ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದಸರಾ ಜಂಬೂ ಸವಾರಿಯಲ್ಲ ಆದ ಆದ್ವಾನದಲ್ಲಿ ಉತ್ಸವ ಮೂರ್ತಿಗೆ ಹಾನಿಯಾಗಿತ್ತು. ಅಲ್ಲದೆ ಇದೊಂದು ವಿಷಗಳಿಗೆ, ಅಪಶಕುನ ಹಾಗೂ ದೋಷ ಎಂದು ಹಲವರು ಪರಿಗಣಿಸಿದ್ದರು. ಈ ನಿಟ್ಟಿನಲ್ಲಿ ಡಿಸಿ ನೇತೃತ್ವದ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು. ಇದೀಗ ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಹಾನಗರ ಪಾಲಿಕೆ ವತಿಯಿಂದ ಶಾಸಕ ಎಸ್.ಎನ್. ಚನ್ನಬಸಪ್ಪ (ಚಿನ್ನಿ) ಅವರ ನೇತೃತ್ವದಲ್ಲಿ ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ಹೋಮ-ಹವನ, ಶಾಂತಿ ಪೂಜೆ ಹಾಗೂ ವಿಶೇಷ ಪ್ರಾರ್ಥನೆಗಳು ಆರಂಭವಾಗಿದೆ.
ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳ ದಿವ್ಯ ಮಾರ್ಗದರ್ಶನದಂತೆ ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನವೆಂಬರ್ 3 ರಿಂದ 7ರವರೆಗೆ ವಿಶೇಷವಾಗಿ ಒಂದು ಲಕ್ಷ ಗಾಯತ್ರಿ ಜಪ ನಡೆಯಲಿದೆ. ನವೆಂಬರ್ 3ರಂದು ಬೆಳಿಗ್ಗೆ ಮಹಾಸಂಕಲ್ಪ, ಶ್ರೀ ವಿಷ್ವಕ್ಸೇನ ಪೂಜೆ, ನವಗ್ರಹ ಪೂಜೆ ಹಾಗೂ ಹೋಮ ಪೂರ್ಣಾಹುತಿ ನೆರವೇರಿದೆ.
ನವೆಂಬರ್ 4ರಂದು ಒಂದು ಲಕ್ಷ ಗಾಯತ್ರಿ ಜಪದ ಜೊತೆಗೆ ಪುರುಷ ಸೂಕ್ತ ಹೋಮ ನಡೆಯಲಿದ್ದು, ನವೆಂಬರ್ 5 ಮತ್ತು 6ರಂದು ಇಡೀ ದಿವಸ ಗಾಯತ್ರಿ ಜಪ ಹಾಗೂ ಗಾಯತ್ರಿ ಹೋಮ ಸಂಪನ್ನಗೊಳ್ಳಲಿದೆ. ನವೆಂಬರ್ 7ರಂದು ಬೆಳಿಗ್ಗೆ ಮಹಾ ಸುದರ್ಶನ ಮೂಲ ಮಂತ್ರ ಹೋಮ ಮತ್ತು ಪ್ರಾಯಶ್ಚಿತ ಹೋಮ ನಡೆಯಲಿದೆ
ಅದೇ ದಿನ ಸಂಜೆ ಹಿತ್ತಾಳೆಯ ಗಜವಾಹನೋತ್ಸವ ಹಾಗೂ ಅಮ್ಮನವರ ತ್ರಿಶೂಲವನ್ನು ಇಟ್ಟು ಆನೆಯು ಚಲಿಸಿದ ರಸ್ತೆಯಲ್ಲಿಯೇ ಉತ್ಸವವನ್ನು ಆಯೋಜಿಸಲಾಗಿದೆ. ವಾದ್ಯ, ವೇದ ಘೋಷ, ಛತ್ರಿ ಚಾಮರ ಹಾಗೂ ಅಶ್ವವಾಹನ ಸೇವೆಗಳೊಂದಿಗೆ ದೋಷ ನಿವಾರಣೆ ಮಾಡಲಾಗುತ್ತದೆ.
ಇದೇ ವೇಳೆ ಶ್ರೀ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿಯೂ ನವೆಂಬರ್ 3 ರಿಂದ 6ರವರೆಗೆ ವಿಶೇಷ ಪೂಜೆಗಳು ಜರುಗಲಿವೆ. ನವೆಂಬರ್ 3ರಂದು ಮಹಾಗಣಪತಿ ಪೂಜೆ, ಕೂಷ್ಮಾಂಡಪ್ರಾಯಶ್ಚಿತ ಹೋಮ ಹಾಗೂ ಸಂಜೆ ದಶಾವರ್ತನ ಚಂಡಿಕಾ ಪಾರಾಯಣ ನಡೆಯಲಿದೆ.
ನವೆಂಬರ್ 4ರಂದು ನವಚಂಡಿಕಾ ಹೋಮ ಹಾಗೂ ಬ್ರಾಹ್ಮಣ ಸುಹಾಸಿನಿ ಸಂತರ್ಪಣೆ ಆಯೋಜಿಸಲಾಗಿದೆ. ನವೆಂಬರ್ 5ರಂದು ರಾಕ್ಷೋಘ್ನ ಅಘೋರಾಸ್ತ್ರ ಮಂತ್ರಜಪ ಹಾಗೂ ಸಂಜೆ ವಾಸ್ತು ರಾಕ್ಷೋಘ್ನ ಅಘೋರಾಸ್ತ್ರ ಹೋಮ ನಡೆಯಲಿದ್ದು, ನವೆಂಬರ್ 6ರಂದು ದುರ್ಗಾಸೂಕ್ತ ಹೋಮ ಮತ್ತು ಪೂರ್ಣಾಹುತಿಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.
ಈ ಸಂಬಂಧ ಪೋಸ್ಟರ್ ಹಂಚಿಕೊಂಡಿರುವ ಶಾಸಕ ಎಸ್.ಎನ್. ಚನ್ನಬಸಪ್ಪ ನಮ್ಮ ನಗರಕ್ಕೆ ಭವಿಷ್ಯದಲ್ಲಿ ಯಾವುದೇ ವಿಘ್ನಗಳು ಬಾರದಂತೆ ರಕ್ಷಿಸಿ, ಸಮಸ್ತ ಜನತೆಗೆ ಸುಖ-ಶಾಂತಿ, ಸಕಲ ಕ್ಷೇಮ ಹಾಗೂ ಸಮೃದ್ಧಿಯನ್ನು ಕರುಣಿಸಲೆಂದು ಭಗವಂತನಲ್ಲಿ ಪ್ರಾರ್ಥಿಸಿ ಈ ಪವಿತ್ರ ದೇವತಾ ಕಾರ್ಯವನ್ನು ಆಯೋಜಿಸಲಾಗಿದೆ. ನಗರದ ಸಮಸ್ತ ಭಕ್ತಾದಿಗಳು ಹಾಗೂ ನಾಗರಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೈವಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿದ್ದಾರೆ.
