ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಸಂಸತ್ತು ಹಾಗೂ ಶಾಸನಸಭೆಗಳಲ್ಲಿ ಕಲಾಪಗಳು ಹೇಗೆ ನಡೆಯುತ್ತವೆ? ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ವಾಕ್ಸಮರ, ಜ್ವಲಂತ ಸಮಸ್ಯೆಗಳ ಮೇಲಿನ ಪ್ರಶ್ನೋತ್ತರ ಹಾಗೂ ಬಿಲ್‌ಗಳ ಮಂಡನೆ ಹೇಗಿರುತ್ತದೆ ಎಂಬುದಕ್ಕೆ ಶಿವಮೊಗ್ಗದ ಜಿಲ್ಲಾ ಪಂಚಾಯತ್ ಸಭಾಂಗಣ ಮಂಗಳವಾರ ಸಾಕ್ಷಿಯಾಯಿತು.
ಶಾಲಾ ಶಿಕ್ಷಣ ಇಲಾಖೆ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಕಾನೂನು ಇಲಾಖೆಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ 2026-27ನೇ ಸಾಲಿನ ತಾಲೂಕು ಮಟ್ಟದ ಯುವ ಸಂಸತ್ ಕಲಾಪ ಅಕ್ಷರಶಃ ಪ್ರಬುದ್ಧ ರಾಜಕಾರಣಿಗಳ ನೈಜ ಸದನವನ್ನು ಕಣ್ಮುಂದೆ ತಂದಿತ್ತು. ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಸ್ನಾತಕೋತ್ತರ ಹಂತದ ಒಟ್ಟು 112 ವಿದ್ಯಾರ್ಥಿಗಳು ಸಭಾಪತಿ, ಮುಖ್ಯಮಂತ್ರಿ, ಸಚಿವರು, ಹಾಗೂ ವಿರೋಧ ಪಕ್ಷದ ನಾಯಕರಾಗಿ ಪಾತ್ರ ನಿರ್ವಹಿಸಿ ಗಹನವಾದ ಚರ್ಚೆಯಲ್ಲಿ ತೊಡಗುವ ಮೂಲಕ ಭರವಸೆಯ ಯುವ ನಾಯಕರಾಗಿ ಹೊರಹೊಮ್ಮಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಶಾಸಕ ಆರ್.ಕೆ. ಸಿದ್ದರಾಮಣ್ಣ, ಪ್ರತಿಯೊಬ್ಬ ಸಾಮಾನ್ಯ ನಾಗರಿಕನಲ್ಲೂ ಶಾಸಕನಾಗುವ ಅವಕಾಶವಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಉತ್ತಮ ಶಾಸಕರು ಆಯ್ಕೆಯಾಗಿ ಬರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆ (Discuss), ವಾದ-ವಿವಾದ (Debate), ಮತ್ತು ಭಿನ್ನಾಭಿಪ್ರಾಯಗಳ ದಾಖಲಾತಿ (Dissent) ಎಂಬ ಮೂರು ಪ್ರಮುಖ ಸ್ತಂಭಗಳಿದ್ದು, ಇವು ಅತ್ಯಂತ ಮುಖ್ಯ ಪಾತ್ರ ವಹಿಸುತ್ತವೆ, ಎಂದು ಕಿವಿಮಾತು ಹೇಳಿದರು.
ಯುವ ಸಂಸತ್ ಕಲಾಪದ ಹೈಲೈಟ್ಸ್: ವಿಪಕ್ಷಗಳ ಪ್ರಶ್ನೆ, ಸಚಿವರ ದಿಟ್ಟ ಉತ್ತರ!
ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವ ಕುರಿತು ವಿರೋಧ ಪಕ್ಷದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಎಲ್ಲಾ ಠಾಣೆಗಳಲ್ಲಿ ಮಹಿಳಾ ಸಹಾಯವಾಣಿ ಮಾರ್ಗದರ್ಶಿ ಕೇಂದ್ರ ಸ್ಥಾಪಿಸಲಾಗಿದೆ, 112 ತುರ್ತು ವಾಹನ ಬಲಪಡಿಸಲಾಗಿದೆ ಹಾಗೂ ಫಾಸ್ಟ್ ಟ್ರ್ಯಾಕ್ ಕೋರ್ಟ್ ಕಾರ್ಯಾಚರಣೆಗೊಳಿಸಲಾಗಿದೆ, ಎಂದರು. 18 ವರ್ಷದೊಳಗಿನ ಮಕ್ಕಳ ಸುರಕ್ಷತೆಗೆ ಪೋಕ್ಸೋ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂದು ಕಾನೂನು ಸಚಿವರು ಸ್ಪಷ್ಟಪಡಿಸಿದರು.
65 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿ ಕುರಿತ ಪ್ರಶ್ನೆಗೆ, ಹಂತ-ಹಂತವಾಗಿ ನೇಮಕಾತಿಗೆ ಆರ್ಥಿಕ ಇಲಾಖೆ ಸಮ್ಮತಿಸಿದೆ ಎಂದು ಸಿಎಂ (ವಿದ್ಯಾರ್ಥಿ) ಉತ್ತರಿಸಿದರು. ಕೆಪಿಎಸ್‌ಸಿ ಅಕ್ರಮಗಳ ಕುರಿತ ಬಿಸಿಬಿಸಿ ಚರ್ಚೆಗೆ ಉತ್ತರಿಸಿದ ಡಿಸಿಎಂ, ಪಾರದರ್ಶಕತೆ ತರಲು ಪರೀಕ್ಷಾ ಕೇಂದ್ರಗಳಲ್ಲಿ ಡಿಜಿಟಲ್ ಕಣ್ಗಾವಲು ಹಾಗೂ ಸಿಸಿಟಿವಿ ಅಳವಡಿಸಲಾಗುತ್ತಿದೆ, ಎಂದು ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪೌಷ್ಟಿಕತೆಯ ಗಂಭೀರ ವಿಷಯ ಪ್ರಸ್ತಾಪವಾದಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಉತ್ತರಿಸಿ, ಅಂಗನವಾಡಿ ಕೇಂದ್ರಗಳ ಮೂಲಕ ಮೊಟ್ಟೆ, ಬಾಳೆಹಣ್ಣು ಹಾಗೂ ಶಕ್ತಿವರ್ಧಕ ಆಹಾರ ನೀಡಲಾಗುತ್ತಿದೆ. ಎನ್‌ಆರ್‌ಸಿಗಳ ಮೂಲಕ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ, ಎಂದು ವಿವರಿಸಿದರು.
ಶೇ.50ರಷ್ಟು ಸರ್ಕಾರಿ ಶಾಲೆಗಳಿಗೆ ಮಾತ್ರ ಇಂಟರ್ನೆಟ್ ಇರುವ ಬಗ್ಗೆ ಪ್ರಸ್ತಾಪವಾದಾಗ, ಬಿಎಸ್‌ಎನ್‌ಎಲ್ ಸಹಯೋಗದೊಂದಿಗೆ ಡಿಜಿಟಲ್ ಕನೆಕ್ಟಿವಿಟಿ ಯೋಜನೆಯಡಿ ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವರು ಉತ್ತರಿಸಿದರು. ಬಿಡದಿ ಟೌನ್‌ಶಿಪ್ ಯೋಜನೆಯಡಿ ಭೂಸಂತ್ರಸ್ತರಿಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ ಎಂಬ ಮಾಹಿತಿಯೂ ಸದನದಲ್ಲಿ ಮಂಡನೆಯಾಯಿತು.
ದಸರಾ ಜಂಬೂಸವಾರಿ ವೇಳೆ ಅಂಬಾರಿ ಆನೆ ಬೆದರಿದ ಅವಘಡದ ಕುರಿತ ಪ್ರಶ್ನೆಗೆ ಉತ್ತರಿಸಿದ ಅರಣ್ಯ ಸಚಿವರು, ತಜ್ಞರ ಸಮಿತಿಯಿಂದ ವರದಿ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ದಸರೆಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಶಬ್ದ, ಜನಸಂದಣಿ ಮತ್ತು ಬೆಳಕಿನ ಬಗ್ಗೆ ಸುದೀರ್ಘ ತರಬೇತಿ ಹಾಗೂ ಬಿಗಿಯಾದ ಎಸ್‌ಒಪಿ (SOP) ಜಾರಿಗೊಳಿಸಲಾಗುವುದು, ಎಂದರು.
ಕೃಷಿ ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಲು ‘ಡಿಬಿಟಿ’ ಹಾಗೂ ಆನ್‌ಲೈನ್ ನೋಂದಣಿ, ಮತ್ತು ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರದ ‘ಪಿಎಂ ಇ-ಬಸ್ ಸೇವಾ’ ಯೋಜನೆಯಡಿ ಎಲೆಕ್ಟ್ರಿಕ್ ಬಸ್‌ಗಳ ಬಳಕೆಗೆ ಒತ್ತು ನೀಡಲಾಗುತ್ತಿದೆ ಎಂದು ಆಯಾ ಇಲಾಖಾ ಸಚಿವರು ಉತ್ತರಿಸಿದರು.
ವಿಧಾನ ಪರಿಷತ್ ಸದಸ್ಯರಾಗಿ ಪಾತ್ರ ನಿರ್ವಹಿಸಿದ ಡಿ.ಎಸ್. ಅರುಣ್, ಕೇವಲ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರ್ಕಾರ ಆರ್ಥಿಕ ನಷ್ಟಕ್ಕೆ ಸಿಲುಕಿದೆಯೇ? ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆಯೇ? ಎಂದು ಪ್ರಶ್ನಿಸಿದರು. ಇದಕ್ಕೆ ಮುಖ್ಯಮಂತ್ರಿ, ಅಭಿವೃದ್ಧಿ ಕುಂಠಿತಗೊಂಡಿಲ್ಲ. ಗ್ಯಾರಂಟಿ ಯೋಜನೆಗಳು ಬಡ ಹಾಗೂ ಮಧ್ಯಮ ವರ್ಗದ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿವೆ. ಜಿಎಸ್‌ಡಿಪಿ ಪ್ರಗತಿಯಲ್ಲಿದ್ದು, ತೆರಿಗೆ ಸಂಗ್ರಹವೂ ಉತ್ತಮವಾಗಿದೆ, ಎಂದು ಅಂಕಿ-ಅಂಶಗಳೊಂದಿಗೆ ಸಮರ್ಥಿಸಿಕೊಂಡರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಮುಂಗಡ ಸೂಚನೆ ಇಲ್ಲದೆ ಸಾರ್ವಜನಿಕ ಪ್ರಾಮುಖ್ಯತೆಯ ತುರ್ತು ವಿಷಯಗಳನ್ನು ಪ್ರಸ್ತಾಪಿಸಲು ಮಧ್ಯಾಹ್ನ 12:00 ಗಂಟೆಗೆ ನೀಡುವ ಶೂನ್ಯ ವೇಳೆಯ (Zero Hour) ಮಹತ್ವವನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಮಲೆನಾಡಿನ ಪರಿಸರ ಹಾಗೂ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಕಸ್ತೂರಿ ರಂಗನ್ ವರದಿಯ ಸಾಧಕ-ಬಾಧಕಗಳ ಕುರಿತು ಯುವ ಸದಸ್ಯರು ಗಹನವಾದ ಚರ್ಚೆ ನಡೆಸಿದರು. ಪರಿಸರವನ್ನು ಉಳಿಸುತ್ತಲೇ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವ ಬಗ್ಗೆ ಅಭಿಪ್ರಾಯ ಮಂಡಿಸಿದರು. ಯುವ ಜನತೆಯನ್ನು ಕಾಡುತ್ತಿರುವ ಡ್ರಗ್ಸ್ ಜಾಲವನ್ನು ಮಟ್ಟಹಾಕಲು ‘ಮಾದಕ ವಸ್ತುಗಳ ನಿಯಂತ್ರಣ ಮಸೂದೆ’ ಹಾಗೂ ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ದೌರ್ಜನ್ಯ ತಡೆ ಮಸೂದೆಗಳನ್ನು ಸದನದಲ್ಲಿ ಮಂಡಿಸಿ ಸರ್ವಾನುಮತದಿಂದ ಚರ್ಚಿಸಲಾಯಿತು.
ಒಂದು ದಿನದ ಮಟ್ಟಿಗೆ ಯುವ ಸಂಸತ್ತಿನ ಸಭಾಪತಿಯಾಗಿದ್ದ ವಿದ್ಯಾರ್ಥಿನಿ ಅನನ್ಯ ಮಾತನಾಡಿ, ಜನಪ್ರತಿನಿಧಿಗಳ ಹಾಗೂ ನಾಯಕರ ಜವಾಬ್ದಾರಿಗಳು ಹೇಗಿರುತ್ತವೆ ಎಂಬುದನ್ನು ನಾವು ಪ್ರತ್ಯಕ್ಷವಾಗಿ ತಿಳಿದುಕೊಂಡೆವು. ಸಂವಿಧಾನದ ಅರ್ಥ ಹಾಗೂ ಸಂಸತ್ತಿನ ಕಲಾಪಗಳ ಬಗ್ಗೆ ಸ್ಪಷ್ಟ ಅರಿವು ಮೂಡಿತು, ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಕಾನೂನು ಕಾಲೇಜು ಪ್ರಾಂಶುಪಾಲರಾದ ಅನಲಾ, ನಿವೃತ್ತ ಉಪನ್ಯಾಸಕ ದಿಲೀಪ್ ಕುಮಾರ್ ಪಾಂಡೆ, ಘನಶ್ಯಾಮ, ಉಪನ್ಯಾಸಕ ಮಂಜುನಾಥ್ ಹಾಗೂ ಶಿಕ್ಷಕ ಸತೀಶ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
