ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಎಸ್ಐಆರ್ ಹೆಸರಿನಲ್ಲಿ ಕೋಟ್ಯಂತರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಆರೋಪಿಸಿ, ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಿನ್ನೆ ಗುರುವಾರ ಶಿವಮೊಗ್ಗ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ವೋಟ್ ಬಚಾವೋ, ದೇಶ ಬಚಾವೋ ಘೋಷವಾಕ್ಯದಡಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗ್ಗೆ 11 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಮಹಾವೀರ ವೃತ್ತದವರೆಗೆ ಸಾಗಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನಾ ಸಭೆ ನಡೆಸಿದರು. ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ಕೈಬಿಡಬಾರದು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪ್ರತಿಭಟನೆ ವೇಳೆ ಹೆಚ್ ಸಿ ಯೊಗೇಶ್ ಮಾತು
- ಈ ವೇಳೆ ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ. ಯೋಗೀಶ್, ಬಿಜೆಪಿಯವರು ಸಂವಿಧಾನ ವಿರೋಧಿ ನಿಲುವು ಅನುಸರಿಸುತ್ತಿದ್ದು, ಪ್ರಜಾಪ್ರಭುತ್ವದ ಮೂಲಾಧಾರವಾಗಿರುವ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
- ದೇಶದಲ್ಲಿ ಸುಮಾರು 13 ಕೋಟಿ ಮತಗಳನ್ನು ರದ್ದುಪಡಿಸಲಾಗಿದೆ. ಈ ಮತದಾರರು 2014ರ ಚುನಾವಣೆಯಲ್ಲಿ ಮತ ಚಲಾಯಿಸಿರಲಿಲ್ಲವೇ? ಇವು ಕಾಂಗ್ರೆಸ್ ಪರವಾಗಿರುವ ಮತಗಳು ಎಂಬ ಕಾರಣಕ್ಕಾಗಿಯೇ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಅವರು ದೂರಿದರು.
- ಇದೇ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿದ ಯೋಗೀಶ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಅರಾಜಕತೆಯ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅರಾಜಕತೆ ಎಂದರೆ ಏನೆಂಬುದೇ ಅವರಿಗೆ ತಿಳಿದಿಲ್ಲ ಎಂದು ಟೀಕಿಸಿದರು.
- ಉದ್ಯೋಗ ನೀಡದಿರುವುದು ಅರಾಜಕತೆಯಲ್ಲವೇ? ನೋಟು ಅಮಾನ್ಯೀಕರಣ ಮಾಡಿದ್ದು, ಜಾಗಟೆ ಬಾರಿಸುವಂತೆ ಹೇಳಿದ್ದು, ಧರ್ಮದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವುದು ಹಾಗೂ ಕೆಲಸ ಮತ್ತು ಯೋಗದ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸುವುದು ಅರಾಜಕತೆಯಲ್ಲವೇ ಎಂದು ಪ್ರಶ್ನಿಸಿದರು.
ಮತದಾರರ ಪಟ್ಟಿಯ ಅಕ್ರಮಗಳ ಕುರಿತು ತನಿಖೆಗೆ ಆಗ್ರಹ
ಕಾಂಗ್ರೆಸ್ ಪ್ರತಿಭಟನೆ ವೇಳೆ ಸೂಡಾ ಅಧ್ಯಕ್ಷ ಸಿ.ಜಿ. ಮಧುಸೂದನ್ ಮಾತನಾಡಿ, ಮತದಾನವು ಪ್ರಜಾಪ್ರಭುತ್ವದ ಮೂಲ ಆಧಾರವಾಗಿದೆ. ಮತದಾರರ ಪಟ್ಟಿಯಲ್ಲಿ ನಡೆಯುತ್ತಿರುವ ಅಕ್ರಮಗಳು ಹಾಗೂ ಎಸ್ಐಆರ್ ಹೆಸರಿನಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ಪ್ರಕ್ರಿಯೆ ಕುರಿತು ಜನರಲ್ಲಿ ಅನುಮಾನಗಳು ಉಂಟಾಗಿವೆ ಎಂದು ಹೇಳಿದರು.
ಮತದಾರರ ಪಟ್ಟಿಯ ಅಕ್ರಮಗಳು ಮತ್ತು ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕುರಿತ ಅನುಮಾನಗಳನ್ನು ನಿವಾರಿಸದೆ ಚುನಾವಣೆ ನಡೆಸುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆ. ಚುನಾವಣಾ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಉಳಿಯಬೇಕಾದರೆ ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಚುನಾವಣಾ ಆಯುಕ್ತರ ಪದಚ್ಯುತಿಗೆ ಒತ್ತಾಯ
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿ ಮಾತನಾಡಿ, ಮತವನ್ನು ಕಾಪಾಡುವುದು ಎಂದರೆ ದೇಶವನ್ನು ಕಾಪಾಡಿದಂತೆ. ಪ್ರತಿಯೊಬ್ಬ ಅರ್ಹ ಮತದಾರರ ಮತದಾನದ ಹಕ್ಕು ಉಳಿಯಬೇಕು. ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಬಾರದು ಎಂದು ಒತ್ತಾಯಿಸಿದರು.ಚುನಾವಣಾ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಬೇಕು. ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಮೇಶ್ ಹೆಗ್ಡೆ, ಕಲೀಂ ಪಾಷಾ, ಇಸ್ಮಾಯಿಲ್ ಖಾನ್, ಶಿವಕುಮಾರ್, ಡಾ. ಶ್ರೀನಿವಾಸ ಕರಿಯಣ್ಣ, ಎಸ್.ಟಿ. ಹಾಲಪ್ಪ, ಎಸ್.ಪಿ. ಶೇಷಾದ್ರಿ, ಚಂದ್ರಭೂಪಾಲ್, ವೈ.ಎಚ್. ನಾಗರಾಜ್, ಆರ್. ರಾಜಶೇಖರ್, ಎಸ್.ಟಿ. ಚಂದ್ರಶೇಖರ್, ಕೆ. ರಂಗನಾಥ್, ನಾಗರಾಜ್ ಕಂಕಾರಿ, ಎಚ್. ಪಾಲಾಕ್ಷಿ, ರೇಖಾ ರಂಗನಾಥ್, ಕೆ. ದೇವೇಂದ್ರಪ್ಪ, ವಿಶ್ವನಾಥ್ ಕಾಶಿ, ನೇತಾಜಿ, ಮಂಜುನಾಥ ಬಾಬು, ಕೆ.ಜೆ. ನಾಗೇಶ್ ನಾಯ್ಕ, ಇಕ್ಕೇರಿ ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
