ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ರಾಜ್ಯ ರೈತ ಸಂಘ ಹಾಗೂ ಭದ್ರಾ ಅಚ್ಚುಕಟ್ಟುದಾರರ ಹಿತರಕ್ಷಣಾ ವೇದಿಕೆ ವತಿಯಿಂದ ಭದ್ರಾ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಇಂದು ಮಲಗೊಪ್ಪದ ನಾಡಕಚೇರಿ ಎದುರು ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖರಾದ ಕೆ.ಟಿ. ಗಂಗಾಧರ್ ತಿಳಿಸಿದರು.
ಈ ಕುರಿತು ಇಂದು ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಭದ್ರಾ ಜಲಾಶಯವು ಮಧ್ಯ ಕರ್ನಾಟಕದ ಪ್ರಮುಖ ಜಲಾಶಯವಾಗಿದ್ದು, 4 ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ಆಶ್ರಯವಾಗಿದೆ. ಆದರೆ ಈ ಬಾರಿ ಮಳೆಯ ಕೊರತೆಯಿಂದಾಗಿ ಜಲಾಶಯ ಸಂಪೂರ್ಣವಾಗಿ ತುಂಬಲಿಲ್ಲ. ಪ್ರಸ್ತುತ 178 ಅಡಿ ನೀರು ಮಾತ್ರ ಶೇಖರಣೆಯಾಗಿದೆ. ಈ ಬಾರಿ ಯಾರೂ ಸಹ ಜಲಾಶಯವನ್ನು ನಂಬಿ ಬೆಳೆ ಬೆಳೆಯಬೇಡಿ ಎಂದು ಕರ್ನಾಟಕ ಸರ್ಕಾರ ಹೇಳಿತ್ತು. ನಂತರ ಸಚಿವರು ಹಾಗೂ ಶಾಸಕರು ನಮ್ಮನ್ನು ಭೇಟಿ ಮಾಡಿ ನೀರನ್ನು ಹೇಗೆ ಬಳಕೆ ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಿದ್ದರು ಎಂದರು.
ಹಾಗೆಯೇ ಈ ಬಾರಿ ಮುಖ್ಯಮಂತ್ರಿಗಳು ಕುಡಿಯುವ ನೀರಿಗೂ ಸಹ ಹಾಹಾಕಾರ ಉಂಟಾಗಲಿದೆ. ಭತ್ತದ ಬೆಳೆಯನ್ನು ತ್ಯಾಗ ಮಾಡಿ ಎಂದು ಹೇಳಿದ್ದರು. ಆದರೆ ತೆಂಗು ಮತ್ತು ಅಡಕೆಯಂತಹ ಬಹುವಾರ್ಷಿಕ ಬೆಳೆಗಳಿಗೆ ಇದು ಗಂಭೀರ ಸಮಸ್ಯೆಯಾಗಲಿದೆ. ನಾವು ಭೂಮಿಗೆ ವಿರಾಮ ಕೊಡುವ ದೃಷ್ಟಿಯಿಂದ ಅದನ್ನು ಒಪ್ಪಿಕೊಂಡಿದ್ದೆವು. ಆದರೆ ಈಗ ಮಳೆಯ ಮುನ್ಸೂಚನೆಯೇ ಇಲ್ಲದಿರುವುದರಿಂದ ಅಡಿಕೆ ಬೆಳೆಗಾರರಿಗೆ ಬಹಳ ತೊಂದರೆಯಾಗಲಿದೆ. ಕನಿಷ್ಠ 15 ದಿನಗಳ ಕಾಲ ನಾಲೆಗಳಿಗೆ ನೀರು ಹರಿಸಬೇಕು. ಆದ್ದರಿಂದ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೆ ಕೂಡಲೇ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಮುಂದಿನ ಮುಂಗಾರಿನವರೆಗೆ ನಾವು ಯಾವ ರೀತಿ ಅಡಿಕೆ ತೋಟಗಳನ್ನು ಕಾಪಾಡಿಕೊಳ್ಳಲು ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಸರ್ಕಾರ ಹೇಳಬೇಕು. ಇನ್ನೆರಡು ದಿನಗಳೊಳಗೆ ನಮಗೆ ಅದರ ಕುರಿತಾಗಿ ಉತ್ತರ ನೀಡಬೇಕು. ಇದರಿಂದ ಅಡಿಕೆಯನ್ನು ನಂಬಿ ಬದುಕುತ್ತಿರುವ ರೈತರಿಗೆ ನಿರಾಳವಾಗುತ್ತದೆ. ಇನ್ಮುಂದೆ ವಿದ್ಯುತ್‌ನಿಂದ ನಮಗೆ ಸಾಂಪ್ರದಾಯಿಕ ನೀರು ಸಿಗುತ್ತದೆ ಎಂಬ ಭರವಸೆಯಿಲ್ಲ. ಕೇಂದ್ರ ಸರ್ಕಾರದ ನಾಯಕರೇ, ನೀವು ದೊಡ್ಡ ಶ್ರೀಮಂತರ ಸಾಲವನ್ನು ಮನ್ನಾ ಮಾಡುತ್ತಿದ್ದೀರಿ, ಅದೇ ರೀತಿ ಪ್ರತಿ ರೈತರಿಗೂ ಬೋರ್‌ವೆಲ್ ಕೊರೆಸಿ, ಮೋಟಾರ್ ಕೊಡಿಸಿ, ಸೋಲಾರ್ ಜೋಡಿಸಿಕೊಡುವ ರೀತಿಯಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಡಾ ಕಚೇರಿಯಲ್ಲಿ ನಾವು ಸಭೆಯನ್ನು ನಡೆಸುತ್ತೇವೆ. ಅಧಿಕಾರಿಗಳು ನಾವು ನಿಮ್ಮ ಜೊತೆ ಇದ್ದೇವೆ ಎಂದು ಭರವಸೆ ನೀಡಿದರೆ ಹೋರಾಟ ಮಾಡುವುದಿಲ್ಲ. ಒಂದು ವೇಳೆ ಯಾವುದೇ ಭರವಸೆ ನೀಡದಿದ್ದರೆ ಸರ್ಕಾರಕ್ಕೆ 2 ದಿನಗಳ ಗಡುವು ನೀಡಿ, ಇವತ್ತಿ( ಸೆಪ್ಟೆಂಬರ್15) ನಿಂದ ಮಲಗೊಪ್ಪದಿಂದ ಭದ್ರಾ ನಾಲೆಯವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ಎಚ್ಚರಿಸಿದರು.
