Shivamogga Flight Services / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಅಕ್ಟೋಬರ್ 15 ರಿಂದ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ವಿಮಾನ ಹಾರಾಟ ಆರಂಭಿಸಲು ಸ್ಟಾರ್ ಏರ್ ಸಿದ್ಧತೆ ನಡೆಸಿದೆ. ಈ ಸೇವೆಗೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಹಾಗೂ ಅನುಮೋದನೆಗಳನ್ನು ಶೀಘ್ರ ಮತ್ತು ಆದ್ಯತೆಯ ಆಧಾರದ ಮೇಲೆ ನೀಡುವಂತೆ ಸಂಸದ ಬಿ.ವೈ. ರಾಘವೇಂದ್ರ ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಒತ್ತಾಯಿಸಿದ್ದಾರೆ.
ಶಿವಮೊಗ್ಗದಿಂದ ಹೈದರಾಬಾದ್, ತಿರುಪತಿ ಹಾಗೂ ಗೋವಾ ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿರುವ ಸ್ಟಾರ್ ಏರ್ ಸಂಸ್ಥೆಯ ಪ್ರಸ್ತುತ ವಿಮಾನ ಕಾರ್ಯಾಚರಣೆಯನ್ನು 2026 ರ ನವೆಂಬರ್ ತಿಂಗಳ ನಂತರವೂ ಮುಂದುವರಿಸಲು ಕೇಂದ್ರ ಸಚಿವರಿಗೆ ಅವರು ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಸಂಸದರು, ಸ್ಟಾರ್ ಏರ್ 2023 ರ ನವೆಂಬರ್‌ನಿಂದ ಆರ್‌ಸಿಎಸ್-ಉಡಾನ್ ಯೋಜನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಸದ್ಯ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಲಭ್ಯವಿರುವ ಏಕೈಕ ನಿಗದಿತ ವಿಮಾನ ಸೌಲಭ್ಯವಾಗಿದೆ. ಈ ಸೇವೆಗೆ ನೀಡಲಾಗುತ್ತಿರುವ ಮೂರು ವರ್ಷಗಳ ಆರ್ಥಿಕ ಬೆಂಬಲವು ಇದೇ ನವೆಂಬರ್ ತಿಂಗಳಿಗೆ ಮುಕ್ತಾಯಗೊಳ್ಳಲಿದೆ.
ಆದ್ದರಿಂದ, ಪ್ರಯಾಣಿಕರ ಓಡಾಟಕ್ಕೆ ಹಾಗೂ ವಿಮಾನ ಸಂಪರ್ಕಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ತಡೆಯಲು ಹೊಸದಾಗಿ ಜಾರಿಗೆ ಬಂದಿರುವ ಉಡಾನ್ ಯೋಜನೆಯಡಿ ಈ ಮಾರ್ಗವನ್ನು ಮುಂದುವರಿಸುವಂತೆ ಕೋರಿರುವುದಾಗಿ ತಿಳಿಸಿದ್ದಾರೆ.
ವಿಮಾನಯಾನ ಸಂಸ್ಥೆಗಳು ತಮ್ಮ ನೆಟ್‌ವರ್ಕ್ ಯೋಜನೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸೇರ್ಪಡೆಗೊಳಿಸಲು ಸೂಕ್ತ ನಿರ್ದೇಶನ ನೀಡಬೇಕು, ಇದರಿಂದ ಹೊಸ ಮಾರ್ಗಗಳಿಗೆ ಶಿವಮೊಗ್ಗವನ್ನು ಪರಿಗಣಿಸಲು ಮತ್ತು ಇತರ ಪ್ರಮುಖ ನಗರಗಳಿಗೂ ವಿಮಾನ ಸಂಪರ್ಕವನ್ನು ಬಲಪಡಿಸಲು ಸಾಧ್ಯವಾಗುತ್ತದೆ
ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದರು
ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ ಬಳಿಕ ಪ್ರತಿಕ್ರಿಯೆ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ, ತಮ್ಮ ಮನವಿಗೆ ಕೇಂದ್ರ ಸರ್ಕಾರ ಹಾಗೂ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ತಕ್ಕ ಸ್ಪಂದನೆ ನೀಡಿದ್ದಾರೆ ಎಂದರು. ಶಿವಮೊಗ್ಗ ವಿಮಾನ ನಿಲ್ದಾಣವು ಮಲೆನಾಡು ಹಾಗೂ ಮಧ್ಯ ಕರ್ನಾಟಕ ಭಾಗದ ಜನರ ಅಭಿವೃದ್ಧಿಯ ಪ್ರಮುಖ ಹೆಬ್ಬಾಗಿಲು. ಬೆಂಗಳೂರು ಮತ್ತು ಶಿವಮೊಗ್ಗ ನಡುವಿನ ವಿಮಾನ ಸಂಪರ್ಕ ಆರಂಭ ಹಾಗೂ ನವೆಂಬರ್ ನಂತರವೂ ಪ್ರಸ್ತುತ ವಿಮಾನ ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು ತಮ್ಮ ಆದ್ಯತೆ ಎಂದಿದ್ದಾರೆ.
