ಸೌಜನ್ಯ ಪ್ರಕರಣದ ಮರುತನಿಖೆಗೆ ಐಜಿಪಿ ಎನ್. ಶಶಿಕುಮಾರ್ ನೇತೃತ್ವದ ಐವರು ಅಧಿಕಾರಿಗಳ ಎಸ್‌ಐಟಿ ರಚನೆ!

ಹಂಚಿಕೊಳ್ಳಿ
WhatsApp Facebook X Telegram
Soujanya Case Karnataka Forms SIT Led by IGP N Shashikumar for Fresh Probe
Soujanya Case Karnataka Forms SIT Led by IGP N Shashikumar for Fresh Probe

ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪೊಲೀಸ್ ಮಹಾನಿರೀಕ್ಷಕ ಎನ್. ಶಶಿಕುಮಾರ್ ನೇತೃತ್ವದಲ್ಲಿ ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ.

ಸೌಜನ್ಯ ಪ್ರಕರಣದ ಮರುತನಿಖೆ ಆರಂಭ

ಸೌಜನ್ಯ ಪ್ರಕರಣದ ಮರುತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಅಂತಿಮವಾಗಿ, ಕಳೆದ ಸೆಪ್ಟೆಂಬರ್ 21ರಂದು ಹೊಸದಾಗಿ ತನಿಖೆ ನಡೆಸಲು ಆದೇಶಿಸಿತ್ತು. ಇದಕ್ಕಾಗಿ ವಿಶೇಷ ತನಿಖಾ ತಂಡ ರಚಿಸುವಂತೆಯೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೆಪ್ಟೆಂಬರ್ 24ರಂದು ಎಸ್‌ಐಟಿ ರಚಿಸಿ ಅಧಿಕೃತ ಆದೇಶ ಹೊರಡಿಸಿದೆ.

ಪೊಲೀಸ್ ಮಹಾನಿರೀಕ್ಷಕ ಎನ್. ಶಶಿಕುಮಾರ್ ವರ್ಗಾವಣೆ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬಂದಿದ್ದವು, ಇದೀಗ ಅವರನ್ನ ಪ್ರಕರಣದ ಎಸ್‌ಐಟಿ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಕೆ. ಸುಧೀರ್ ಕುಮಾರ್ ರೆಡ್ಡಿ, ರಾಜ್ಯ ಗುಪ್ತಚರ ಇಲಾಖೆ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್, ಸಿಐಡಿ ಪೊಲೀಸ್ ಅಧೀಕ್ಷಕ ಲೋಕೇಶ್ ಜಗಲಸಾರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವೆಂಕಟೇಶ್ ಪ್ರಸನ್ನ ಅವರನ್ನು ತಂಡದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಪ್ರಮುಖ ಕಂಡೀಷನ್​

  • ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 2012ರಲ್ಲಿ ದಾಖಲಾಗಿದ್ದ ಸೌಜನ್ಯ ಪ್ರಕರಣ ಹಾಗೂ ನಂತರ ಸಿಬಿಐ ಮರುನೋಂದಾಯಿಸಿಕೊಂಡಿದ್ದ ಪ್ರಕರಣದ ಕುರಿತು ಹೊಸದಾಗಿ ಸಮಗ್ರ ತನಿಖೆ ನಡೆಸುವ ಹೊಣೆಯನ್ನು ಈ ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿದೆ.
  • ಈ ಹಿಂದೆ ಬೆಳ್ತಂಗಡಿ ಪೊಲೀಸ್, ಸಿಐಡಿ ಅಥವಾ ಸಿಬಿಐ ತನಿಖೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳನ್ನು ಹೊಸ ಎಸ್‌ಐಟಿಯಲ್ಲಿ ಸೇರಿಸಬಾರದು ಎಂದೂ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
  • ಪ್ರಕರಣದ ಮರುತನಿಖೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಕಾಲಮಿತಿ ನಿಗದಿಪಡಿಸಿದೆ. ಅದರಂತೆ ಎಸ್‌ಐಟಿ ತನಿಖೆ ನಡೆಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಅಂತಿಮ ತನಿಖಾ ವರದಿ ಸಲ್ಲಿಸಬೇಕಾಗಿದೆ
  • ತನಿಖೆ ಪೂರ್ಣಗೊಂಡ ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು ಸರ್ಕಾರಕ್ಕೂ ವರದಿ ಸಲ್ಲಿಸಲಿದ್ದಾರೆ.
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor