ಮಳೆಗೆ ರೈಲ್ವೆ ಹಳಿಯ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ, ತಾಳಗುಪ್ಪದಿಂದ ಬೆಂಗಳೂರಿನತ್ತ ಹೊರಟಿದ್ದ ಪ್ರಯಾಣಿಕರ ರೈಲು ಮಾರ್ಗಮಧ್ಯದಲ್ಲೇ ಸ್ಥಗಿತಗೊಂಡಿದೆ.
ಬೆಳಗಿನ ಜಾವ 5.20ಕ್ಕೆ ತಾಳಗುಪ್ಪದಿಂದ ತೆರಳಿದ್ದ ರೈಲು, ನಿಗದಿತ ಸಮಯದಂತೆ ಬೆಳಿಗ್ಗೆ 7 ಗಂಟೆಗೆ ಶಿವಮೊಗ್ಗ ಹಾಗೂ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪಬೇಕಿತ್ತು. ಆದರೆ, ಅರಸಾಳು ಸಮೀಪದ ಹಳಿಯ ಮೇಲೆ ಮರ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ, ಚಾಲಕರು ಮತ್ತು ಅಧಿಕಾರಿಗಳು ಸಮಯಪ್ರಜ್ಞೆ ಮೆರೆದು ಆನೆಕೆರೆ ಹಾಗೂ ನೆವಟೂರು ಗ್ರಾಮಗಳ ಮಧ್ಯ ಭಾಗದಲ್ಲಿ ರೈಲನ್ನು ನಿಲ್ಲಿಸಿ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.

ಗೌರಿ-ಗಣೇಶ ಹಬ್ಬದ ಸಾಲು ಸಾಲು ರಜೆಗಳನ್ನು ಮುಗಿಸಿ ಮತ್ತೆ ತಮ್ಮ ಕೆಲಸ-ಕಾರ್ಯಗಳಿಗೆ ಬೆಂಗಳೂರಿಗೆ ತೆರಳುತ್ತಿದ್ದ ಉದ್ಯೋಗಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ದಿಢೀರ್ ರೈಲು ನಿಂತಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಷಯ ತಿಳಿದ ತಕ್ಷಣವೇ ರೈಲ್ವೆ ಹಾಗೂ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಮರ ತೆರವುಗೊಳಿಸುವ ಕಾರ್ಯಾಚರಣೆ ಚುರುಕಿನಿಂದ ಸಾಗಿದೆ.
