SAGARA

ಮತ್ತೆ ನಿಂತ ಲಾಂಚ್, ಮೆಗ್ಗಾನ್​ನಲ್ಲಿ ಮಹಿಳೆ ಸಾವಿನ ಸುದ್ದಿ ಜೊತೆ ಓದಿ ಚಿರತೆ & ನಾಯಿಯ ಸ್ಟೋರಿ! ಶಿವಮೊಗ್ಗದ ಬೆಳಗಿನ ಸುದ್ದಿ

ajjimane ganesh ನವೀಕರಣ: 02 ಜೂನ್ 2026, 8:59 ಫೂರ್ವಾಹ್ನ ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗದ ಬೆಳಗಿನ ಸುದ್ದಿ : ಮಲೆನಾಡು ಶಿವಮೊಗ್ಗದಲ್ಲಿ ನಡೆದ ಘಟನೆಗಳು, ತಿಳಿದುಕೊಳ್ಳಬೇಕಾದ ಮಾಹಿತಿ, ನಡೆದ ಹಾಗೂ ನಡೆಯುವ ಕಾರ್ಯಕ್ರಮಗಳು ಸೇರಿದಂಥೆ ಜಿಲ್ಲೆಯ ವಿವಿಧ ಆಗು ಹೋಗುಗಳನ್ನು ಒಂದೇ ಸುದ್ದಿಯಲ್ಲಿ ಓದುಗನ ವೇಗಕ್ಕೆ ಅನುಗುಣವಾಗಿ ನೀಡುವ ಕಾಲಂ ಇದು.. ಈ ಕ್ಷಣದ ಶಿವಮೊಗ್ಗದ ಅಪ್​ಡೇಟ್ಸ್​ ನೀವಿಲ್ಲಿ ಓದಬಹುದು!

ಹಲ್ಕೆ-ಮುಪ್ಪಾನೆ ಲಾಂಚ್ ಸೇವೆ ಜೂನ್ 2 ರಿಂದ ಸಂಪೂರ್ಣ ಸ್ಥಗಿತ : ಶಿವಮೊಗ್ಗದ ಬೆಳಗಿನ ಸುದ್ದಿ

ಸಿಗಂದೂರು ಸೇತುವೆಯಾಯ್ತು ಇದ್ಯಾವುದು ಮುಪ್ಪಾನೆ ಲಾಂಚ್ ಅಂದುಕೊಳ್ಳಬೇಡಿ. ಸಾಗರ ತಾಲೂಕಿನ ಕರೂರು ಹಾಗೂ ಭಾರಂಗಿ ಹೋಬಳಿಗಳ ನಡುವಿನ ಸಂಪರ್ಕಕ್ಕೆ ಈ ಹಲ್ಕೆ ಮತ್ತು ಮುಪ್ಪಾನೆ ಲಾಂಚ್ ಮಾರ್ಗವು ಅತ್ಯಂತ ಪ್ರಮುಖವಾದ ಕೊಂಡಿ. ಸಿಗಂದೂರು ಸೇತುವೆ ನಿರ್ಮಾಣ ಕಾರ್ಯದ ಬಳಿಕವೂ ಸಹ ಈ ಮಾರ್ಗ ಚಾಲ್ತಿಯಲ್ಲಿಯೇ ಇದೆ. ಕರೂರು ಹೋಬಳಿಯ ಪೊಲೀಸ್ ಠಾಣೆ ಹಾಗೂ ಮೆಸ್ಕಾಂ ಕಚೇರಿಗಳು ಕಾರ್ಗಲ್ ಮತ್ತು ಜೋಗ ವ್ಯಾಪ್ತಿಯಲ್ಲಿ ಇರುವುದರಿಂದ, ಆಡಳಿತಾತ್ಮಕ ಕೆಲಸಗಳಿಗೆ ಹಾಗೂ ವಿದ್ಯುತ್ ಸಂಬಂಧಿ ಸಮಸ್ಯೆಗಳ ಪರಿಹಾರಕ್ಕಾಗಿ ಜನಸಾಮಾನ್ಯರು ಈ ಲಾಂಚ್ ಮೂಲಕವೇ ಓಡಾಡ್ತಾರೆ. ಸಿಲಿಂಡರ್‌ಗಳನ್ನು ಪಡೆಯಲು ಹಾಗೂ ಇತರ ದೈನಂದಿನ ಅಗತ್ಯಗಳಿಗಾಗಿ ತುಮರಿ, ಸಿಗಂದೂರು ಮತ್ತು ಭಾರಂಗಿ ಹೋಬಳಿಯ ನೂರಾರು ಜನರು ಇದೇ ಹಲ್ಕೆ-ಮುಪ್ಪಾನೆ ಮಾರ್ಗದಲ್ಲಿಯೇ ನಿರಂತರವಾಗಿ ಸಂಚರಿಸುತ್ತಾರೆ.

ನೆರೆಯ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಸಿದ್ದಾಪುರ ಭಾಗದಿಂದ ಸಿಗಂದೂರಿಗೆ ಆಗಮಿಸುವ ಜನರು ಸಹ ಈ ಲಾಂಚ್ ಬಳಸುತ್ತಾರೆ. ಸದ್ಯ ಈ ಲಾಂಚ್​ ಓಡಾಟ ಇವತ್ತಿನಿಂದಲೇ ಸ್ಟಾಪ್ ಆಗಲಿದೆ. ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ಕುಸಿದಿದ್ದು, ಮುಳಗಡೆ ನೀರಲ್ಲಿರುವ ಮರದ ಕಾಂಡ ಲಾಂಚ್‌ಗೆ ಬಡಿಯುತ್ತಿವೆ. ಮೇಲಾಗಿ, ಪ್ರಯಾಣಿಕರು ಹಾಗೂ ವಾಹನಗಳನ್ನು ಲಾಂಚ್‌ಗೆ ಹತ್ತಿಸುವ ಮತ್ತು ಇಳಿಸುವ ಪ್ಲಾಟ್‌ಫಾರ್ಮ್ ಜಾಗದಲ್ಲಿ ನೀರು ತಗ್ಗಿದೆ. ಹಾಗಾಗಿ ಲಾಂಚ್​ ನಿಲ್ಲಿಸಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಯಾವುದೇ ರೀತಿಯ ದುರಂತಗಳಿಗೆ ಆಸ್ಪದ ನೀಡಬಾರದು ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ಬಂದರು ಇಲಾಖೆಯು ತಾತ್ಕಾಲಿಕವಾಗಿ ಲಾಂಚ್ ಸಂಚಾರವನ್ನು ಸ್ಥಗಿತಗೊಳಿಸುವ ನಿರ್ಧಾರ ಪ್ರಕಟಿಸಿದೆ. ಮುಂಬರುವ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿ, ಜಲಾಶಯದಲ್ಲಿ ನೀರಿನ ಮಟ್ಟವು ಲಾಂಚ್ ಸಂಚಾರಕ್ಕೆ ಪೂರಕವಾಗಿ ಏರಿಕೆಯಾದಲ್ಲಿ, ಮರಳಿ ಲಾಂಚ್ ಸೇವೆಯನ್ನು ಪುನಾರಂಭ ಮಾಡಲಾಗುವುದು ಎಂದು ಬಂದರು ಇಲಾಖೆಯ ಅಧಿಕಾರಿಗಳು ಸ್ಥಳೀಯರಿಗೆ ಹಾಗೂ ಪ್ರಯಾಣಿಕರಿಗೆ ಮಾಹಿತಿಯನ್ನು ಒದಗಿಸಿದ್ದಾರೆ.

ಭದ್ರಾವತಿಯಲ್ಲಿ ಮುಂದುವರಿದ ಚಿರತೆ ಹಾವಳಿ : ಶಿವಮೊಗ್ಗದ ಬೆಳಗಿನ ಸುದ್ದಿ

ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ತಾಲೂಕಿನ ಕೂಡಿಗೆರೆ ಗ್ರಾಮದಲ್ಲಿ ಮತ್ತೊಮ್ಮೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾಜಿ ನಿರ್ದೇಶಕಿಯೊಬ್ಬರ ತೋಟದ ಮನೆಗೆ ನುಗ್ಗಿ ಸಾಕು ನಾಯಿಯನ್ನು ಬಾಯಲ್ಲಿ ಕಚ್ಚಿಕೊಂಡು ಹೊತ್ತೊಯ್ದಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಚಿರತೆಯು ನಾಯಿಯನ್ನು ಬೇಟೆಯಾಡಿ ಹೊತ್ತೊಯ್ಯುತ್ತಿರುವ ಭಯಾನಕ ದೃಶ್ಯಾವಳಿಗಳು ತೋಟದ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಗ್ರಾಮಸ್ಥರ ನಿದ್ದೆಗೆಡಿಸಿದೆ. ಕೂಡಿಗೆರೆ ಗ್ರಾಮದಲ್ಲಿರುವ ಎಪಿಎಂಸಿ ಮಾಜಿ ನಿರ್ದೇಶಕಿ ಸುಜಾತ ಅವರಿಗೆ ಸೇರಿದ ಟಿವಿಎನ್ ಫಾರಂನಲ್ಲಿ ಈ ಘಟನೆ ನಡೆದಿದೆ. ಸುಜಾತ ಅವರು ತಮ್ಮ ತೋಟದ ಮನೆಯಲ್ಲಿ ನಾಯಿ ಸಾಕಿದ್ರು, ಭಾನುವಾರ ರಾತ್ರಿ ಸುಮಾರು 8.30ರ ವೇಳೆಗೆ ಸುಜಾತ ಅವರು ಸಾಕು ಪ್ರಾಣಿಗಳಿಗೆಲ್ಲ ಅನ್ನ ಹಾಗೂ ಹಾಲು ಹಾಕಿ ತಮ್ಮ ಕೆಲಸ ಮುಗಿಸಿ ತೆರಳಿದ್ದರು. ಸೋಮವಾರ ಬೆಳಗ್ಗೆ ವಾಕಿಂಗ್‌ಗೆ ಎಂದು ಅವರು ಬಂದಾಗ, ತೋಟದಲ್ಲಿ ಕೇವಲ ಎರಡು ಮರಿ ನಾಯಿಗಳು ಮಾತ್ರ ಇರುವುದು ಕಂಡುಬಂದಿದೆ. ದೊಡ್ಡ ನಾಯಿ ಹಾಗೂ ಉಳಿದ ಮರಿಗಳು ನಾಪತ್ತೆಯಾಗಿರುವುದು ಅವರಲ್ಲಿ ತೀವ್ರ ಅನುಮಾನ ಮೂಡಿಸಿತ್ತು.

ತಕ್ಷಣವೇ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ, ಭಾನುವಾರ ತಡರಾತ್ರಿ ಸುಮಾರು 2.03ರ ಹೊತ್ತಿಗೆ ತೋಟದೊಳಗೆ ನುಗ್ಗಿರುವ ಚಿರತೆಯೊಂದು, ನಾಯಿಯ ಮೇಲೆ ದಾಳಿ ಮಾಡಿ ಅದನ್ನು ಬಾಯಿಯಲ್ಲಿ ಕಚ್ಚಿಕೊಂಡು ಕತ್ತಲಲ್ಲಿ ಮಾಯವಾಗಿರುವ ದೃಶ್ಯ ಕಂಡುಬಂದಿದೆ. ಇದೇ ತೋಟದಲ್ಲಿ ಸುಮಾರು ಆರು-ಏಳು ತಿಂಗಳ ಹಿಂದೆಯೂ ಸಹ ಇದೇ ಮಾದರಿಯಲ್ಲಿ ಚಿರತೆಯೊಂದು ದಾಳಿ ಮಾಡಿ ಸಾಕು ನಾಯಿಯನ್ನು ಕೊಂದು ಹಾಕಿತ್ತು. ಇದೀಗ ಮತ್ತೆ ಅದೇ ಜಾಗದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಎದೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವು : ಶಿವಮೊಗ್ಗದ ಬೆಳಗಿನ ಸುದ್ದಿ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಪ್ರತಿಷ್ಠಿತ ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಶಿವಮೊಗ್ಗ ನಗರದ ಶರಾವತಿ ನಗರದ ನಿವಾಸಿಯಾಗಿರುವ 60 ವರ್ಷದ ನಕ್ಷತ್ರಮ್ಮ ಎಂಬುವವರೇ ಮೃತಪಟ್ಟ ದುರ್ದೈವಿನಕ್ಷತ್ರಮ್ಮ ಅವರಿಗೆ ಸೋಮವಾರ ಬೆಳಗ್ಗೆ ದಿಢೀರನೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಗಾಬರಿಗೊಂಡ ಕುಟುಂಬದ ಸದಸ್ಯರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದರು. ಆದರೆ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ನಕ್ಷತ್ರಮ್ಮ ಅವರು ಮಧ್ಯಾಹ್ನದ ವೇಳೆಗೆ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಕರೆತಂದಾಗ ಅವರು ಮಾತನಾಡುತ್ತಿದ್ದರು, ಆದರೆ ವೈದ್ಯರು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಲು ವಿಳಂಬ ಮಾಡಿದ್ದರಿಂದಲೇ ಹಾಗೂ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕುಟುಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆರೋಪಗಳ ಕುರಿತು ಮೆಗ್ಗಾನ್ ಆಸ್ಪತ್ರೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ವೈದ್ಯಕೀಯ ನಿರ್ಲಕ್ಷ್ಯದ ಆರೋಪವನ್ನು ತಳ್ಳಿಹಾಕಿದ್ದಾರೆ. ರೋಗಿ ನಕ್ಷತ್ರಮ್ಮ ಅವರು ಆಸ್ಪತ್ರೆಗೆ ದಾಖಲಾದ ತಕ್ಷಣವೇ ಅವರಿಗೆ ತುರ್ತಾಗಿ ಅಗತ್ಯವಿರುವ ಎಲ್ಲಾ ಸೂಕ್ತ ಚಿಕಿತ್ಸೆಗಳನ್ನು ನಿಯಮಾನುಸಾರ ನೀಡಲಾಗಿದೆ. ಆದರೆ, ರೋಗಿಯು ಮಧುಮೇಹ (ಡಯಾಬಿಟಿಸ್) ಸಮಸ್ಯೆಯಿಂದ ಬಳಲುತ್ತಿದ್ದರು. ಎದೆನೋವಿನ ಜೊತೆಗೆ ಮಧುಮೇಹದ ಮಟ್ಟವೂ ವಿಪರೀತವಾಗಿದ್ದ ಕಾರಣ, ಅವರ ದೇಹವು ವೈದ್ಯಕೀಯ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸಲಿಲ್ಲ. ಹೀಗಾಗಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ