ಮಲೆನಾಡು ಟುಡೆ ಸುದ್ದಿ / ಸಾಗರ / ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಸವನಹೊಳೆ ಸಮೀಪ ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ನಿನ್ನೆ ದಿನ ಭಾನುವಾರ ಮುಂಜಾನೆ ಸಂಭವಿಸಿತ್ತು. ಸಾಗರ ಡಿಪೋಗೆ ಸೇರಿದ ಬಸ್ ಬೆಳಗಿನ ಜಾವ ಸುಮಾರು 4.30ರ ವೇಳೆಗೆ ಬಸವನಹೊಳೆ ಸಮೀಪದ ಬಾಪಟ್ ಕಲ್ಯಾಣ ಮಂಟಪದ ಬಳಿ ಅಪಘಾತಕ್ಕೀಡಾಗಿತ್ತು. ಬಸ್ನಲ್ಲಿ ಸುಮಾರು 42 ಮಂದಿ ಇದ್ದರು. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಹೆಚ್ಚು ಪೆಟ್ಟಾಗಿರಲಿಲ್ಲ. ಈ ಮಧ್ಯೆ ಘಟನೆ ಹೇಗಾಯ್ತು ಎಂದು ಮಲೆನಾಡು ಟುಡೆ ವಿಚಾರಿಸಿದಾಗ ಕೆಲವೊಂದು ಮಾಹಿತಿ ಲಭ್ಯವಾಗಿದೆ. ಅಪಘಾತದ ಸಂದರ್ಭದಲ್ಲಿ ನಿರ್ವಾಹಕರೇ ಬಸ್ ಚಲಾಯಿಸುತ್ತಿದ್ದರು ಎಂಬ ವಿಚಾರವನ್ನು ಬಸ್ ಸಿಬ್ಬಂದಿ ಬಹಿರಂಗಪಡಿಸಿದ್ದಾರೆ.
ಬೆಂಗಳೂರಿನಿಂದ ಸಾಗರಕ್ಕೆ ಪ್ರಯಾಣಿಸುತ್ತಿದ್ದ ಬಸ್ ಬಸವನಹೊಳೆ ಸಮೀಪ ತಲುಪಿದಾಗ ಏಕಾಏಕಿ ನಿಯಂತ್ರಣ ತಪ್ಪಿದೆ. ಡಿವೈಡರ್ ಮೇಲೆ ಹತ್ತಿ ಪಲ್ಟಿಯಾಗಿದೆ. ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಉಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಬಸ್ ಸಿಬ್ಬಂದಿ ನೀಡಿರುವ ಮಾಹಿತಿಯ ಪ್ರಕಾರ, ಬಸ್ನಲ್ಲಿದ್ದ 41 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದ ಕುರಿತು ಆಸ್ಪತ್ರೆಯಲ್ಲಿ ಪ್ರತಿಕ್ರಿಯಿಸಿರುವ ಬಸ್ ನಿರ್ವಾಹಕ ವೆಂಕಟರಮಣ ನಾಯ್ಕ್, ಘಟನೆ ಸಂಭವಿಸಿದ ಸಂದರ್ಭದಲ್ಲಿ ತಾವೇ ಬಸ್ ಚಲಾಯಿಸುತ್ತಿದ್ದುದಾಗಿ ತಿಳಿಸಿದ್ದಾರೆ. ಬಸ್ ಸಾಗರದ ಸಮೀಪದ ಬಸವನಹೊಳೆ ಬಳಿ ಬರುತ್ತಿದ್ದಂತೆ ಏಕಾಏಕಿ ಬಲಭಾಗಕ್ಕೆ ಎಳೆಯಲು ಆರಂಭಿಸಿತು. ಕೂಡಲೇ ಬಸ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಮೇಲೆ ಹತ್ತಿ ಪಲ್ಟಿಯಾಯಿತು ಎಂದು ಅವರು ಘಟನೆಯನ್ನು ವಿವರಿಸಿದ್ದಾರೆ. ಬಸ್ ಏಕಾಏಕಿ ಬಲಭಾಗಕ್ಕೆ ಎಳೆದ ಪರಿಣಾಮ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂಬುದು ನಿರ್ವಾಹಕ ವೆಂಕಟರಮಣ ನಾಯ್ಕ್ ಮಾತು.
ಇದೇ ಬಸ್ನ ಚಾಲಕ ಗಣೇಶ್ ಕೂಡ ಆಸ್ಪತ್ರೆಯಲ್ಲಿ ಅಪಘಾತದ ಕುರಿತು ಪ್ರತಿಕ್ರಿಯಿಸಿದ್ದಾರೆ. ಕೆಎಸ್ಆರ್ಟಿಸಿ ಇಲಾಖೆಯ ನಿಯಮದಂತೆ ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಬಸ್ಗಳಲ್ಲಿ ಡ್ರೈವರ್ ಕಮ್ ಕಂಡಕ್ಟರ್ (ಡಿ-ಕಂ) ವ್ಯವಸ್ಥೆ ಇರುತ್ತದೆ. ಅದರಂತೆ ಶಿವಮೊಗ್ಗದಿಂದ ನಿರ್ವಾಹಕ ವೆಂಕಟರಮಣ ನಾಯ್ಕ್ ಬಸ್ ಚಲಾಯಿಸುತ್ತಿದ್ದರು. ತಾವು ವಾಹನವನ್ನು ಅವರಿಗೆ ವಹಿಸಿ ವಿಶ್ರಾಂತಿ ಪಡೆಯುತ್ತಿದ್ದುದಾಗಿ ಗಣೇಶ್ ತಿಳಿಸಿದ್ದಾರೆ.
ಬಸ್ನ ಜಾಯಿಂಟ್ ಕಟ್ ಆಗಿರುವುದು ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ ಎಂಬುದಾಗಿ ಚಾಲಕ ಗಣೇಶ್ ತಿಳಿಸಿದ್ದಾರೆ. ಆದರೆ, ಅಪಘಾತ ಸಂಭವಿಸಿದ ತಕ್ಷಣವೇ ತಮಗೆ ಗಾಯಗಳಾಗಿದ್ದರಿಂದ ಹೆಚ್ಚಿನ ವಿವರ ತಿಳಿದಿಲ್ಲ. ಘಟನೆಯ ಬಳಿಕ ನೇರವಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗಿ ಅವರು ಹೇಳಿದ್ದಾರೆ.ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸಾಗರ ತಹಸೀಲ್ದಾರ್ ಡಾ. ಆರ್. ಪ್ರತಿಭಾ, ಪೊಲೀಸ್ ಉಪಾಧೀಕ್ಷಕ ಡಾ. ಬೆನಕ ಪ್ರಸಾದ್ ಹಾಗೂ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
