ಸುದ್ದಿಯ ಸ್ಥಳ: Thirthahalli, Shivamogga, Karnataka
ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಚಾಲಕನ ಅಜಾಗರೂಕತೆಯಿಂದ ಕಾರು ಧರೆಗೆ ಡಿಕ್ಕಿ ಹೊಡೆದು ಇಬ್ಬರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೇಕೇರಿ ಸಮೀಪದ ಗಾಳಿಮರ ತಿರುವಿನಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಜಗಳೂರು ನಿವಾಸಿಗಳಾದ ಜಯರಾಮಪ್ಪ (60) ಹಾಗೂ ಮನೋಜ್ (37) ಗಾಯಗೊಂಡವರು.
ಜಗಳೂರಿನ ವೆಂಕಟೇಶ ತಮ್ಮ ಕಾರನ್ನ ಕೊರಗಜ್ಜ ದೇವಸ್ಥಾನಕ್ಕೆ ಬಾಡಿಗೆಗೆ ಕಳುಹಿಸಿದ್ದರು. ದಾವಣಗೆರೆ ಜಿಲ್ಲೆಯ ಜಗಳೂರು ಗೊಲ್ಲರಹಟ್ಟಿಯ ನಾಗಪ್ಪ ಅವರ ಪುತ್ರ ಸಂತೋಷ್ ಕಾರು ಚಲಾಯಿಸುತ್ತಿದ್ದರು. ಗುಡ್ಡೇಕೇರಿ ಸಮೀಪದ ಗಾಳಿಮರ ತಿರುವಿನಲ್ಲಿ ಕಾರು ಅಪಘಾತಕ್ಕೀಡಾಗಿದೆ. ಚಾಲಕ ಸಂತೋಷ್ ಕಾರನ್ನು ದುಡುಕುತನ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬದಿಯ ಧರೆಗೆ ಡಿಕ್ಕಿ ಹೊಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಪಘಾತದಲ್ಲಿ ಜಯರಾಮಪ್ಪ ಅವರ ಸೊಂಟ ಹಾಗೂ ಹೊಟ್ಟೆಯ ಭಾಗಕ್ಕೆ ಪೆಟ್ಟಾಗಿದ್ದು, ಮನೋಜ್ ಅವರ ಬೆನ್ನಿನ ಸಮೀಪ ತರಚಿದ ಗಾಯಗಳಾಗಿವೆ. ಕಾರು ಚಾಲಕ ಸಂತೋಷ್ ಅವರಿಗೆ ಯಾವುದೇ ಗಾಯಗಳಾಗಿಲ್ಲ. ಈ ಕುರಿತು ಆಗುಂಬೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 ಹಾಗೂ 125(a) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
