ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದ ದೀನದಯಾಳು ರಸ್ತೆಯಿಂದ ಕುವೆಂಪು ರಸ್ತೆಗೆ ಸೇರುವ ಟಿ-ಜಂಕ್ಷನ್‌ನಲ್ಲಿ ಬಹುದಿನಗಳಿಂದ ಪೀಕ್ ಅವರ್ಸ್ ಸಮಯದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಉಂಟಾಗುತ್ತಿದ್ದ ತೊಂದರೆ ನಿವಾರಿಸುವಲ್ಲಿ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಇಲ್ಲಿ ಅಡ್ಡಲಾಗಿದ್ದ ಮರವನ್ನ ಕಡಿದು ಸಂಚಾರ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ಮಾಡಲಾಗಿದೆ.
ಈ ಟಿ-ಜಂಕ್ಷನ್‌ನಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಮರ ಹಾಗೂ ಬೋರ್ಡ್‌ಗಳನ್ನು ತೆರವುಗೊಳಿಸಲಾಗಿದೆ. ಸಾರ್ವಜನಿಕರು, ಶಿವಮೊಗ್ಗ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಪರಿಸರವಾದಿಗಳು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಈ ಕಾರ್ಯ ಕೈಗೊಳ್ಳಲಾಗಿದೆ.
ಟಿ-ಜಂಕ್ಷನ್‌ನಲ್ಲಿ ಮರ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಅದಕ್ಕೆ ಪರ್ಯಾಯವಾಗಿ 20 ಸಸಿಗಳನ್ನು ನೆಡಲಾಗಿದೆ. ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಆವರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ಸಹಕಾರದೊಂದಿಗೆ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ
ಇದರೊಂದಿಗೆ ದೀನದಯಾಳು ರಸ್ತೆ ಮತ್ತು ಕುವೆಂಪು ರಸ್ತೆ ಸೇರುವ ಟಿ-ಜಂಕ್ಷನ್‌ನಲ್ಲಿ ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ರಸ್ತೆಗೆ ಅಗತ್ಯ ಕಾಮಗಾರಿಯನ್ನೂ ನಡೆಸಲಾಗಿದೆ ಎಂದು ತಿಳಿಸಿರುವ ಪೊಲೀಸರು ಈ ಸಂಬಂದ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನ ಅಪ್ಲೋಡ್ ಮಾಡಿದ್ದಾರೆ.
ಜ್ಯೋತಿ ಗಾರ್ಡನ್ ಸಮೀಪದ ಈ ಎರಿಯಾದಲ್ಲಿ ಪೀಕ್ ಅವರ್ಸ್ ಸಮಯದಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ವೆಹಿಕಲ್ ಕಟ್ ಆಗದೇ, ಜಾಮ್ ಆಗುತ್ತಿತ್ತು. ಅಲ್ಲದೆ ಆ ಕಡೆ ಈ ಕಡೆ ಎರಡು ಕಡೆಗೆ ಹೋಗುವವರಿಗೆ ಸಮಸ್ಯೆಯಾಗಿ ಕೊನೆಗೆ ಜಗಳಗಳು ಆಗುತ್ತಿದ್ದವು.
ಇದೀಗ ಸಂಬಂಧಪಟ್ಟ ಇಲಾಖೆಗಳು, ಸ್ಥಳೀಯರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಸಮಸ್ಯೆಯನ್ನು ಪರಿಹರಿಸಲಾಗಿದ್ದು, ವಾಹನಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಟ್ರಾಫಿಕ್ ಪೊಲೀಸ್ ಇಲಾಖೆ ಹೇಳಿದೆ
