ಕಾಂಗೋದಲ್ಲಿ ಶಿವಮೊಗ್ಗದ 70 ಮಂದಿ ಸೇರಿ 95 ಹಕ್ಕಿಪಿಕ್ಕಿಯರ ಬಂಧನ! ನಡೆದಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram
95 Hakki Pikki Community Members From Karnataka Detained in Congo
95 Hakki Pikki Community Members From Karnataka Detained in Congo

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಹಕ್ಕಿಪಿಕ್ಕಿ ಸಮುದಾಯದ 95 ಮಂದಿ ಬಂಧನಕ್ಕೊಳಗಾಗಿರುವ ಮಾಹಿತಿ ಹೊರಬಿದ್ದಿದೆ. ಬಂಧಿತರ ಪೈಕಿ ಶಿವಮೊಗ್ಗ ಜಿಲ್ಲೆಯ ಹಕ್ಕಿಪಿಕ್ಕಿ ಕ್ಯಾಂಪ್‌ನ 70 ಮಂದಿ ಹಾಗೂ ಚನ್ನಗಿರಿ ತಾಲ್ಲೂಕಿನ ಅಸ್ತಾಪನಹಳ್ಳಿ ಗ್ರಾಮದ 25 ಮಂದಿ ಸೇರಿದ್ದಾರೆ. ವಲಸೆ ಅಧಿಕಾರಿಗಳ ವಶದಲ್ಲಿರುವ ಇವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ರಾಜತಾಂತ್ರಿಕ ಕ್ರಮ ಕೈಗೊಳ್ಳಬೇಕು ಎಂದು ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆ ರಾಜ್ಯಾಧ್ಯಕ್ಷ ಪುನೀತ್ ಕುಮಾರ್ ಆರ್. ಒತ್ತಾಯಿಸಿದ್ದಾರೆ.

ಕಾಂಗೋದ ಬೆನಿ ಮತ್ತು ಕಿಸಂಗಾನಿ ನಗರಗಳಲ್ಲಿ ವಾಸಿಸುತ್ತಿದ್ದ ಹಕ್ಕಿಪಿಕ್ಕಿ ಸಮುದಾಯದವರನ್ನು ಅಲ್ಲಿನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ಅವರನ್ನು ಕಾಂಗೋದ ರಾಜಧಾನಿ ಕಿನ್ಶಾಸಾಗೆ ಕರೆತರಲಾಗಿದ್ದು, ವಲಸೆ ಅಧಿಕಾರಿಗಳ ವಶದಲ್ಲಿ ಇರಿಸಲಾಗಿದೆ. ಬಂಧಿತರನ್ನು ಭಾರತಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಬಂಧಿತರಾಗಿರುವವರಲ್ಲಿ ಹೆಚ್ಚಿನವರು ಶಿವಮೊಗ್ಗ ಜಿಲ್ಲೆಯವರಾಗಿರುವುದರಿಂದ ಅವರ ಕುಟುಂಬಗಳಲ್ಲಿ ಆತಂಕ ಉಂಟಾಗಿದೆ. ಕಾಂಗೋದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಹಕ್ಕಿಪಿಕ್ಕಿ ಸಮುದಾಯದವರನ್ನು ಸುರಕ್ಷಿತವಾಗಿ ತವರಿಗೆ ಕರೆತರುವ ನಿಟ್ಟಿನಲ್ಲಿ ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಆಗ್ರಹಿಸಿದೆ.

ವಿದೇಶದಲ್ಲಿ ವ್ಯಾಪಾರದ ಆಮಿಷ; ತಲಾ ₹5 ಲಕ್ಷ ಪಡೆದ ಏಜೆಂಟರು ಪರಾರಿ ಆರೋಪ

  • ಹಕ್ಕಿಪಿಕ್ಕಿ ಸಮುದಾಯದವರನ್ನು ವಿದೇಶಕ್ಕೆ ಕಳುಹಿಸಿ ವ್ಯಾಪಾರ ಮಾಡಿಸುವುದಾಗಿ ನಂಬಿಸಿದ ಸ್ಥಳೀಯ ಏಜೆಂಟರು ಪ್ರತಿಯೊಬ್ಬರಿಂದ ಸುಮಾರು ₹5 ಲಕ್ಷ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
  • ವಿದೇಶದಲ್ಲಿ ವ್ಯಾಪಾರ ನಡೆಸಿ ಆದಾಯ ಗಳಿಸುವ ನಿರೀಕ್ಷೆಯೊಂದಿಗೆ ಕಾಂಗೋಗೆ ತೆರಳಿದ್ದ ಸಮುದಾಯದವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣ ಪಡೆದು ವಿದೇಶಕ್ಕೆ ಕಳುಹಿಸಿದ್ದ ಏಜೆಂಟರು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
  • ಏಜೆಂಟರಿಗೆ ಲಕ್ಷಾಂತರ ರೂಪಾಯಿ ಹಣ ನೀಡಿರುವ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ವಿದೇಶದಲ್ಲಿ ಬಂಧನಕ್ಕೊಳಗಾಗಿರುವ ತಮ್ಮವರ ಸುರಕ್ಷತೆಯ ಕುರಿತು ಆತಂಕಗೊಂಡಿವೆ.
  • ಕಾಂಗೋದಲ್ಲಿ ಹಕ್ಕಿಪಿಕ್ಕಿ ಸಮುದಾಯದವರು ಬಂಧನಕ್ಕೊಳಗಾಗಲು ನಕಲಿ ದಾಖಲೆಗಳ ಬಳಕೆ ಹಾಗೂ ಪ್ರವಾಸಿ ವೀಸಾದಲ್ಲಿ ವ್ಯಾಪಾರ ನಡೆಸಿರುವುದು ಪ್ರಮುಖ ಕಾರಣ ಎನ್ನಲಾಗಿದೆ.
  • ಪ್ರವಾಸಿ ವೀಸಾದಲ್ಲಿ ವಿದೇಶಕ್ಕೆ ತೆರಳಿದವರು ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಹಾಗೂ ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬಂಧನಕ್ಕೆ ಕಾರಣವಾಗಿರುವ ಸಾಧ್ಯತೆ ವ್ಯಕ್ತವಾಗಿದೆ.
  • ಈ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟವರು ಯಾರು, ವೀಸಾ ಪ್ರಕ್ರಿಯೆಯಲ್ಲಿ ಏಜೆಂಟರ ಪಾತ್ರವೇನು ಹಾಗೂ ಹಣ ಪಡೆದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಪುನೀತ್ ಕುಮಾರ್ ಆರ್. ಆಗ್ರಹಿಸಿದ್ದಾರೆ.

ಕಾಂಗೋದ ವಿವಿಧ ನಗರಗಳಲ್ಲಿ ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯದ 200ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ ಎಂದು ಪುನೀತ್ ಕುಮಾರ್ ಆರ್. ತಿಳಿಸಿದ್ದಾರೆ. 95 ಮಂದಿ ಬಂಧನಕ್ಕೊಳಗಾಗಿರುವ ಘಟನೆಯಿಂದ ಅಲ್ಲಿರುವ ಇತರ ಹಕ್ಕಿಪಿಕ್ಕಿ ಸಮುದಾಯದವರಲ್ಲಿಯೂ ಭೀತಿ ಉಂಟಾಗಿದೆ. ಅವರ ಸುರಕ್ಷತೆಯ ಬಗ್ಗೆಯೂ ಗಮನಹರಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.ಕಾಂಗೋದ ವಿವಿಧ ನಗರಗಳಲ್ಲಿ ನೆಲೆಸಿರುವ ಭಾರತೀಯ ಹಕ್ಕಿಪಿಕ್ಕಿ ಸಮುದಾಯದವರನ್ನು ಗುರುತಿಸಿ, ಅವರ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಅಗತ್ಯವಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor