ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕೃಷಿ ಮೇಳದ ಅಂಗವಾಗಿ ಆಯೋಜಿಸಿದ್ದ ವಲಯ ಮಟ್ಟದ ಶ್ವಾನ ಪ್ರದರ್ಶನ ನಿನ್ನೆ ದಿನ ವಿಶೇಷವಾಗಿ ಗಮನ ಸೆಳೆಯಿತು. ಶ್ವಾನ ಪ್ರದರ್ಶನದಲ್ಲಿ ವಿವಿಧ ತಳಿಗಳ 46 ಶ್ವಾನಗಳು ಭಾಗವಹಿಸಿದ್ದವು. ಒಂದಕ್ಕಿಂತ ಒಂದು ಅಟ್ರಾಕ್ಟಿವ್ ಮೂಡ್ ನಲ್ಲಿ ಕಾಣುತ್ತಿದ್ದ ಶ್ವಾನಗಳು ತಮ್ಮ ಮಾಲೀಕರ ಸೂಚನೆಯಂತೆ ವಿವಿಧ ಸ್ಪರ್ಧೆಯಲ್ಲಿ ನೆರೆದವರನ್ನ ರಂಜಿಸಿದವು.
ವಲಯ ಮಟ್ಟದ ಡಾಗ್ ಶೋ ಮತ್ತು ಸ್ಪರ್ಧೆಗೆ ಕುಲಪತಿ ಡಾ. ಎಂ.ವಿ. ಧನಂಜಯ, ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಪ್ರಕಾಶ್ ನಡೂರು ಹಾಗೂ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ನಾಗರಾಜ್ ಚಾಲನೆ ನೀಡಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶ್ವಾನಗಳು, ಮರಿ ಮತ್ತು ವಯಸ್ಕ ಎಂಬ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧಿಸಿದವು.
ಡಾಗ್ ಶೋ ನಲ್ಲಿ ನಾಯಿಮರಿಗಳ ವಿಭಾಗದಲ್ಲಿ ವಿವೇಕ್ ಎಸ್. ಶೇಟ್ ಅವರ ಜರ್ಮನ್ ಶೆಪರ್ಡ್ ತಳಿಯ ನಾಯಿಮರಿ ಪ್ರಥಮ ಬಹುಮಾನ ಪಡೆಯಿತು. ಹಾಸನದ ಅನಿಲ್ ಕುಮಾರ್ ಅವರ ಡಾಬರ್ಮನ್ ತಳಿಯ ನಾಯಿಮರಿ ದ್ವಿತೀಯ ಸ್ಥಾನ ಪಡೆದರೆ, ಶಿವಮೊಗ್ಗದ ಪ್ರಜ್ವಲ್ ಅವರ ಮುಧೋಳ ತಳಿಯ ನಾಯಿಮರಿ ತೃತೀಯ ಬಹುಮಾನ ಗಳಿಸಿತು.ವಯಸ್ಕ ಶ್ವಾನಗಳ ವಿಭಾಗದಲ್ಲಿ ಹಾಸನದ ದೇವರಾಜ್ ಅವರ ಬಾಕ್ಸರ್ ತಳಿಯ ಶ್ವಾನ ಪ್ರಥಮ ಸ್ಥಾನ ಪಡೆಯಿತು. ಶಿವಮೊಗ್ಗದ ಕೆ.ಬಿ. ಅಭಿಷೇಕ್ ಅವರ ಲ್ಯಾಬ್ ತಳಿಯ ಶ್ವಾನ ದ್ವಿತೀಯ ಸ್ಥಾನ ಹಾಗೂ ಚಿಕ್ಕಮಗಳೂರಿನ ರೋಷನ್ ಅವರ ಪೊಮೇರಿಯನ್ ತಳಿಯ ಶ್ವಾನ ತೃತೀಯ ಸ್ಥಾನ ಪಡೆಯಿತು.
ಗಮನ ಸೆಳೆದ ಸಿರಿಧಾನ್ಯ
ಕೃಷಿ ಮೇಳದಲ್ಲಿ ಶ್ವಾನ ಪ್ರದರ್ಶನದ ಜೊತೆಗೆ ಸಿರಿಧಾನ್ಯಗಳು ಮತ್ತು ಮರೆತುಹೋದ ಸಾಂಪ್ರದಾಯಿಕ ಖಾದ್ಯಗಳ ಪಾಕ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 40ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಸಿರಿಧಾನ್ಯಗಳಿಂದ ತಯಾರಿಸಿದ ಸಿಹಿ ಮತ್ತು ಖಾರದ ಖಾದ್ಯಗಳೊಂದಿಗೆ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿದರು. ಸಿರಿಧಾನ್ಯದ ಸಿಹಿ ಖಾದ್ಯಗಳ ವಿಭಾಗದಲ್ಲಿ ಚಿತ್ರದುರ್ಗದ ಶ್ರೀದೇವಿ ಅವರು ತಯಾರಿಸಿದ ಬರಗು ಸಿರಿಧಾನ್ಯದ ಐಸ್ಕ್ರೀಂ ಪ್ರಥಮ ಬಹುಮಾನ ಪಡೆಯಿತು. ಭದ್ರಾವತಿಯ ಪ್ರತಿಭಾ ಪಾಟೀಲ್ ಅವರು ಸಿದ್ಧಪಡಿಸಿದ ಊದಲು ಒತ್ತು ಶಾವಿಗೆ ಪಾಯಸ ದ್ವಿತೀಯ ಸ್ಥಾನ ಪಡೆದರೆ, ಶಿವಮೊಗ್ಗದ ಅನಿತಾ ಅವರು ತಯಾರಿಸಿದ ರಾಗಿ ಕೇಕ್ ತೃತೀಯ ಬಹುಮಾನ ಗಳಿಸಿತು.
ಸಿರಿಧಾನ್ಯದ ಖಾರದ ಖಾದ್ಯಗಳ ವಿಭಾಗದಲ್ಲಿ ಎಚ್.ಜಿ. ಶ್ರೀಲತಾ ಅವರು ತಯಾರಿಸಿದ ಸಿರಿಧಾನ್ಯಗಳ ತಾಳಿಪಟ್ಟು ಪ್ರಥಮ ಬಹುಮಾನ ಪಡೆಯಿತು. ಸುಷ್ಮಾ ಶಾನ್ ಬಾಗ್ ಅವರ ಸಿರಿಧಾನ್ಯಗಳ ಮುರುಕು ದ್ವಿತೀಯ ಸ್ಥಾನ ಹಾಗೂ ವಾಣಿ ಭಟ್ ಅವರ ರಾಗಿ ಮಿನಿಬಾಲ್ಸ್ ತೃತೀಯ ಸ್ಥಾನ ಪಡೆಯಿತು. ಮಹಾಲಕ್ಷ್ಮಿ ಅವರು ತಯಾರಿಸಿದ ಸಿರಿಧಾನ್ಯಗಳ ರೆಡಿ ಟು ಕುಕ್ ಸಾಂಬಾರ್ ರೈಸ್ಗೆ ಸಮಾಧಾನಕರ ಬಹುಮಾನ ಲಭಿಸಿತು. ಮರೆತುಹೋದ ಸಾಂಪ್ರದಾಯಿಕ ಖಾದ್ಯಗಳ ವಿಭಾಗದಲ್ಲಿ ಮಾಲತೇಶ್ ಶಿಡಗನಾಳ್ ಅವರು ತಯಾರಿಸಿದ ಜೋಳದ ಮುಟಗಿ ಪ್ರಥಮ ಬಹುಮಾನ ಪಡೆಯಿತು. ಸುಶೀಲ ಅವರು ಸಿದ್ಧಪಡಿಸಿದ ಬೆಲ್ಲಮಿಶ್ರಿತ ಸಿಹಿಕುಂಬಳದ ಕಡಬು ದ್ವಿತೀಯ ಸ್ಥಾನ ಪಡೆದರೆ, ಅರ್ಚನಾ ಅವರು ತಯಾರಿಸಿದ ಓಲಗದ ಕಡಬು ತೃತೀಯ ಬಹುಮಾನ ಗಳಿಸಿತು.
