ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ವಾಹನವನ್ನು ಖರೀದಿಸಿದ ಗ್ರಾಹಕರ ಹೆಸರಿಗೆ ಮಾಲಿಕತ್ವ ವರ್ಗಾಯಿಸಿಕೊಡದೆ, ಸೂಕ್ತ ಮಾಹಿತಿ ನೀಡದೆ ವಾಹನವನ್ನು ಸೀಜ್ ಮಾಡಿ ಪಡೆದುಕೊಂಡು ಸೇವಾ ನ್ಯೂನತೆ ಎಸಗಿದ ಪ್ರಕರಣದಲ್ಲಿ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ಗೆ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಒಟ್ಟು ₹1.10 ಲಕ್ಷ ಪರಿಹಾರ ಹಾಗೂ ದೂರು ವೆಚ್ಚ ಪಾವತಿಸುವಂತೆ ಆದೇಶಿಸಿದೆ.
ಶಿವಮೊಗ್ಗ ತಾಲೂಕಿನ ಕುಸ್ಕೂರಿನ ನಿಖಿಲ್ ಆರ್. ಅವರು ಶಿವಮೊಗ್ಗ ನಗರದ ಶಂಕರ ಮಠ ರಸ್ತೆಯಲ್ಲಿರುವ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ವಿರುದ್ಧ ವಕೀಲರ ಮೂಲಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಗ್ರಾಹಕರ ಆಯೋಗ ಆದೇಶದ ವಿವರ
ನಿಖಿಲ್ ಆರ್. ಅವರು ಫಯಾಜ್ ಬಿನ್ ಬಾಬು ಎಂಬುವರ ಹೆಸರಿನಲ್ಲಿದ್ದ ಐಷರ್ ಪ್ರೊ 3015 ಸರಕು ಸಾಗಣೆ ವಾಹನವನ್ನು ಖರೀದಿಸಿದ್ದರು. KA-51-AF-9323 ನೋಂದಣಿ ಸಂಖ್ಯೆಯ ಈ ವಾಹನ ಖರೀದಿಗಾಗಿ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನಿಂದ ₹13,50,000 ಸಾಲ ಮಂಜೂರಾಗಿತ್ತು. ಈ ಸಾಲವನ್ನು 48 ಕಂತುಗಳಲ್ಲಿ ಮರುಪಾವತಿಸಲು ನಿಗದಿಪಡಿಸಲಾಗಿತ್ತು.
ವಾಹನವನ್ನು ಆರ್ಟಿಒ ಮೂಲಕ ನಿಖಿಲ್ ಆರ್. ಅವರ ಹೆಸರಿಗೆ ವರ್ಗಾಯಿಸಲು ಅಗತ್ಯವಿರುವ ವೆಚ್ಚವನ್ನು ಬ್ಯಾಂಕ್ ಪಡೆದುಕೊಂಡಿತ್ತು. ಆದರೂ ವಾಹನದ ದಾಖಲೆಗಳನ್ನು ದೂರುದಾರರ ಹೆಸರಿಗೆ ವರ್ಗಾಯಿಸದೆ ಬ್ಯಾಂಕ್ ವಿಳಂಬ ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ವಾಹನವನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡದ ಕಾರಣ ಅದನ್ನು ಸರಿಯಾಗಿ ಬಳಸಲು ಸಾಧ್ಯವಾಗದಿದ್ದರೂ ನಿಖಿಲ್ ಅವರು ₹90,000 ಇಎಂಐ ಪಾವತಿಸಿದ್ದರು. ಇದರ ನಡುವೆಯೇ ಸಾಲದ ಕಂತು ಪಾವತಿಯಾಗಿಲ್ಲ ಎಂಬ ಕಾರಣ ಮುಂದಿಟ್ಟ ಬ್ಯಾಂಕ್, 27/01/2026ರಂದು ದೂರುದಾರರ ಮನೆಯ ಬಳಿ ನಿಲ್ಲಿಸಲಾಗಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿತ್ತು.
ವಾಹನವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಡದಿರುವುದು ಹಾಗೂ ಆ ಬಳಿಕ ಅದನ್ನೇ ವಶಕ್ಕೆ ಪಡೆದಿರುವ ಬ್ಯಾಂಕ್ ಕ್ರಮವನ್ನು ಪ್ರಶ್ನಿಸಿ ನಿಖಿಲ್ ಆರ್. ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು, ಪ್ರಕರಣದಲ್ಲಿ ಬ್ಯಾಂಕ್ನಿಂದ ಸೇವಾ ನ್ಯೂನತೆ ಉಂಟಾಗಿದೆ ಎಂಬುದನ್ನು ಎತ್ತಿಹಿಡಿದಿದೆ.
ವಾಹನವನ್ನು ವಶದಲ್ಲಿಟ್ಟುಕೊಳ್ಳದೆ, ಅದರ ದಾಖಲೆಗಳನ್ನು ದೂರುದಾರ ನಿಖಿಲ್ ಆರ್. ಅವರ ಹೆಸರಿಗೆ ವರ್ಗಾಯಿಸಿ ವಾಹನವನ್ನು ಅವರ ವಶಕ್ಕೆ ನೀಡಬೇಕು ಎಂದು ಆಯೋಗ ಆದೇಶಿಸಿದೆ.
ವಾಹನದ ಹೆಸರು ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಾಲದ ಇಎಂಐ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ನ ಸುತ್ತೋಲೆ ಹಾಗೂ ಅನ್ವಯಿಸುವ ನಿಯಮಾವಳಿಗಳ ಪ್ರಕಾರ ಮರುನಿಗದಿಪಡಿಸಬೇಕು ಎಂದು ಬ್ಯಾಂಕ್ಗೆ ಸೂಚಿಸಲಾಗಿದೆ.
ದೂರುದಾರರಿಗೆ ಉಂಟಾದ ಮಾನಸಿಕ ಕಿರುಕುಳಕ್ಕೆ ಪರಿಹಾರವಾಗಿ ₹1,00,000 ಹಾಗೂ ದೂರು ಸಲ್ಲಿಸಲು ತಗಲಿದ ಖರ್ಚುವೆಚ್ಚಕ್ಕಾಗಿ ₹10,000 ಸೇರಿ ಒಟ್ಟು ₹1,10,000 ಪಾವತಿಸುವಂತೆ ಆಯೋಗ ಆದೇಶಿಸಿದೆ. ಈ ಮೊತ್ತವನ್ನು ಆದೇಶದ ದಿನಾಂಕದಿಂದ 45 ದಿನಗಳೊಳಗೆ ಪಾವತಿಸಬೇಕು. ನಿಗದಿತ ಅವಧಿಯಲ್ಲಿ ಹಣ ಪಾವತಿಸಲು ವಿಫಲವಾದರೆ, ಪೂರ್ಣ ಮೊತ್ತ ಪಾವತಿಯಾಗುವವರೆಗೆ ವಾರ್ಷಿಕ ಶೇ.10ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತದೆ ಎಂದು ಜಿಲ್ಲಾ ಗ್ರಾಹಕರ ಆಯೋಗವು ಸೆಪ್ಟೆಂಬರ್ 08ರಂದು ನೀಡಿದ ಆದೇಶದಲ್ಲಿ ತಿಳಿಸಿದೆ.
