ಶಿವಮೊಗ್ಗ :ಅದೇ ತಾರಾಗಣ, ಅದೇ ಭಾಷೆ, ಅದೇ ಫೀಲ್: ‘ಸೂ ಫ್ರಂ ಸೋ’ ಹೋಲುವ ‘ಶಂಕರಾಭರಣ’ ಟ್ರೈಲರ್ ನೋಡಿದ್ರಾ?

ಹಂಚಿಕೊಳ್ಳಿ
WhatsApp Facebook X Telegram
Shine Shetty Starrer Gives Soo From So Vibes
Shine Shetty Starrer Gives Soo From So Vibes

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: 2025ರಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರನ್ನು ನಕ್ಕು ನಲಿಸಿ ಬಾಕ್ಸ್ ಆಫೀಸ್ ಶೇಕ್ ಮಾಡಿದ ಸಿನಿಮಾ ಸೂ ಫ್ರಂ ಸೋ’. ಅದರ ಬಗ್ಗೆ ಜನ ಈಗಲೂ ಮಾತನಾಡುತ್ತಾರೆ. ಅಷ್ಟೇ ಅಲ್ಲದೆ ಅಂತಹದ್ದೇ ಇನ್ನೊಂದು ಸಿನಿಮಾ ಯಾವಾಗ ಬರುತ್ತದೆ ಎಂದು ಕೇಳುತ್ತಲೇ ಇದ್ದಾರೆ. ಚಿತ್ರದ ನಿರ್ಮಾಪಕ ರಾಜ್ ಬಿ. ಶೆಟ್ಟಿ ಅವರಿಗೆ ಸೂ ಫ್ರಂ ಸೋ ಪಾರ್ಟ್-02’ ಮಾಡಿ ಎಂಬ ಬೇಡಿಕೆಯೂ ಪ್ರೇಕ್ಷಕರಿಂದ ಬಂದಿತ್ತು. ಅದಕ್ಕೆ ರಾಜ್ ಬಿ. ಶೆಟ್ಟಿ ಅವರು ‘ಸೂ ಫ್ರಂ ಸೋ ಪಾರ್ಟ್-02’ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಇದರಿಂದ ಪ್ರೇಕ್ಷಕರು ಸಹ ಬೇಸರಗೊಂಡಿದ್ದರು. ಆದರೆ ಅದಿಲ್ಲದಿದ್ದರೆ ಏನಂತೆ, ಇದು ಉಂಟಲ್ಲ ಎನ್ನುವ ರೀತಿಯಲ್ಲಿ ಸೂ ಫ್ರಂ ಸೋ ಸಿನಿಮಾದ ರೀತಿಯೇ ಎಲ್ಲಾ ವಿಭಾಗದಲ್ಲೂ ಫೀಲ್ ಕೊಡುವ ಶೈನ್ ಶೆಟ್ಟಿ ನಟನೆಯ ಶಂಕರಾಭರಣ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದೆ.

ಹೌದು, ಕಳೆದ 2 ದಿನಗಳ ಹಿಂದೆ ರಿಲೀಸ್ ಆದ ಶಂಕರಾಭರಣ ಟ್ರೈಲರ್ ಯೂಟ್ಯೂಬ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಅದೊಂದು ವಿಚಿತ್ರವಾದ ಊರು, ಅಲ್ಲಿ ಸಿಕ್ಕಾಪಟ್ಟೆ ಭೂತದ ಕಾಟವಂತೆ ಎಂದು ಆರಂಭವಾಗುವ ಟ್ರೈಲರ್ ಆರಂಭದಲ್ಲಿಯೇಕುತೂಹಲ ಮೂಡಿಸುತ್ತದೆ. ಪೂರ್ತಿ ಹಚ್ಚ ಹಸಿರಿನಿಂದ ತುಂಬಿದ ವಾತಾವರಣ, ಊರಿನಲ್ಲಿ ಒಂದು ಸೇತುವೆ. ಆ ಸೇತುವೆ ದಾಟಿದರೆ ಭೂತದ ಕಾಟ ಶುರುವಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಇರುತ್ತದೆ. ಆ ಸಂದರ್ಭದಲ್ಲಿ ನಾಯಕ ನಟ ಶೈನ್ ಶೆಟ್ಟಿ ಹಾಗೂ ಆತನ ಶಂಕರಾಭರಣ ಎಂಬ ಹೆಸರಿನ ಬಸ್‌ನ ಎಂಟ್ರಿ ಆಗುತ್ತದೆ. ಮೊದಲೇ ಭಯದಿಂದ ಊರಿಗೆ ಬಂದಿದ್ದ ಆತನಿಗೆ ಒಬ್ಬ ಕಂಡಕ್ಟರ್ ಪರಿಚಯವಾಗುತ್ತಾನೆ. ನಂತರ ಆತ ನೀವು ಭಯಪಡಬೇಡಿ, ನಾನಿದ್ದೇನೆ ಎಂದು ನಾಯಕ ಶೈನ್ ಶೆಟ್ಟಿಯನ್ನು ಕರೆದುಕೊಂಡು ಹೋಗುತ್ತಾನೆ. ಆತನಿಗೂ ಅಲ್ಲಿ ವಿಚಿತ್ರವಾದ ಅನುಭವವಾಗುತ್ತದೆ. ಹೆಣ್ಣು ದೆವ್ವವೊಂದು ಅಲ್ಲಿಯೇ ಸುತ್ತಮುತ್ತ ಓಡಾಡುವ ರೀತಿಯಲ್ಲಿ ಅದರ ಬಗ್ಗೆ ಇತರರ ಬಳಿ ಶೈನ್ ಶೆಟ್ಟಿ ವಿವರಣೆ ನೀಡುವುದನ್ನು ತುಂಬಾ ಮಜಾವಾಗಿ ತೋರಿಸಲಾಗಿದೆ.

ನಂತರ ಊರಿನಲ್ಲಿ ಜನರಿಗೆ ವಿಚಿತ್ರ ಅನುಭವವಾಗುವುದು, ಬಸ್ಸಿಗೆ ಇದ್ದಕ್ಕಿದ್ದಂತೆ ಬೆಂಕಿ ಬೀಳುವುದು ಹಾಗೂ ಊರಿನಲ್ಲಿ ಬಸ್ಸಿನ ಬಗ್ಗೆ ಶ್ರೀಮಂತ ವ್ಯಕ್ತಿ ಅಸೂಯೆ ಪಡುವುದು – ಹೀಗೆ ಅನೇಕ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ. ಅಷ್ಟೇ ಅಲ್ಲದೆ, ಇದರಲ್ಲಿಯೂ ದೆವ್ವ-ಭೂತದ ವಿಚಾರಗಳನ್ನು ಮುನ್ನೆಲೆಗೆ ತರಲಾಗಿದ್ದು, ನಿಜವಾಗಿಯೂ ಸಿನಿಮಾದಲ್ಲಿ ಭೂತವಿದೆಯೇ ಅಥವಾ ಸೂ ಫ್ರಂ ಸೋ’ ರೀತಿ ಭೂತವಿರುವಂತೆ ಯಾವುದೋ ಕಾರಣಕ್ಕಾಗಿ ಕಲ್ಪಿಸಲಾಗಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ. ಅಷ್ಟೇ ಅಲ್ಲದೆ, ಉಪದ್ರ ಭೂತದ್ದಾ ಅಥವಾ ಮನುಷ್ಯರದ್ದಾ ಅಂತ ನೋಡಬೇಕು ಎಂದು ಶೈನ್ ಶೆಟ್ಟಿ ಹೇಳುವ ಡೈಲಾಗ್ ಸಿನಿಮಾದಲ್ಲಿ ಭೂತವನ್ನು ಕೇವಲ ಸೃಷ್ಟಿಸಿ ಏನೋ ಟ್ವಿಸ್ಟ್ ಇಟ್ಟಿರುವಂತಿದೆ.

ಸೂ ಫ್ರಂ ಸೋ ಸಿನಿಮಾ ಫೀಲ್ ಕೊಡುವ ಮ್ಯೂಸಿಕ್, ತಾರಾಗಣ ಹಾಗೂ ಭಾಷೆ

ಇನ್ನು ಚಿತ್ರದಲ್ಲಿ ಅನೇಕ ನಟರು ‘ಸೂ ಫ್ರಂ ಸೋ’ ಚಿತ್ರದಲ್ಲಿ ನಟಿಸಿದವರೇ ಇದ್ದಾರೆ. ದಿಲೀಪ್ ರಾಜ್, ಮೈಕ್ ರಾಮ್‌ದಾಸ್ ಸೇರಿದಂತೆ ಅನೇಕ ನಟರು ಇಲ್ಲೂ ಸಹ ತಮ್ಮ ನಟನಾ ಕೌಶಲ್ಯವನ್ನು ಮೆರೆದಿದ್ದಾರೆ. ಹಾಗೆಯೇ ವಿಲನ್ ಪಾತ್ರದಲ್ಲಿ ನಟ ಸಂಪತ್ ರಾಜ್ ಮಿಂಚಿದ್ದಾರೆ. ಅಷ್ಟೇ ಅಲ್ಲದೆ, ಈ ಸಿನಿಮಾದ ಬ್ಯಾಕ್‌ಗ್ರೌಂಡ್ ಸ್ಕೋರ್ ಕೂಡ ‘ಸೂ ಫ್ರಂ ಸೋ’ ಸಿನಿಮಾದ ಫೀಲಿಂಗ್ ನೀಡುತ್ತದೆ. ಚರಣ್ ರಾಜ್ ಈ ಸಿನಿಮಾಗೆ ಸಂಗೀತ ಸಂಯೋಜಿಸಿದ್ದು, ಟ್ರೈಲರ್ ನೋಡುವಾಗ ಎಲ್ಲೋ ಕೇಳಿದಂತಿದೆಯಲ್ಲ ಎಂಬ ಫೀಲ್ ಬರುತ್ತದೆ. ಆ ಸಿನಿಮಾಗೆ ಇನ್ನಷ್ಟು ಹೋಲುವ ವಿಚಾರವೆಂದರೆ ಸಿನಿಮಾದಲ್ಲಿ ಬಳಸಿರುವ ಭಾಷೆ. ಕರಾವಳಿ ಭಾಗದ ಭಾಷೆಯಲ್ಲಿ ಬರುವ ಪಂಚಿಂಗ್ ಡೈಲಾಗ್‌ಗಳು, ಭಾವನೆಗಳು ಎಲ್ಲವೂ ಸಹ ‘ಸೂ ಫ್ರಂ ಸೋ’ ಸಿನಿಮಾವನ್ನೇ ಹೋಲುವಂತಿವೆ.

ಈ ಸಿನಿಮಾವನ್ನು ಸುಮಂತ್ ಭಟ್ ನಿರ್ದೇಶಿಸಿದ್ದು ಶ್ರೀಶೈಲ, ದಿವಾಕರ್ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಹಾಗೆಯೇ ಚರಣ್ ರಾಜ್ ಸಿನಿಮಾಗೆ ಸಂಗೀತ ನಿರ್ದೇಶಿಸಿದ್ದಾರೆ. ಈ ಚಿತ್ರ ನವೆಂಬರ್ 20ಕ್ಕೆ ಬಿಡುಗಡೆಯಾಗುತ್ತಿದ್ದು, ಎಲ್ಲಾ ಅಂದುಕೊಂಡಂತೆ ಆಗಿ ಚಿತ್ರ ಉತ್ತಮ ಕಥೆ ಹೊಂದಿದ್ದು ಕಥೆಯೊಳಗೆ ಕಾಮಿಡಿ ಬ್ಲೆಂಡ್ ಆಗಿದ್ದರೆ ಚಿತ್ರ ‘ಸೂ ಫ್ರಂ ಸೋ’ ರೀತಿ ಹಿಟ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಬರಹ : ಪ್ರತಾಪ್​ ತೀರ್ಥಹಳ್ಳಿ

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor