ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದ ಎಸ್.ಐ.ಆರ್. ಪ್ರಕ್ರಿಯೆಯನ್ನು ವಿರೋಧಿಸುವ ಮೂಲಕ ದೇಶದಲ್ಲಿ ಗಲಿಬಿಲಿಗೊಳಿಸಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಸತ್ಯವನ್ನು ತಿಳಿಸುವ ಉದ್ದೇಶದಿಂದ ನವೆಂಬರ್ 5 ರಂದು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಶಿವಮೊಗ್ಗ ನಗರದ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದ್ದಾರೆ.
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತವು ಅನೇಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ಇತರೆ ದೇಶಗಳಿಗೆ ಬೆನ್ನೆಲುಬಾಗಿ ನಿಂತಿದೆ ಹಾಗೂ ಯುದ್ಧದ ಸಂದರ್ಭದಲ್ಲಿ ಯುದ್ಧ ನಿಲ್ಲಿಸಿ ಅಲ್ಲಿನ ನಾಗರಿಕರನ್ನು ರಕ್ಷಣೆ ಮಾಡಿದೆ. ಹೀಗಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿರುವ ಭಾರತವು ಇತರೆ ರಾಷ್ಟ್ರಗಳಿಗೂ ಸಹಕಾರ ನೀಡುತ್ತಿದೆ. ಆದರೆ ಇಷ್ಟು ವರ್ಷಗಳ ಕಾಲ ಅಧಿಕಾರ ನಡೆಸಿರುವ ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿದೆ ಮತ್ತು ದೇಶವನ್ನು ಒಡೆಯುವ ದುಷ್ಟ ಪ್ರಯತ್ನವನ್ನು ನಡೆಸುತ್ತಿದೆ ಎಂದು ಆರೋಪಿಸಿದರು.
ಚುನಾವಣಾ ಆಯೋಗದ ವಿಚಾರದಲ್ಲಿ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆಯನ್ನು ಅಳಿಸಿ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ನಿರಂತರವಾಗಿ ಚುನಾವಣೆಯಲ್ಲಿ ಸೋತು ಸೋತು ಸುಣ್ಣವಾಗಿರುವ ಕಾಂಗ್ರೆಸ್, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ ಹಾಗೂ ದೇಶದ ಜನರು ಕಾಂಗ್ರೆಸ್ ಅನ್ನು ಮರೆತು ಹೋಗಿದ್ದಾರೆ ಎಂದು ಟೀಕಿಸಿದರು.
ದೇಶದಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದ್ದು, ಈ ಮೂಲಕ ದೇಶದಲ್ಲಿ ಗಲಿಬಿಲಿ ಉಂಟುಮಾಡಲು ಕಾರಣವಾಗಿದೆ. ದೇಶದ ಜನರಿಗೆ ಈ ಬಗ್ಗೆ ಸತ್ಯವನ್ನು ತಿಳಿಸಬೇಕಾದ ಅವಶ್ಯಕತೆಯಿದೆ. ಈ ಸಂಬಂಧ ನವೆಂಬರ್ 5 ರಂದು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಶಿವಮೊಗ್ಗ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಫ್ರೀಡಂ ಪಾರ್ಕ್ ವರೆಗೆ ಈ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
