ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ:ನಗರದಲ್ಲಿ ಅಧಿಕ ಲಾಭದ ಆಸೆ ತೋರಿಸಿ, ವಿದೇಶಿ ಕಂಪನಿಯೊಂದಿಗೆ ಒಪ್ಪಂದವಿರುವುದಾಗಿ ಸಾರ್ವಜನಿಕರನ್ನು ನಂಬಿಸಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದಂಪತಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಆರೋಪಿತರಾದ ದಂಪತಿಗಳು ಕಳೆದ ಒಂದು ವರ್ಷದಿಂದ ಸಾರ್ವಜನಿಕರಿಗೆ ಪರಿಚಯವಾಗಿದ್ದು, ತಾವು ಆರಂಭಿಸುವ ಬ್ಯುಸಿನೆಸ್ನಲ್ಲಿ ಹಣ ಹೂಡಿಕೆ ಮಾಡಿದರೆ ತಿಂಗಳಿಗೆ ಭಾರಿ ಲಾಭ ನೀಡುವುದಾಗಿ ಆಮಿಷ ಒಡ್ಡಿದ್ದರು. ವಂಚಕರು ಬೆಂಗಳೂರಿನಿಂದ ತಮ್ಮ ಕಂಪನಿಯನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸುತ್ತಿದ್ದು, ವಿದೇಶಿ ಕಂಪನಿಗಳೊಡನೆ ಒಪ್ಪಂದವಿದೆಯೆಂದು ಸುಳ್ಳು ಹೇಳಿ ಜನರ ವಿಶ್ವಾಸ ಗಳಿಸಿದ್ದರು.
ಈ ಹಿನ್ನೆಲೆ ದೂರುದಾರರು, ಅವರ ಸ್ನೇಹಿತರು ಹಾಗೂ ಪರಿಚಯಸ್ಥರು ಸೇರಿದಂತೆ ಒಟ್ಟು 38ಕ್ಕೂ ಹೆಚ್ಚು ಜನರು ಈ ವಂಚನೆಗೆ ಒಳಗಾಗಿದ್ದಾರೆ. ಕೆಲವರು ಮನೆ ಪತ್ರಗಳನ್ನು ಅಡಮಾನವಿಟ್ಟು ಮತ್ತು ನಗದು ರೂಪದಲ್ಲಿ ಹಣ ಹೂಡಿಕೆ ಮಾಡಲಾಗಿದೆ. ಒಟ್ಟು 11 ಕೋಟಿ 46 ಲಕ್ಷ ರೂಪಾಯಿಗಳಿಗೂ ಅಧಿಕ ಹಣವನ್ನು ಎಚ್ಡಿಎಫ್ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಹಾಗೂ ಎಸ್ಬಿಐ ಸೇರಿದಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ ಮತ್ತು ನಗದು ರೂಪದಲ್ಲಿ ಪಡೆದುಕೊಳ್ಳಲಾಗಿದೆ. ಹಣ ಪಡೆದ ಬಳಿಕವೂ ದೂರುದಾರರಿಗೆ ಯಾವುದೇ ಲಾಭವನ್ನು ನೀಡದೆ, ಹಣವನ್ನೂ ವಾಪಸ್ ಕೊಡದೆ ವಂಚನೆ ಮಾಡಲಾಗಿದೆ.
ಈ ಕುರಿತು ಬಂದ ದೂರಿನ ಆಧಾರದ ಮೇಲೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.
