ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಬೆಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣಗಳ ಬಳಿಕ ಅತಿ ಹೆಚ್ಚು ಪ್ರಯಾಣಿಕರನ್ನು ಸೆಳೆದು ಉತ್ತಮ ವಿಮಾನಯಾನ ಸೇವೆಯ ಮೂಲಕ ಗಮನ ಸೆಳೆದಿದ್ದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ. ಹೈದರಾಬಾದ್, ತಿರುಪತಿ ಹಾಗೂ ಗೋವಾ ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸ್ಟಾರ್ ಏರ್ ಸಂಸ್ಥೆಯು ಇದೇ ನವೆಂಬರ್ 20 ರಂದು ತನ್ನ ಸೇವೆಯನ್ನು ಕೊನೆಗೊಳಿಸುತ್ತಿದ್ದು, ನವೆಂಬರ್ 21 ರಿಂದ ಮುಂದಿನ ದಿನಗಳ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ. ಈ ಹಿಂದೆ ಇಂಡಿಗೋ ಹಾಗೂ ಸ್ಪೈಸ್ ಜೆಟ್ ಸಂಸ್ಥೆಗಳು ತಮ್ಮ ಸೇವೆಯನ್ನು ನಿಲ್ಲಿಸಿದ್ದವು. ಇದೀಗ ಸ್ಟಾರ್ ಏರ್ ಕೂಡ ಹಾರಾಟ ನಿಲ್ಲಿಸುವ ಸಾಧ್ಯತೆ ಇರುವುದರಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆ ಸಂಪೂರ್ಣವಾಗಿ ನಿಲ್ಲುವ ಭೀತಿ ಎದುರಾಗಿದೆ.
ಬೆಂಗಳೂರು ಹಾಗೂ ಶಿವಮೊಗ್ಗ ನಡುವೆ ಇಂಡಿಗೋ ಸಂಸ್ಥೆ ವಿಮಾನಯಾನ ಆರಂಭಿಸಿತ್ತು. ಹಾಗೆಯೇ ಚೆನ್ನೈ ಮತ್ತು ಹೈದರಾಬಾದ್ ಸಂಪರ್ಕವನ್ನು ಸ್ಪೈಸ್ ಜೆಟ್ ಒದಗಿಸುತ್ತಿತ್ತು. ಇವುಗಳ ಜೊತೆಗೆ ಸ್ಟಾರ್ ಏರ್ ಸಂಸ್ಥೆಯು ಹೈದರಾಬಾದ್, ತಿರುಪತಿ ಮತ್ತು ಗೋವಾ ನಗರಗಳಿಗೆ ವಿಮಾನ ಹಾರಾಟ ನಡೆಸುತ್ತಿದ್ದ ಕಾರಣ ಶಿವಮೊಗ್ಗ ವಿಮಾನ ನಿಲ್ದಾಣವು ನಿತ್ಯವೂ ಪ್ರಯಾಣಿಕರಿಂದ ತುಂಬಿರುತ್ತಿತ್ತು. ಕೇವಲ ಅಲ್ಪಾವಧಿಯಲ್ಲಿಯೇ ಈ ನಿಲ್ದಾಣವು ಪ್ರಯಾಣಿಕರ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ, ತಾಂತ್ರಿಕ ಕಾರಣಗಳನ್ನು ನೀಡಿ ಇಂಡಿಗೋ ಮತ್ತು ಸ್ಪೈಸ್ ಜೆಟ್ ಸಂಸ್ಥೆಗಳು ಈಗಾಗಲೇ ತಮ್ಮ ಸೇವೆಯನ್ನು ನಿಲ್ಲಿಸಿವೆ. ಇದೀಗ ಉಡಾನ್ ಯೋಜನೆಯ ಅಡಿಯಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದದ ಅವಧಿ ಮುಕ್ತಾಯವಾಗುತ್ತಿರುವ ಕಾರಣ ಸ್ಟಾರ್ ಏರ್ ಕೂಡ ತನ್ನ ಬುಕಿಂಗ್ ಸೇವೆಯನ್ನು ನಿಲ್ಲಿಸಿದೆ.
ಶಿವಮೊಗ್ಗದಿಂದ ನಿತ್ಯ ಹೈದರಾಬಾದ್ ನಗರಕ್ಕೆ ಶೇಕಡ 80 ರಷ್ಟು ಹಾಗೂ ತಿರುಪತಿಗೆ ಶೇಕಡ 60 ರಷ್ಟು ಆಸನಗಳು ಭರ್ತಿಯಾಗುತ್ತಿದ್ದವು. ಇದರ ಜೊತೆಗೆ ಚಳಿಗಾಲ ಮತ್ತು ಬೇಸಿಗೆಯ ಅವಧಿಯಲ್ಲಿ ಗೋವಾ ರಾಜ್ಯಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದರು. ಕೇವಲ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ನೆರೆಯ ಉತ್ತರ ಕನ್ನಡ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಚಿತ್ರದುರ್ಗ ಹಾಗೂ ಹಾಸನ ಜಿಲ್ಲೆಗಳ ಜನರಿಗೂ ಈ ವಿಮಾನ ನಿಲ್ದಾಣ ಅತ್ಯಂತ ಅನುಕೂಲಕರವಾಗಿತ್ತು. ಈಗ ಏಕಾಏಕಿ ಬುಕಿಂಗ್ ಸ್ಥಗಿತಗೊಂಡಿರುವುದು ಈ 7 ಜಿಲ್ಲೆಗಳ ಪ್ರಯಾಣಿಕರಿಗೆ ತೀವ್ರ ಅನಾನುಕೂಲ ಉಂಟುಮಾಡಲಿದೆ.
ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಮೂರು ವರ್ಷಗಳ ಅವಧಿಗೆ 12.43 ಕೋಟಿ ರೂಪಾಯಿಗಳ ಸಹಾಯಧನ ಪಾವತಿಸುವ ಒಪ್ಪಂದವನ್ನು ಸ್ಟಾರ್ ಏರ್ ಸಂಸ್ಥೆಯೊಂದಿಗೆ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದ ನವೆಂಬರ್ 21 ಕ್ಕೆ ಮುಕ್ತಾಯವಾಗಲಿದ್ದು, ತದನಂತರ ಸಂಸ್ಥೆಯು ಸಾಮಾನ್ಯ ಮಾರುಕಟ್ಟೆ ದರದ ಆಧಾರದ ಮೇಲೆ ವಿಮಾನಯಾನ ಸೇವೆಯನ್ನು ಮುಂದುವರಿಸಲು ಮುಕ್ತ ಅವಕಾಶವಿದೆ. ಆದರೆ, ಒಪ್ಪಂದ ಅಂತ್ಯಗೊಂಡ ನಂತರ ಸೇವೆಯನ್ನು ಮುಂದುವರಿಸುವ ಅಥವಾ ಸ್ಥಗಿತಗೊಳಿಸುವ ಕುರಿತು ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ಈವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ರವಾನಿಸಿಲ್ಲ.
ಮತ್ತೊಂದೆಡೆ ಸ್ಟಾರ್ ಏರ್ ಸಂಸ್ಥೆಯು ಬೆಂಗಳೂರು ಮತ್ತು ಶಿವಮೊಗ್ಗ ನಡುವೆ ಹೊಸದಾಗಿ ವಿಮಾನ ಸೇವೆ ಆರಂಭಿಸುವ ಸಾಧ್ಯತೆಗಳು ಕೂಡ ತೀರಾ ಕಡಿಮೆಯಾಗಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಇಂಧನ ದರಗಳು ಹೆಚ್ಚಳವಾಗಿವೆ. ಹೀಗಾಗಿ ನಷ್ಟದ ಲೆಕ್ಕಾಚಾರ ಮುಂದಿಟ್ಟುಕೊಂಡು ಸಂಸ್ಥೆಯು ವಿಮಾನಯಾನ ಸೇವೆ ಒದಗಿಸಲು ರಾಜ್ಯ ಸರ್ಕಾರದಿಂದ ಹೆಚ್ಚಿನ ಸಹಾಯಧನವನ್ನು ನಿರೀಕ್ಷಿಸುತ್ತಿದೆ. ಆರಂಭದಲ್ಲಿ ಇಂಡಿಗೋ ಸಂಸ್ಥೆಯು ಬೆಂಗಳೂರು ಮತ್ತು ಶಿವಮೊಗ್ಗ ನಡುವೆ ಹಾರಾಟ ನಡೆಸುತ್ತಿದ್ದಾಗ ರಾಜ್ಯ ಸರ್ಕಾರವು ಪ್ರತಿ ಟಿಕೆಟ್ ಮೇಲೆ 500 ರೂಪಾಯಿಗಳ ಸಹಾಯಧನವನ್ನು ಒದಗಿಸುತ್ತಿತ್ತು. ಆದರೆ, ಆರ್ಥಿಕ ಹೊರೆಯ ಕಾರಣದಿಂದಾಗಿ ಹೊಸ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರವು ಒಪ್ಪಿಗೆ ಸೂಚಿಸಿಲ್ಲ.
ಈ ಎಲ್ಲ ಬೆಳವಣಿಗೆಗಳ ನಡುವೆಯೂ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರಿಂದ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಯನ್ನು ಪರಿಗಣಿಸಿ ಹೊಸ ಹೆಜ್ಜೆ ಇಡಲಾಗಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯ ಅಡಿಯಲ್ಲಿ ಶಿವಮೊಗ್ಗದಿಂದ ದೇಶದ ಪ್ರಮುಖ 12 ನಗರಗಳಿಗೆ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಅಂಡರ್ ಸರ್ವ್ ಏರ್ ಪೋರ್ಟ್ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಮುಂಬರುವ ಒಂದು ತಿಂಗಳ ಒಳಗಾಗಿ ಉಡಾನ್ ಯೋಜನೆಯಡಿ ಹೊಸ ಟೆಂಡರ್ ಕರೆಯುವ ಸಾಧ್ಯತೆಗಳಿದ್ದು, ಶಿವಮೊಗ್ಗದಿಂದ ಮತ್ತಷ್ಟು ನಗರಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನಗಳು ನಡೆದಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಶಿವಮೊಗ್ಗದಿಂದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಮೈಸೂರು, ದೆಹಲಿ, ಮುಂಬೈ, ಚೆನ್ನೈ, ಪುಣೆ, ಹೈದರಾಬಾದ್ ಮತ್ತು ಅಹಮದಾಬಾದ್ ಸೇರಿದಂತೆ ಒಟ್ಟು 12 ಪ್ರಮುಖ ನಗರಗಳಿಗೆ ಉಡಾನ್ ಯೋಜನೆಯಡಿ ವಿಮಾನ ಸೇವೆ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರವು ಈಗ ಉಡಾನ್ ಯೋಜನೆಯನ್ನು 5 ವರ್ಷಗಳ ಅವಧಿಗೆ ವಿಸ್ತರಣೆ ಮಾಡಿದೆ. ಆದರೆ, ಈ ಹೊಸ ಪ್ರಸ್ತಾವನೆಯಲ್ಲಿ ಎಷ್ಟು ಮಾರ್ಗಗಳಿಗೆ ಅನುಮತಿ ದೊರೆಯಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಒಂದು ವೇಳೆ ಉಡಾನ್ ಯೋಜನೆ ಮುಕ್ತಾಯಗೊಂಡ ಬಳಿಕ ಸ್ಟಾರ್ ಏರ್ ಸಂಸ್ಥೆಯು ಸಾಮಾನ್ಯ ದರದಲ್ಲಿ ಹಾರಾಟ ಮುಂದುವರಿಸದೆ ಹೋದರೆ ಹಾಗೂ ಹೊಸ ಉಡಾನ್ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಹೊಸ ಮಾರ್ಗಗಳಿಗೆ ಅನುಮತಿ ಸಿಗುವವರೆಗೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನಗಳ ಹಾರಾಟಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಆತಂಕ ನಿರ್ಮಾಣವಾಗಿದೆ.
