ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ದಸರಾ ಉತ್ಸವವು ವರ್ಷದಿಂದ ವರ್ಷಕ್ಕೆ ಅತ್ಯಂತ ವೈಭವಪೂರ್ಣವಾಗಿ ಮೂಡಿಬರುತ್ತಿದ್ದು, ಈ ಬಾರಿಯ ಸಾಂಸ್ಕೃತಿಕ ವೈಭವಕ್ಕೆ ಅಲ್ಲಮಪ್ರಭು ಮೈದಾನದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಇಂದು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಿಶಾಲ ಆಸನ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳನ್ನು ನಿಗದಿತ ಅವಧಿಯ ಮುನ್ನವೇ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ.
ಈ ವರ್ಷದ ಶಿವಮೊಗ್ಗ ದಸರಾ ಸಂಭ್ರಮಕ್ಕೆ ಚಿತ್ರರಂಗ ಹಾಗೂ ಕಿರುತೆರೆಯ ದಂಡೇ ಹರಿದುಬರಲಿದೆ. ಅಕ್ಟೋಬರ್ 11ರಂದು ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಿರಿಯ ನಟ ಶ್ರೀನಾಥ್ ಅವರು ದಸರಾ ಉತ್ಸವಕ್ಕೆ ಅದ್ದೂರಿ ಚಾಲನೆ ನೀಡಲಿದ್ದಾರೆ. ನಂತರ ಅಕ್ಟೋಬರ್ 13ರಂದು ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ಮಹಿಳಾ ದಸರಾವನ್ನು ಹಿರಿಯ ನಟಿ ಅಭಿನಯ ಹಾಗೂ ಸರಿಗಮಪ ಗಾಯಕಿ ಸುರಕ್ಷಾ ದಾಸ್ ಉದ್ಘಾಟಿಸಲಿದ್ದಾರೆ.
ಚಿತ್ರಪ್ರೇಮಿಗಳಿಗಾಗಿ ಅಕ್ಟೋಬರ್ 14ರಂದು ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಚಲನಚಿತ್ರ ದಸರಾ ಏರ್ಪಡಿಸಲಾಗಿದ್ದು, ಇದನ್ನುನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಾಗೂ ನಟಿ ಸಂಗೀತಾ ಅನಿಲ್ ಉದ್ಘಾಟಿಸಲಿದ್ದಾರೆ. ಇದೇ ವೇಳೆ ಮಾಲ್ಗುಡಿ ಡೇಸ್ ಖ್ಯಾತಿಯ ಮಾಸ್ಟರ್ ಮಂಜುನಾಥ್ ಹಾಗೂ ಮಾಸ್ಟರ್ ರೋಹಿತ್ ಶ್ರೀನಾಥ್ ಭಾಗವಹಿಸುವ ಪ್ರತಿಬಿಂಬ ಕಿರುಚಿತ್ರಗಳ ಹಬ್ಬ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಸ್ಥಳೀಯ ಹಿರಿಯ ಕಲಾವಿದರನ್ನು ಅಭಿನಂದಿಸಿ ಗೌರವಿಸಲಾಗುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಅಕ್ಟೋಬರ್ 15ರಂದು ಮಕ್ಕಳ ದಸರಾದಲ್ಲಿ ಗಾಯಕಿ ಕೀರ್ತಿ.ಎಸ್ ಹಾಗೂ ಕಲಾ ದಸರಾದಲ್ಲಿ ಮಿಮಿಕ್ರಿ ಗೋಪಿ ಹಾಸ್ಯ ಕಾರ್ಯಕ್ರಮ ನೀಡಲಿದ್ದಾರೆ. ಅಕ್ಟೋಬರ್ 17ರಂದು ನಟ ಆತೀಶ್ ಎಸ್.ಶೆಟ್ಟಿ ಹಾಗೂ ಅಕ್ಟೋಬರ್ 18ರಂದು ಭಕ್ತಿ ಝೇಂಕಾರ ಕಾರ್ಯಕ್ರಮದಲ್ಲಿ ನಟಿ ಪದ್ಮಾ ವಾಸಂತಿ ಪಾಲ್ಗೊಳ್ಳಲಿದ್ದಾರೆ. ಅಕ್ಟೋಬರ್ 19ರ ನಾಟ್ಯ ಹಾಗೂ ಜಾನಪದ ವೈಭವದಲ್ಲಿ ನಟ, ನಿರ್ದೇಶಕ ಪೃಥ್ವಿ ಅಂಬಾರ್ ಗ್ಲಾಮರ್ ತರಲಿದ್ದಾರೆ.
ಅಕ್ಟೋಬರ್ 20ರಂದು ಯುವ ಜನತೆಯ ನೆಚ್ಚಿನ ಯುವ ದಸರಾ ಮ್ಯೂಸಿಕಲ್ ನೈಟ್ ನಡೆಯಲಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನಟ-ಸಂಗೀತ ನಿರ್ದೇಶಕ ಸಾಧು ಕೋಕಿಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಕ್ಟೋಬರ್ 21ರಂದು ಗಾಯಕಿ ಸುರೇಖಾ ಹೆಗಡೆ ಅವರ ಸಂಗೀತ ಸೀಮೋಲ್ಲಂಘನ’ ಕಾರ್ಯಕ್ರಮದೊಂದಿಗೆ ದಸರಾ ಸಾಂಸ್ಕೃತಿಕ ಹಬ್ಬಕ್ಕೆ ಅದ್ಧೂರಿ ತೆರೆ ಬೀಳಲಿದೆ.
