ಸುದ್ದಿಯ ಸ್ಥಳ: Thirthahalli, Shivamogga, Karnataka
ಮಲೆನಾಡು ಟುಡೆ ಸುದ್ದಿ /ತೀರ್ಥಹಳ್ಳಿ : ಚಲಿಸುತ್ತಿದ್ದ ವೇಳೆ ಲಾರಿಯೊಂದರ ಹಿಂಬದಿಯ ಟೈರ್ ಕಳಚಿ ಹೋದ ಪರಿಣಾಮ, ಟೈರ್ ಬಂದು ಮನೆಯೊಂದರ ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಪುಡಿಯಾಗಿರುವ ಘಟನೆ ತಾಲೂಕಿನ ಗಬಡಿ ಬಳಿ ನಡೆದಿದೆ.
ಘಟನೆ ವಿವರ ನೋಡುವುದಾದರೆ, ಲಾರಿಯೊಂದು ನಿನ್ನೆ ಸಂಜೆ ಕೋಣಂದೂರಿನಿಂದ ಗೊಬ್ಬರದ ಲೋಡ್ ಅನ್‌ಲೋಡ್ ಮಾಡಿ ಬರುತ್ತಿತ್ತು. ಗಬಡಿ ಬಸ್‌ಸ್ಟ್ಯಾಂಡ್ ಬಳಿ ಬರುವ ವೇಳೆ ಲಾರಿಯ ಹಿಂಬದಿಯ ಟೈರ್ ಒಂದು ಕಳಚಿಕೊಂಡಿದೆ. ಇದರ ಪರಿಣಾಮ ವೇಗವಾಗಿ ಬಂದ ಟೈರ್ ಪ್ರದೀಪ್ ಎಂಬುವವರ ಮನೆಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದ್ದು, ಕಾಂಪೌಂಡ್ ಪುಡಿಯಾಗಿದೆ. ತಕ್ಷಣವೇ ಎಚ್ಚೆತ್ತುಕೊಂಡ ಚಾಲಕ ಸಮಯಪ್ರಜ್ಞೆ ಮೆರೆದು ವಾಹನವನ್ನು ರಸ್ತೆ ಬದಿಗೆ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸ್ಥಳವು ಬಸ್ ನಿಲ್ದಾಣವಾಗಿದ್ದು, ಪಕ್ಕದಲ್ಲೇ ಶಾಲೆಯೂ ಇರುವ ಕಾರಣ ಇಲ್ಲಿ ಸದಾ ಕಾಲ ಜನಸಂದಣಿ ಇರುತ್ತಿತ್ತು. ಆದರೆ ಅದೃಷ್ಟವಶಾತ್ ನಿನ್ನೆ ಆ ಸಮಯದಲ್ಲಿ ಬಸ್ ನಿಲ್ದಾಣದಲ್ಲಿ ಯಾರೊಬ್ಬರೂ ಇರಲಿಲ್ಲ. ಜೊತೆಗೆ, ಕಾಂಪೌಂಡ್ ಕುಸಿದ ಮನೆಯ ಆವರಣದಲ್ಲೂ ಯಾರೂ ಓಡಾಡುತ್ತಿರಲಿಲ್ಲ. ಹೀಗಾಗಿ ನಡೆಯಬಹುದಾಗಿದ್ದ ಭಾರೀ ಪ್ರಾಣಾಪಾಯವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ
ಅಷ್ಟೇ ಅಲ್ಲದೆ ಈ ಒಂದು ಘಟನೆಯು ಲಾರಿ ಚಾಲಕರು ಸೇರಿದಂತೆ ಇನ್ನಿತರ ಬೃಹತ್ ವಾಹನಗಳ ಚಾಲಕರು ಲೋಡ್ ಸೇರಿದಂತೆ ಇನ್ನಿತರೇ ಕೆಲಸಗಳನ್ನು ಮುಗಿಸಿಕೊಂಡು ಬರುವ ವೇಳೆ ವಾಹನಗಳ ಬಿಡಿಭಾಗಗಳು ಸರಿ ಇದೆಯೇ ಎಂದು ಪರಿಶೀಲಿಸಿಕೊಳ್ಳುವ ಎಚ್ಚರಿಕೆಯನ್ನು ನೀಡಿದೆ.
