Thirthahalli ತೀರ್ಥಹಳ್ಳಿ : ಯೂಟ್ಯೂಬ್ನಲ್ಲಿ ಲೋನ್ ನೀಡುವ ಜಾಹೀರಾತೊಂದನ್ನು ನಂಬಿ ತೀರ್ಥಹಳ್ಳಿಯ ರೈತರೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗದ ಸಿ ಇ ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ : ಮಳೆ ಆರ್ಭಟ, ತುಂಗಾ ಜಲಾಶಯದ ಒಳಹರಿವು ಹೊರಹರಿವು ಎಷ್ಟಿದೆ ಇವತ್ತು ?
Thirthahalli ಘಟನೆ ವಿವರ
ಜೂನ್ 02 ರಂದು ದೂರುದಾರ ರೈತ ಯೂಟ್ಯೂಬ್ ನೋಡುತ್ತಿದ್ದಾಗ ಕಾವೇರಿ ಲೋನ್ ಸರ್ವೀಸ್ ಹಾಗೂ ಧನಿ ಫೈನಾನ್ಸ್ ಎಂಬ ಸಂಸ್ಥೆಗಳು ಲೋನ್ ನೀಡುವ ಬಗ್ಗೆ ಜಾಹೀರಾತು ವಿಡಿಯೋ ಕಾಣಿಸಿದೆ. ಲೋನ್ ಅವಶ್ಯಕತೆ ಇದ್ದಿದ್ದರಿಂದ ದೂರುದಾರರು ಲಿಂಕ್ ಕ್ಲಿಕ್ ಮಾಡಿದಾಗ, ಅವರ ವಾಟ್ಸಾಪ್ ಸಂಖ್ಯೆಗೆ ವಿವಿಧ ನಂಬರ್‌ಗಳಿಂದ ಮೆಸೇಜ್ ಬಂದಿದೆ. ಸಾಲ ನೀಡುವುದಾಗಿ ನಂಬಿಸಿದ ಆರೋಪಿಗಳು ಪ್ರೊಸೆಸಿಂಗ್ ಫೀ, ಟ್ಯಾಕ್ಸ್ ಹಾಗೂ ಸರ್ವಿಸ್ ಚಾರ್ಜ್ ನೆಪದಲ್ಲಿ ಹಣ ಪಾವತಿಸುವಂತೆ ತಿಳಿಸಿದ್ದಾರೆ. ಜುಲೈ 14 ರಂದು ಲೋನ್ ಸಾಂಕ್ಷನ್ ಆಗಿರುವ ಬಗ್ಗೆ ನಕಲಿ ಅಗ್ರಿಮೆಂಟ್ ಕಾಪಿಯನ್ನು ಸಹ ಕಳುಹಿಸಿಕೊಟ್ಟಿದ್ದಾರೆ. ಇದನ್ನು ನಂಬಿದ ರೈತರು ಜೂನ್ 02 ರಿಂದ ಆಗಸ್ಟ್ 06 ರವರೆಗೆ ತಮ್ಮ ಬ್ಯಾಂಕ್ ಖಾತೆಗಳಿಂದ ವಂಚಕರು ನೀಡಿದ ವಿವಿಧ ಖಾತೆಗಳಿಗೆ ಒಟ್ಟು 12,50,078 ಹಣವನ್ನು ವರ್ಗಾವಣೆ ಮಾಡಿದ್ದಾರೆ.
ನಂತರ ಯಾವುದೇ ಲೋನ್ ನೀಡದೇ ಮತ್ತೆ ಹಣ ವರ್ಗಾವಣೆ ಮಾಡುವಂತೆ ಹೇಳಿದಾಗ ದೂರುದಾರರಿಗೆ ಅನುಮಾನ ಬಂದು ಪರಿಚಯಸ್ಥರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ತಿಳಿದುಬಂದಿದೆ. ಈ ರೀತಿಯಾಗಿ ಕಾವೇರಿ ಲೋನ್ ಸರ್ವೀಸ್ ಮತ್ತು ಧನಿ ಫೈನಾನ್ಸ್ ಹೆಸರಿನಲ್ಲಿ ನಟಿಸಿ, ಸಾಲ ಕೊಡಿಸುವುದಾಗಿ ನಂಬಿಸಿ 12,50,078 ರೂ. ಹಣವನ್ನು ವಂಚಿಸಿದವರನ್ನು ಪತ್ತೆ ಮಾಡಿ, ತಮ್ಮ ಹಣವನ್ನು ವಾಪಸ್ಸು ಕೊಡಿಸುವಂತೆ ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
