ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ರಾಜ್ಯದ ಜನರಿಗೆ ಬೆಲೆ ಏರಿಕೆಯ ಡಬ್ಬಲ್ ಶಾಕ್ ಎದುರಲ್ಲಿದೆ! ಮಾಹಿತಿ ಪ್ರಕಾರ, ನಂದಿನಿ ಹಾಲಿನ ಖರೀದಿ ಮತ್ತು ಮಾರಾಟ ದರವನ್ನು ಪ್ರತಿ ಲೀಟರ್‌ಗೆ ₹4ರಿಂದ ₹5ರವರೆಗೆ ಹೆಚ್ಚಿಸುವ ಸಾಧ್ಯತೆ ಇದೆ. ಅಲ್ಲದೆ ಇದರ ಬೆನ್ನಲ್ಲೇ, ಬಸ್ ಪ್ರಯಾಣದ ಟಿಕೆಟ್ ದರ ಪರಿಷ್ಕರಣೆ ಮಾಡುವ ಚಿಂತನೆಯೂ ನಡೆದಿದೆ.
ವಿಶೇಷವಾಗಿ ಹಾಲಿನ ದರ ಪರಿಷ್ಕರಣೆ ಕುರಿತು ಅಧಿಕಾರಿಗಳಿಂದ ಸಮಗ್ರ ವರದಿ ಸಿದ್ಧವಾಗುತ್ತಿದ್ದರೆ, ಸಾರಿಗೆ ನಿಗಮಗಳ ಆರ್ಥಿಕ ನಷ್ಟ ಮತ್ತು ಡೀಸೆಲ್ ದರ ಏರಿಕೆಯನ್ನು ಮುಂದಿಟ್ಟುಕೊಂಡು ಬಸ್ ಪ್ರಯಾಣ ದರ ಹೆಚ್ಚಿಸುವ ಅಗತ್ಯವಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ವಿಧಾನಪರಿಷತ್‌ನಲ್ಲಿ ಹೇಳಿದ್ದಾರೆ. ವಿಧಾನಪರಿಷತ್‌ನಲ್ಲಿ ಬರ ಪರಿಸ್ಥಿತಿ ಕುರಿತು ನಡೆದ ಚರ್ಚೆಯ ವೇಳೆ ಹಾಲಿನ ದರ ಏರಿಕೆ ವಿಷಯ ಪ್ರಸ್ತಾಪವಾದಾಗ ಮಾತನಾಡಿದ ಬೈರತಿ ಸುರೇಶ್, ಡೀಸೆಲ್ ದರ ನಾಲ್ಕು ಬಾರಿ ಏರಿಕೆಯಾಗಿದೆ. ಪ್ರತಿಪಕ್ಷಗಳ ವಿರೋಧದ ಹಿನ್ನೆಲೆಯಲ್ಲಿ ಈವರೆಗೆ ಬಸ್ ಪ್ರಯಾಣ ದರ ಹೆಚ್ಚಿಸಿರಲಿಲ್ಲ. ಆದರೆ ಈಗ ದರ ಪರಿಷ್ಕರಣೆ ಅನಿವಾರ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಸಾರಿಗೆ ನಿಗಮಗಳು ಸುಮಾರು ₹8,000 ಕೋಟಿ ನಷ್ಟದಲ್ಲಿದ್ದು, ಸಿಬ್ಬಂದಿಗೆ ವೇತನ ನೀಡುವುದೂ ಕಷ್ಟಕರವಾಗುತ್ತಿದೆ. ನಿಗಮಗಳ ಆರ್ಥಿಕ ನಷ್ಟ ಹೆಚ್ಚುತ್ತಿರುವುದರಿಂದ ಹೊಸ ನೇಮಕಾತಿ ಪ್ರಕ್ರಿಯೆಗಳಿಗೂ ತೊಡಕಾಗುತ್ತಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ
ನಂದಿನಿ ಹಾಲಿನ ದರ ದುಬಾರಿ
ಇನ್ನೊಂದೆಡೆ, ನಂದಿನಿ ಹಾಲಿನ ಖರೀದಿ ಮತ್ತು ಮಾರಾಟ ದರ ಪರಿಷ್ಕರಣೆ ವಿಚಾರವೂ ಅಂತಿಮ ಹಂತದತ್ತ ಸಾಗುತ್ತಿದೆ. ರಾಜ್ಯದ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಗಳ ಪ್ರತಿನಿಧಿಗಳು ಪ್ರತಿ ಲೀಟರ್ ಹಾಲಿನ ಖರೀದಿ ಹಾಗೂ ಮಾರಾಟ ದರವನ್ನು ₹8ರಿಂದ ₹10ರವರೆಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಪಶು ಆಹಾರ, ಮೇವು, ಔಷಧಿ ಹಾಗೂ ಹೈನುಗಾರಿಕೆಯ ಇತರ ವೆಚ್ಚಗಳು ಹೆಚ್ಚಿರುವುದರಿಂದ ಹಾಲು ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ ಎಂದು ನಿಯೋಗ ಸರ್ಕಾರದ ಗಮನಕ್ಕೆ ತಂದಿತ್ತು.
ಈ ಮನವಿಯ ಬಳಿಕ ಕಳೆದ 10 ವರ್ಷಗಳಲ್ಲಿ ಪಶು ಆಹಾರದ ದರ ಏರಿಕೆ, ಒಂದು ಲೀಟರ್ ಹಾಲಿನ ಉತ್ಪಾದನಾ ವೆಚ್ಚ, ಜಿಲ್ಲಾವಾರು ಹಾಲು ಉತ್ಪಾದನೆ, ಸಹಕಾರ ಸಂಘಗಳ ಖರೀದಿ ಪ್ರಮಾಣ, ಹೊರ ಮಾರುಕಟ್ಟೆಯ ಮಾರಾಟ ಹಾಗೂ ನೆರೆಯ ರಾಜ್ಯಗಳಲ್ಲಿನ ಹಾಲಿನ ಖರೀದಿ ಮತ್ತು ಮಾರಾಟ ದರಗಳ ಕುರಿತು ಸಮಗ್ರ ಮಾಹಿತಿ ನೀಡುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದರು.
ಅದರಂತೆ ಅಧಿಕಾರಿಗಳು ದರ ಪರಿಷ್ಕರಣೆಗೆ ಸಂಬಂಧಿಸಿದ ಶಿಫಾರಸಿನೊಂದಿಗೆ ಸಮಗ್ರ ವರದಿ ಸಿದ್ಧಪಡಿಸಿದ್ದು, ಸರ್ಕಾರಕ್ಕೆ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಹಾಲು ಒಕ್ಕೂಟಗಳು ₹8ರಿಂದ ₹10 ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದರೂ, ಗ್ರಾಹಕರ ಮೇಲಿನ ಹೊರೆ ಮತ್ತು ಹೈನುಗಾರರ ಹಿತ ಎರಡನ್ನೂ ಪರಿಗಣಿಸಿ ಪ್ರತಿ ಲೀಟರ್‌ಗೆ ₹4ರಿಂದ ₹5ರವರೆಗೆ ದರ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಪ್ರಸ್ತುತ ನಂದಿನಿ ಟೋನ್ಡ್ ಹಾಲಿನ ಮಾರಾಟ ದರ ಪ್ರತಿ ಲೀಟರ್‌ಗೆ ₹46 ಇದೆ. ಹಾಲು ಒಕ್ಕೂಟಗಳು ರೈತರಿಂದ ಪ್ರತಿ ಲೀಟರ್ ಹಾಲನ್ನು ಸುಮಾರು ₹35ಕ್ಕೆ ಖರೀದಿಸುತ್ತಿವೆ. ದರ ಪರಿಷ್ಕರಣೆಯಲ್ಲಿ ₹4 ಹೆಚ್ಚಳವಾದರೆ ನಂದಿನಿ ಹಾಲಿನ ದರ ₹50ಕ್ಕೆ, ₹5 ಹೆಚ್ಚಳವಾದರೆ ₹51ಕ್ಕೆ ತಲುಪುವ ಸಾಧ್ಯತೆ ಇದೆ.
ವಿಧಾನಪರಿಷತ್‌ನಲ್ಲಿ ಸಹ ಹಾಲಿನ ದರ ಹೆಚ್ಚಳದ ವಿಷಯ ಚರ್ಚೆಗೆ ಬಂದಿದ್ದು, ಬರ ಪರಿಸ್ಥಿತಿಯಿಂದ ಮೇವು ಸೇರಿದಂತೆ ಹಾಲು ಉತ್ಪಾದನೆಯ ವೆಚ್ಚ ಹೆಚ್ಚಿರುವುದರಿಂದ ರೈತರಿಗೆ ಹೆಚ್ಚಿನ ದರ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
