Shivamogga-Sagara Highway 69 / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕಂಟೇನರ್ ಲಾರಿಯೊಂದು ಮರಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ ಬಗ್ಗೆ ನಿನ್ನೆದಿನ ವರದಿಯಾಗಿದೆ. ಶಿವಮೊಗ್ಗ- ಸಾಗರ ರಾಷ್ಟ್ರೀಯ ಹೆದ್ದಾರಿ-69ರಲ್ಲಿ ಈ ಘಟನೆ ಸಂಭವಿಸಿದೆ.
ಇಲ್ಲಿನ ಉಳ್ಳೂರು ಕೆರೆ ಸಮೀಪ ಘಟನೆ ನಡೆದಿದೆ. ಸಾಗರ ಕಡೆಯಿಂದ ಶಿವಮೊಗ್ಗ ಮಾರ್ಗ ವಾಗಿ ಚಲಿಸುತ್ತಿದ್ದ ಕಂಟೇನರ್ ಲಾರಿ ಉಳ್ಳೂರು ಕೆರೆ ಬಳಿ ಬಂದಾಗ ರಸ್ತೆ ಬದಿಗೆ ವಾಲಿಕೊಂಡಿದ್ದ ಮರವನ್ನು ತಪ್ಪಿಸಲು ಚಾಲಕ ಯತ್ನಿಸಿದ್ದಾನೆ.
ಈ ವೇಳೆ ವಾಹನದ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಂಟೇನರ್‌ಗೆ ಹಾನಿಯಾಗಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ನಡೆದ ಸಮಯದಲ್ಲಿ ಹೆದ್ದಾರಿಯಲ್ಲಿ ಇತರ ವಾಹನಗಳ ದಟ್ಟಣೆ ಕಡಿಮೆ ಇದ್ದಿದ್ದರಿಂದ ಸಂಭವಿಸ ಬಹುದಾಗಿದ್ದ ದೊಡ್ಡಮಟ್ಟದ ಅನಾಹುತವೊಂದು ತಪ್ಪಿದೆ.
