ಸ್ವಪಕ್ಷದ ವಿರುದ್ಧ ವಾಗ್ದಾಳಿ ಬೆನ್ನಲ್ಲೇ ಎಚ್.ಎಸ್. ಸುಂದರೇಶ್‌ಗೆ ಕೆಪಿಸಿಸಿ ಶೋಕಾಸ್ ನೋಟಿಸ್ ; 7 ದಿನದಲ್ಲಿ ಉತ್ತರಕ್ಕೆ ಸೂಚನೆ

ಹಂಚಿಕೊಳ್ಳಿ
WhatsApp Facebook X Telegram
KPCC Issues Show-Cause Notice to HS Sundaresh After Remarks Against Party Leaders
KPCC Issues Show-Cause Notice to HS Sundaresh After Remarks Against Party Leaders

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸ್ವಪಕ್ಷದ ಮುಖಂಡರ ವಿರುದ್ಧ ಬಹಿರಂಗವಾಗಿ ಹಾಗೂ ಆಕ್ಷೇಪಾರ್ಹ ಪದಗಳ ಜೊತೆಜೊತೆಗೆ ತಮ್ಮ ಅಸಮಾಧಾನ ಹೊರಹಾಕಿ, ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಕೆಪಿಸಿಸಿ ಉಪಾಧ್ಯಕ್ಷ ಎಂ. ನಾರಾಯಣಸ್ವಾಮಿ ಅವರು ಇವತ್ತು ಅಂದರೆ, ಈ ದಿನ ಸೆಪ್ಟೆಂಬರ್ 24ರಂದು ಸುಂದರೇಶ್ ಅವರಿಗೆ ನೋಟಿಸ್ ನೀಡಿದ್ದಾರೆ. ಈ ನೋಟಿಸ್ ನೀಡಿದ ದಿನದಿಂದ 7 ದಿನಗಳೊಳಗೆ ತಮ್ಮ ಹೇಳಿಕೆಗಳ ಕುರಿತು ಸಮಜಾಯಿಷಿ ನೀಡುವಂತೆ ಸೂಚಿಸಲಾಗಿದೆ. ನಿಗದಿತ ಅವಧಿಯಲ್ಲಿ ಉತ್ತರ ನೀಡದಿದ್ದರೆ ಮುಂದಿನ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ನಿನ್ನೆ ದಿನ ಸೆಪ್ಟೆಂಬರ್ 23ರಂದು ಖಾಸಗಿ ಹೋಟೆಲ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಎಚ್.ಎಸ್. ಸುಂದರೇಶ್ ಎಐಸಿಸಿ ನಡೆಸುತ್ತಿರುವ ಸಂಘಟನ್ ಸೃಜನ್ ಅಭಿಯಾನ್ ಕಾರ್ಯಕ್ರಮದ ಕುರಿತು ಟೀಕೆ ಮಾಡಿದ್ದಷ್ಟೆ ಅಲ್ಲದೆ, ಶಿವಮೊಗ್ಗ ಕಾಂಗ್ರೆಸ್ ಸೇರಿದಂತೆ ಪಕ್ಷದ ರಾಜ್ಯ ಮುಖಂಡರ ವಿರುದ್ಧ ಕಿಡಿಕಾರಿದ್ದರು. ಮೇಲಾಗಿ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಆಪ್ತರ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ 40 ವರ್ಷಗಳ ರಾಜಕೀಯ ಅನುಭವ ಹೊಂದಿದ ವ್ಯಕ್ತಿಯಾಗಿ ಅವರು ಬಳಸಿದ್ದ ಪದಗಳು ಸುದ್ದಿಗೋಷ್ಟಿಯಲ್ಲಿ ವ್ಯಕ್ತಪಡಿಸುವ ಮಾತಿನಂತಿರಲಿಲ್ಲ.

ಈ ನಿಟ್ಟಿನಲ್ಲಿ ಕಾಂಗ್ರೆಸ್​ ನಾಯಕರು ಕೆರಳಿದ್ದು, ನಿನ್ನೆಯೇ ಸಿಎಂ ಸೇರಿದಂತೆ ಕೆಪಿಸಿಸಿ ಅಧ್ಯಕ್ಷರಿಗೆ ದೂರು ಕೊಟ್ಟಿದ್ದರು. ಬಳಿಕ ಲಿಖಿತವಾಗಿ ದೂರನ್ನ ನೀಡಿ, ಕ್ರಮಕ್ಕೆ ಮನವಿ ಮಾಡಿದ್ದರು. ಅವರ ಹೇಳಿಕೆಗಳಿಂದ ಪಕ್ಷಕ್ಕೆ ಹಾಗೂ ಸ್ಥಳೀಯ ಮುಖಂಡರಿಗೆ ಮುಜುಗರ ಉಂಟಾಗಿದೆ ಎಂದೇ ಆರೋಪಿಸಿದ್ದರು.

ಇನ್ನೂ ನೋಟಿಸ್​ ನಲ್ಲಿ ಸುಂದರೇಶ್​ರವರ ಹೇಳಿಕೆಗಳನ್ನು ಪಕ್ಷದ ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಿ, ಕೆಪಿಸಿಸಿ ಅಧ್ಯಕ್ಷರ ಸೂಚನೆಯ ಮೇರೆಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗುತ್ತಿದೆ ಎಂದು ಎಂ. ನಾರಾಯಣಸ್ವಾಮಿ ತಿಳಿಸಿದ್ದಾರೆ. ನೋಟಿಸ್‌ನ ಪ್ರತಿಯನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಸಿ. ಯೋಗೇಶ್ ಅವರಿಗೂ ಕಳುಹಿಸಲಾಗಿದೆ.

ಇನ್ನೂ ಎಚ್.ಎಸ್. ಸುಂದರೇಶ್, ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 40 ವರ್ಷಗಳಿಂದ ದುಡಿದಿದ್ದರೂ ತಮಗೆ ಸೂಕ್ತ ಮಾನ್ಯತೆ ಸಿಕ್ಕಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರಷ್ಟೆ ಅಲ್ಲದೆ ತಮಗೆ ಶಾಸಕ ಸ್ಥಾನಕ್ಕೆ ಟಿಕೆಟ್ ಸಿಗಲಿಲ್ಲ, ಲೋಕಸಭಾ ಚುನಾವಣೆಗೆ ಹೆಸರು ಅಂತಿಮ ಹಂತದಲ್ಲಿದ್ದರೂ ಅವಕಾಶ ಕೈತಪ್ಪಿತು, 18 ತಿಂಗಳು ಕಾಡ ಈಗ ಕಿತ್ತೋಗಿದ್ ಸೂಡಾ ನೀಡಿದ್ದಾರೆ” ಎಂದು ತಮ್ಮದೇ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.ಈ ಮಧ್ಯೆ ಇವರ ಟೀಕೆಯ ಹಿಂದೆ ಅನಾರೋಗ್ಯದ ವಿಚಾರಗಳು ಚರ್ಚೆಯಾಗುತ್ತಿದೆಯಾದರೂ ಸಹ, ಸುಂದರೇಶ್​ರವರ ಮಾತುಗಳು ಬಹಿರಂಗವಾಗಿ ಹೊರಬಿದ್ದಿದ್ದರಿಂದ ಅವರ ವಿರುದ್ಧ ಕ್ರಮಕ್ಕೆ ಪಕ್ಷ ಮುಂದಾಗುತ್ತಿದೆ ಎನ್ನಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor