ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಮೀನಿನ ಖಾತೆ ಮಾಡಿಕೊಡಲು ಕಂದಾಯ ಇಲಾಖೆ ಅಧಿಕಾರಿಗಳು ಹಣ ಪಡೆದುಕೊಂಡಿದ್ದರೂ ಕೆಲಸ ಮಾಡಿಕೊಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ನಿನ್ನೆದಿನ ರಾಮೇನಕೊಪ್ಪದ ರೈತ ನಾಗರಾಜ್ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅರಳಿ ಮರ ಏರಿ ಪ್ರತಿಭಟನೆ ನಡೆಸಿದರು. ಸುಮಾರು 75 ಅಡಿ ಎತ್ತರಕ್ಕೆ ಮರ ಏರಿದ್ದ ರೈತ, ಅಧಿಕಾರಿಗಳಿಂದ ಸ್ಪಷ್ಟ ಭರವಸೆ ದೊರೆಯುವವರೆಗೂ ಕೆಳಗಿಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಸುಮಾರು 4 ಗಂಟೆ ಪ್ರತಿಭಟನೆ ನಡೆಸಿದ ಬಳಿಕ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತ ಮರದಿಂದ ಕೆಳಗಿಳಿದರು. ಅಸಲಿಗೆ ಇಲ್ಲಿ ಆಗಿದ್ದೇನು ಎಂಬುದರ ವಿವರ ಇಲ್ಲಿದೆ.
ತಾಲೂಕಿನ ರಾಮೇನಕೊಪ್ಪ ಗ್ರಾಮದ ಸರ್ವೆ ನಂಬರ್ 57ರಲ್ಲಿರುವ ಜಮೀನನ್ನು ಸುಮಾರು 28 ಕುಟುಂಬ ಕಳೆದ 25 ವರ್ಷಗಳಿಗಳಿಂದ ತಲಾ 4 ಎಕರೆಯಂತೆ ಸಾಗುವಳಿ ಮಾಡಿಕೊಂಡು ಬರುತ್ತಿವೆ. ಈ ಕುಟುಂಬಗಳಿಗೆ ಹಿಂದೆ ಸರ್ಕಾರದಿಂದ ಜಮೀನು ಮಂಜೂರಾಗಿತ್ತು. ಆದರೆ, ಈ ಪೈಕಿ 11 ಮಂದಿಗೆ ಮಾತ್ರ ಜಮೀನು ಮಂಜೂರಾತಿ ಉಳಿದಿದ್ದು, ಉಳಿದವರ ಮಂಜೂರಾತಿ ರದ್ದಾಗಿದೆಯಂತೆ. ಸರ್ಕಾರದಿಂದ ಮಂಜೂರಾಗಿದ್ದ ಜಮೀನಿನ ಮಂಜೂರಾತಿಯನ್ನು ರದ್ದುಪಡಿಸಿ ಮರುಮಂಜೂರಾತಿ (ರೀ ಗ್ರಾಂಟ್) ಮಾಡಿಕೊಡುವುದಾಗಿ ತಹಶೀಲ್ದಾರ್ ತಿಳಿಸಿದ್ದರಂತೆ. ಆದರೆ, ಈವರೆಗೂ ಮರುಮಂಜೂರಾತಿ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ ಎಂಬುದು ಆರೋಪ. ಅಷ್ಟೆ ಅಲ್ಲದೆ ಜಮೀನು ಮಂಜೂರಾತಿ ಉಳಿದಿದ್ದ 11 ಮಂದಿಯ ಮಂಜೂರಾತಿಯನ್ನೂ ಉಪವಿಭಾಗಾಧಿಕಾರಿಗಳು ರದ್ದುಪಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಜಿಲ್ಲಾಧಿಕಾರಿಗಳ ನ್ಯಾಯಾಲಯವು ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಎಲ್.ಎನ್.ಡಿ.ಸಿ.ಆರ್. 173/2024, ದಿನಾಂಕ 16-12-2024ರ ಆದೇಶವನ್ನು ತಿರಸ್ಕರಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಹಿತಾಸಕ್ತಿದಾರರಿಂದ ಅಗತ್ಯ ದಾಖಲೆಗಳನ್ನು ಪಡೆದು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಲಾಗಿತ್ತು. ಆದರೆ, ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶದ ನಂತರವೂ ಜಮೀನಿನ ಪಹಣಿ ಹಾಗೂ ಖಾತೆ ಮಾಡಿಕೊಡುವ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂಬುದು ರೈತರ ಆರೋಪವಾಗಿದೆ.
ಖಾತೆ ಮಾಡಿಕೊಡಲು ₹25 ಲಕ್ಷ ಬೇಡಿಕೆ ಇಟ್ಟಿದ್ದರು: ರೈತ ನಾಗರಾಜ್ ಆರೋಪ
ಇನ್ನೂ ಇದೇ ವಿಷಯದಲ್ಲಿ ಜಮೀನಿನ ಖಾತೆ ಮಾಡಿಕೊಡುವುದಕ್ಕಾಗಿ ತಹಶೀಲ್ದಾರ್ ಅವರು ಫಲಾನುಭವಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದಾರೆ ಎಂದು ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ. ಖಾತೆ ಮಾಡಿಕೊಡಲು ಒಟ್ಟು ₹25 ಲಕ್ಷ ಬೇಡಿಕೆ ಇಡಲಾಗಿತ್ತು. ಅಧಿಕಾರಿಗಳ ಸೂಚನೆಯಂತೆ ಫಲಾನುಭವಿಗಳು ಹಂತ ಹಂತವಾಗಿ ಹಣ ನೀಡಿದ್ದರು. ಜಮೀನು ಮಂಜೂರಾತಿ ಹೊಂದಿದ್ದ 11 ಮಂದಿಯೂ ಹಣ ನೀಡಿದ್ದಾರೆ. ಆದರೂ ಪಹಣಿ ಹಾಗೂ ಖಾತೆ ಮಾಡಿಕೊಡದೆ ಸತಾಯಿಸಲಾಗುತ್ತಿದೆ ಎಂದು ದೂರಿದ್ದಾರೆ. ಪ್ರತಿಬಾರಿ ಕಚೇರಿಗೆ ತೆರಳಿ ವಿಚಾರಿಸಿದಾಗಲೂ ವಿವಿಧ ಕಾರಣಗಳನ್ನು ನೀಡಿ ಕೆಲಸ ಮುಂದೂಡಲಾಗುತ್ತಿತ್ತು. ಮಂಗಳವಾರ ರಾತ್ರಿ ದೂರವಾಣಿ ಮೂಲಕ ಸಂಪರ್ಕಿಸಿದ ಸಂದರ್ಭದಲ್ಲಿ ತಮಗೆ ವರ್ಗಾವಣೆಯಾಗಿದ್ದು, ಇನ್ನು ಮುಂದೆ ಈ ಕೆಲಸ ಮಾಡಲು ಸಾಧ್ಯವಿಲ್ಲ. ಹೊಸದಾಗಿ ಬರುವ ಅಧಿಕಾರಿಗಳಿಗೆ ತಿಳಿಸಿ ಕೆಲಸ ಮಾಡಿಸುವುದಾಗಿ ತಹಶೀಲ್ದಾರ್ ಹೇಳಿದ್ದಾರೆ ಎಂದು ನಾಗರಾಜ್ ಆರೋಪಿಸಿದ್ದಾರೆ.
75 ಅಡಿ ಎತ್ತರದ ಮರವೇರಿದ ರೈತ; ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ
ಯಾವಾಗ ರೈತ ನಾಗರಾಜ್ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅರಳಿ ಮರವನ್ನು ಏರಿ ಪ್ರತಿಭಟನೆ ಆರಂಭಿಸಿದರೋ ಸ್ಥಳದಲ್ಲಿ ಹೈಡ್ರಾಮಾ ಶುರುವಾಯಿತು. ಸುಮಾರು 75 ಅಡಿ ಎತ್ತರದಲ್ಲಿ ಕುಳಿತಿದ್ದ ನಾಗರಾಜ್, ಅಧಿಕಾರಿಗಳು ಕೆಲಸ ಮಾಡಿಕೊಡುವ ಭರವಸೆ ನೀಡುವವರೆಗೆ ಕೆಳಗಿಳಿಯುವುದಿಲ್ಲ ಎಂದು ಪಟ್ಟು ಹಿಡಿದರು. ಅಧಿಕಾರಿಗಳ ಭರವಸೆಗಳನ್ನು ನಂಬಿ ಸಾಕಾಗಿದೆ. ಮೊದಲು ಜಮೀನಿನ ಖಾತೆ ಮಾಡಿಕೊಡಬೇಕು ಎಂದು ಆಗ್ರಹಿಸಿದ ಅವರು, ಬೇಡಿಕೆ ಈಡೇರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದರು. ಮರದ ಮೇಲಿದ್ದ ರೈತನ ಮನವೊಲಿಸಿ ಸುರಕ್ಷಿತವಾಗಿ ಕೆಳಗಿಳಿಸಲು ಪ್ರಯತ್ನ ನಡೆಸಿದರು. ಈ ವೇಳೆ ಸಾರ್ವಜನಿಕರು ಹಾಗೂ ಜಮೀನಿನ ಫಲಾನುಭವಿಗಳ ಕುಟುಂಬಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು.
ಉಪವಿಭಾಗಾಧಿಕಾರಿ ಮೈತ್ರಿ ಮಧ್ಯಪ್ರವೇಶ
ಘಟನೆ ನಡೆದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ. ಹೀಗಾಗಿ ಉಪವಿಭಾಗಾಧಿಕಾರಿ ಮೈತ್ರಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸಿದರು. ಜಮೀನಿನ ಖಾತೆ ಸಂಬಂಧಿಸಿದ ಪ್ರಕರಣವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಉಪವಿಭಾಗಾಧಿಕಾರಿಗಳು ಭರವಸೆ ನೀಡಿದರು. ಆದರೂ ಆರಂಭದಲ್ಲಿ ರೈತ ನಾಗರಾಜ್ ಮರದಿಂದ ಕೆಳಗಿಳಿಯಲು ನಿರಾಕರಿಸಿದರು. ನಂತರ ಉಪವಿಭಾಗಾಧಿಕಾರಿ ಮೈತ್ರಿ ಅವರು ಸ್ಥಳದಲ್ಲಿದ್ದ ಇತರ ರೈತರನ್ನು ತಮ್ಮ ಕಚೇರಿಗೆ ಕರೆದುಕೊಂಡು ಹೋಗಿ ಸಮಸ್ಯೆಯ ಕುರಿತು ಮಾತುಕತೆ ನಡೆಸಿದರು. ಸುಮಾರು 4 ಗಂಟೆಗಳ ಕಾಲ ಮುಂದುವರಿದ ಪ್ರತಿಭಟನೆಯ ಬಳಿಕ ಜಮೀನಿನ ಖಾತೆ ಸಮಸ್ಯೆ ಪರಿಹರಿಸುವ ಸಂಬಂಧ ಅಧಿಕಾರಿಗಳು ನೀಡಿದ ಭರವಸೆಯನ್ನು ಸ್ವೀಕರಿಸಿದ ನಾಗರಾಜ್ ಮರದಿಂದ ಕೆಳಗಿಳಿದರು.
