ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಶ್ರೀರಾಮೇಶ್ವರ ದೇವರ ದಸರಾ ಉತ್ಸವದ ಅಂಗವಾಗಿ ವಿಜಯದಶಮಿ ದಿನದಂದು ಪಟ್ಟಣದ ಕುಶಾವತಿ ಬನ್ನಿ ಮಂಟಪದಲ್ಲಿ ರಾತ್ರಿ 8 ಗಂಟೆಗೆ ‘ಹುಲಿಹೆಜ್ಜೆ-3’ ಸ್ಪರ್ಧೆ ನಡೆಯಲಿದೆ ಎಂದು ಹುಲಿಹೆಜ್ಜೆ ಬಳಗದ ಅಧ್ಯಕ್ಷ ಆರ್. ಮದನ್ ತಿಳಿಸಿದ್ದಾರೆ. ನಿನ್ನೆ ದಿನ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ಪಿಲಿವೇಷ ಸಾರ್ವಜನಿಕವಾಗಿ ಗಮನ ಸೆಳೆದಿರುವ ಜಾನಪದ ಕಲೆಯಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗದ ಹುಲಿವೇಷಗಳಲ್ಲಿ ಭಿನ್ನತೆ ಇದೆ. ಇತ್ತೀಚಿನ ದಿನಗಳಲ್ಲಿ ಹುಲಿವೇಷಧಾರಿಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ ಎಂದರು.
ಹುಲಿ ಕುಣಿತ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಕಳೆದ 2 ವರ್ಷಗಳಿಂದ ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಂದ ಯಾವುದೇ ದೇಣಿಗೆ ಸಂಗ್ರಹಿಸದೆ ಈ ಬಾರಿಯೂ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಹೇಳಿದರು.

- ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ₹50 ಸಾವಿರ ಹಾಗೂ ದ್ವಿತೀಯ ಸ್ಥಾನಕ್ಕೆ ₹30 ಸಾವಿರ ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಿಗಳಿಗೆ ತಲಾ ₹10 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತದೆ.
- ತಾಸೆ ವಾದನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಕ್ಕೆ ₹10 ಸಾವಿರ ಹಾಗೂ ದ್ವಿತೀಯ ಸ್ಥಾನಕ್ಕೆ ₹5 ಸಾವಿರ ಬಹುಮಾನ ನೀಡಲಾಗುತ್ತದೆ. ಅಲ್ಲದೆ, 15 ಹುಲಿವೇಷಧಾರಿಗಳಿಗೆ ಉಚಿತವಾಗಿ ಬಣ್ಣ ಹಾಕಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಆರ್. ಮದನ್ ತಿಳಿಸಿದರು.
- ಹುಲಿಹೆಜ್ಜೆ ಬಳಗದ ಸಂಚಾಲಕ ಡಿ.ಎಸ್. ವಿಶ್ವನಾಥಶೆಟ್ಟಿ ಮಾತನಾಡಿ, ಹುಲಿವೇಷ ಸ್ಪರ್ಧೆ ಆಯೋಜನೆಗೆ ಸುಮಾರು ₹5 ಲಕ್ಷ ವೆಚ್ಚವಾಗಲಿದೆ. ದಸರಾ ಉತ್ಸವ ಆಚರಣೆ ಸಮಿತಿ ₹1.5 ಲಕ್ಷ ನೀಡುತ್ತಿದ್ದು, ಉಳಿದ ವೆಚ್ಚವನ್ನು ಆರ್. ಮದನ್ ಭರಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದಸರಾ ಉತ್ಸವ ಆಚರಣೆ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ಹಾಗೂ ಹುಲಿಹೆಜ್ಜೆ ಬಳಗದ ಪ್ರಶೋಧ ಉಪಸ್ಥಿತರಿದ್ದರು.
