ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಭಾವಪೂರ್ಣ ತೆರೆ ಬಿದ್ದಿದೆ. ರಾತ್ರಿಯಿಡೀ ಸಾಗಿದ ಮೆರವಣಿಗೆಯ ಬಳಿಕ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಭೀಮನ ಮಡುವಿನಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗಣಪತಿ ಮೂರ್ತಿಯನ್ನು ಶ್ರದ್ಧಾಭಕ್ತಿಯಿಂದ ವಿಸರ್ಜಿಸಲಾಯಿತು.ಟಹಿಂದೂ ಮಹಾಸಭಾ ಗಣಪತಿ ವಿಸರ್ಜನೆ
ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ
ವಿಸರ್ಜನಾ ಸ್ಥಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಆರಾಧ್ಯ ದೈವಕ್ಕೆ ಭಕ್ತರು ಭಾವಪೂರ್ಣವಾಗಿ ವಿದಾಯ ಹೇಳಿದರು. ವಿಸರ್ಜನೆಯ ಅಂತಿಮ ಕ್ಷಣಗಳಲ್ಲಿ ಯುವಕರ ಉತ್ಸಾಹ ಹೆಚ್ಚಾಗಿತ್ತು. ಭಕ್ತರು ‘ಹರ ಹರ ಮಹಾದೇವ’, ‘ಭಾರತ್ ಮಾತಾ ಕಿ ಜೈ’ ಹಾಗೂ ‘ಜೈ ಶಿವಾಜಿ’ ಘೋಷಣೆಗಳನ್ನು ಮೊಳಗಿಸಿದರು. ಗಣಪತಿ ಮೂರ್ತಿ ನೀರಿನಲ್ಲಿ ವಿಸರ್ಜನೆಯಾಗುವ ಕ್ಷಣವನ್ನು ಕಣ್ತುಂಬಿಕೊಳ್ಳಲು ನೆರೆದಿದ್ದ ಜನರು ತಮ್ಮ ಮೊಬೈಲ್ಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದರು.
ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಭೀಮನ ಮಡುವಿನಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ನೆರವೇರಿತು. ಇದರೊಂದಿಗೆ ಹಿಂದೂ ಮಹಾಸಭಾ ಗಣಪತಿಯ ಈ ವರ್ಷದ ರಾಜಬೀದಿ ಉತ್ಸವದ ಮೆರವಣಿಗೆಗೆ ತೆರೆ ಬಿದ್ದಿತು.
ಶಿವಮೊಗ್ಗ ಹಿಂದೂ ಸಂಘಟನಾ ಮಹಾಮಂಡಳಿಯ ಗಣಪತಿ ಉತ್ಸವ ಈ ಬಾರಿ ಸಾಂಸ್ಕೃತಿಕ ಹಬ್ಬದ ಸ್ವರೂಪ ಪಡೆದುಕೊಂಡಿತ್ತು. ಅಮೀರ್ ಅಹಮದ್ ವೃತ್ತದಲ್ಲಿ ಸಿಂಹಾರೂಢ ಭವಾನಿ ಛತ್ರಪತಿ ಶಿವಾಜಿಗೆ ಆಯುಧ ಪ್ರದಾನ ಮಾಡುವ ಕಲಾಕೃತಿಯನ್ನು ನಿರ್ಮಿಸಲಾಗಿತ್ತು. ಈ ಕಲಾಕೃತಿ ಸೇರಿದಂತೆ ನಗರದ ಹಲವೆಡೆ ಮಾಡಿದ್ದ ಅಲಂಕಾರಗಳನ್ನು ವೀಕ್ಷಿಸಲು ಜನಸ್ತೋಮ ಹರಿದುಬಂದಿತ್ತು. ನಗರದ ಪ್ರಮುಖ ಪ್ರವೇಶ ದ್ವಾರಗಳು, ಮುಖ್ಯ ರಸ್ತೆಗಳು ಹಾಗೂ ವೃತ್ತಗಳನ್ನು ಹಿಂದೂ ಧರ್ಮವನ್ನು ಸಂಕೇತಿಸುವ ಕೇಸರಿ ಬಾವುಟ ಮತ್ತು ತೋರಣಗಳಿಂದ ಅಲಂಕರಿಸಲಾಗಿತ್ತು. ಮೆರವಣಿಗೆ ಸಾಗಿದ ಮಾರ್ಗದ ಉದ್ದಕ್ಕೂ ಮಾಡಿದ್ದ ಅಲಂಕಾರ ಜನರನ್ನು ಸೆಳೆಯಿತು.
ಪೊಲೀಸ್ ಬಂದೋಬಸ್ತ್ನ ನಡುವೆ ಲೆಕ್ಕಕ್ಕೆ ಮಿಗಿಲಾಗಿ ಜಮಾಯಿಸಿದ್ದ ಜನಸ್ತೋಮವನ್ನ ನೋಡುವುದೆ ಕಣ್ಣಿಗೆ ನಿನ್ನೆ ಹಬ್ಬವಾಗಿತ್ತು, ಗುರುತು ಪರಿಚಯಗಳ ಎಲ್ಲೇ ಮೀರಿ, ಯುವಕ-ಯುವತಿಯರು ಎಲ್ಲರೊಂದಿಗೆ ಕುಣಿದು ಕುಪ್ಪಳಿಸಿದರು!ರಾಜಬೀದಿಯ ಆಯಕಟ್ಟಿನ ಸ್ಥಳಗಳಲ್ಲ ಜನರು ಸಂಭ್ರಮಿಸಲಿ ಎಂತಲೇ ಡಿಜೆ, ಡೊಳ್ಳು, ನಾಸಿಕ್ ವಾಧ್ಯ, ಚಂಡೆ ಇತ್ಯಾದಿ ವಿಶೇಷ ವ್ಯವಸ್ಥೆಗಳನ್ನ ಕಲ್ಪಿಸಲಾಗಿತ್ತು.
ವಿದೇಶಗಳಲ್ಲಿ ನಡೆಯುವ ಸ್ಟ್ರೀಟ್ ಫೆಸ್ಟಿವಲ್ ಮಾದರಿಯಲ್ಲಿ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಮಾರ್ಪಾಡಾಗುತ್ತಿದೆ. ಕೇವಲ ಭಕ್ತಿಗಷ್ಟೆ ಸೀಮೀತವಾಗದ ಉತ್ಸವವೂ ನಮ್ಮೂರ ನಮ್ಮನೆಯ ಹಬ್ಬದ ಸಡಗರದಂತೆ ಪರಿವರ್ತನೆಗೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಗಲ್ಲಿ ಗಲ್ಲಿಗಳಿಂದ ಜನರು ಬಂದು ರಾಜಬೀದಿಯಲ್ಲಿ ಕುಟುಂಬ ಸಮೇತ ಸಂಭ್ರಮಿಸ್ತಿರುವ ದೃಶ್ಯಗಳು ನಿನ್ನೆ ಎಲ್ಲೆಡೆಯು ಕಾಣ ಸಿಕ್ಕಿತ್ತು. 12 ಗಂಟೆಯ ಹೊತ್ತಿಗೂ ಕುವೆಂಪು ರಸ್ತೆಯಲ್ಲಿ ಹತ್ತಾರು ಸಾವಿರ ಜನರು ನೆರೆದಿದ್ದರು! ಈ ಸಲ ಇನ್ನೂ ವಿಶೇಷವಾಗಿ ಕುಟುಂಬದ ಜೊತೆಗೆ ಬಂದು ಬಳಗ ಸಮೇತರಾಗಿ ಬರುತ್ತಿದ್ದ ಮಂದಿ, ತಮ್ಮ ವರೊಂದಿಗೆ ಹೆಜ್ಜೆ ಗೆ ಹೆಜ್ಜೆ ಕೊಟ್ಟು ಕುಣಿಯುತ್ತಿದ್ದರು!
