ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡು ಸುದ್ದಿ / ಶಿವಮೊಗ್ಗ : ಶಿವಮೊಗ್ಗ ನಗರಕ್ಕೆ ಹೊಂದಿಕೊಂಡಿರುವ ಶೆಟ್ಟಿ ಹಳ್ಳಿ ಅಭಯಾರಣ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಅದರಲ್ಲೂ ಸಕ್ರೆಬೈಲು ಕಾಡಿನ ತುಂಗಾ ನದಿ ಕಾಡಾನೆಗಳ ದಾಟುವಿಕೆಗೆ ಮೆಗಾ ಕಾರಿಡಾರ್ ಆಗಿದೆ. ಹೌದು ಭದ್ರಾ ಅಭಯಾರಣ್ಯದಿಂದ ಇತ್ತೀಚಿನ ವರ್ಷಗಳಲ್ಲಿ ತುಂಗಾ ನದಿ ದಾಟಿಕೊಂಡು ಶೆಟ್ಟಿಹಳ್ಳಿ ಕಾಡು ಸೇರಿರುವ ಕಾಡಾನೆಗಳ ಸಂಖ್ಯೆ 25 ರ ಗಡಿ ದಾಟಿದೆ ಎನ್ನಲಾಗಿದೆ.
ಈವರೆಗೂ ಶೆಟ್ಟಿಹಳ್ಳಿ ಕಾಡಂಚಿನಲ್ಲಿ ವಿದ್ಯುತ್ ಸ್ಪರ್ಶಿಸಿ ನಾಲ್ಕು ಕಾಡಾನೆಗಳು ಸಾವನ್ನಪ್ಪಿದೆ. ಕಾಡಾನೆಗಳು ರೈತರ ಹೊಲಗದ್ದೆಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಳೆ ಹಾನಿ ಮಾಡಿವೆ. ಓರ್ವ ಆನೆಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಇಂದು ಶಿವಮೊಗ್ಗ ತಾಲೂಕಿನ ಬಸವಾಪುರ ಸಮೀಪದ ಈಚಲವಾಡಿಯಲ್ಲಿ ವಿದ್ಯುತ್ ತಂತಿ ಸ್ಪರ್ಷಿಸಿ 15 ವರ್ಷದ ಗಂಡಾನೆ ಸಾವನ್ನಪ್ಪಿದೆ.
ವನ್ಯಪ್ರಾಣಿಗಳ ಉಪಟಳ ತಪ್ಪಿಸುವುದಕ್ಕಾಗಿ ರೈತರು ತಮ್ಮ ಹೊಲ ತೋಟಗಳಿಗೆ ಅಳವಡಿಸಿರುವ ವಿದ್ಯುತ್ ಬೇಲಿ ಕಾಡಾನೆಗಳನ್ನು ಬಲಿ ಪಡೆಯುತ್ತಿದೆ. ರೈತರು ರಾತ್ರಿ ಹೊತ್ತು ಹೊಲಗಳಿಗೆ ಹೈಬೆಕ್ಸ್ ವಿದ್ಯುತ್ ಅಳವಡಿಸುತ್ತಿದ್ದು, ವನ್ಯಪ್ರಾಣಿಗಳ ಜೀವಕ್ಕೆ ಸಂಚಕಾರವನ್ನುಂಟು ಮಾಡಿದೆ. ಕೇವಲ ಆನೆಸರ ವನ್ಯಜೀವಿ ವಲಯದಲ್ಲಿಯೇ ಕೇವಲ ಎರಡು ವರ್ಷದಲ್ಲಿ ಮೂರು ದೈತ್ಯ ಗಂಡು ಕಾಡಾನೆಗಳು ಸಾವನ್ನಪ್ಪಿದೆ. ಈ ವಲಯದಲ್ಲಿ ಹೆಚ್ಚಾಗಿ ಬಗರ್ ಹುಕುಂ ರೈತರಿದ್ದು, ತಮ್ಮ ಹೋಲಗಳನ್ನು ಉಳಿಸಿಕೊಳ್ಳಲು ಅವರು ವಿದ್ಯುತ್ ಬೇಲಿ ಅಳವಡಿಸಿಕೊಂಡಿದ್ದಾರೆ.ರೈತರಿಗೆ ಇಲ್ಲಿ ಕಾಡಾನೆಗಳು ಓಡಾಡುತ್ತವೆ ಎಂಬ ಅರಿವು ಕೂಡ ಇರಲಿಲ್ಲ. ಯಾವಾಗ 2022 ರಲ್ಲಿ ಆನೆಸರ ವೈಲ್ಡ್ ಲೈಫ್ ಏರಿಯಾದಲ್ಲಿ ಎರಡು ಕಾಡಾನೆಗಳು ವಿದ್ಯುತ್ ಸ್ಪರ್ಷಿಸಿ ಸಾವನ್ನಪ್ಪಿದ್ದವೋ ಆಗ ತೋಟದ ಮಾಲೀಕನೇ ಕಂಗಾಲಾಗಿದ್ದ. ಈ ಬಗ್ಗೆ ಅರಿವು ಜಾಗೃತಿ ಮೂಡಿಸಬೇಕಾದ ಅವಶ್ಯಕತೆಯಿದೆ.
ಅದೇ ಆನೆಸರ ವೈಲ್ಡ್ ಲೈಫ್ ಏರಿಯಾದಲ್ಲಿ ಗಂಡು ಕಾಡಾನೆ ಪುನಃ ವಿದ್ಯುತ್ ಬೇಲಿಗೆ ಸಿಲುಕಿ ಸಾವನ್ನಪ್ಪಿತ್ತು. ಮೆಕ್ಕಜೋಳ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ಬೇಲಿಗೆ ಆನೆ ಸ್ಪರ್ಷಿಸಿ ಸಾವನ್ನಪ್ಪಿದೆ. ಈ ಸಾವಿಗೆ ರೈತನೇ ಕಾರಣನಾ ಎಂದು ಪ್ರಶ್ನಿಸಿದರೆ ಅದಕ್ಕೆ ಉತ್ತರವಿಲ್ಲ. ಆದರೆ ಕಾಡಾನೆಗಳ ರಕ್ಷಣೆಯ ಹೊಣೆ ಎಲ್ಲರ ಕರ್ತವ್ಯವಾಗಿದೆ. ಈಗ ಶೆಟ್ಟಿಹಳ್ಳಿ ಕಾಡಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಹ್ಮಿಮೆಟ್ಟಿಸುವ ಕೆಲಸ ಅರಣ್ಯ ಇಲಾಖೆ ಮಾಡುತ್ತಿದೆ. ಇದೊಂದು ಕಣ್ಣೊರೆಸುವ ತಂತ್ರ ಬಿಟ್ಟರೆ ಮತ್ತೇನು ಅಲ್ಲ. ಶೆಟ್ಟಿಹಳ್ಳಿ ಕಾಡಿನ ಸುತ್ತಮುತ್ತಲು ಇಪಿಟಿ ಮಾಡಿರುವಾಗ ಹೆಮ್ಮೆಟ್ಟಿಸುವ ಕಾಡಾನೆಗಳು ಕಾಡನ್ನು ತೊರೆದು ಹೋಗಲು ಸಾಧ್ಯವಿಲ್ಲ. ಸ್ವಲ್ಪ ದೂರ ಸಾಗಿದಂತೆ ಮಾಡಿ ಮತ್ತೆಲ್ಲೋ ಘೀಳಿಡುತ್ತವೆ. ಪುನಃ ರೈತರ ತೋಟಗಳಿಗೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡುತ್ತವೆ. ಈಗಾಗಲೇ ಲಕ್ಷಾಂತರ ರೂಪಾಯಿ ರೈತರ ಬೆಳೆ ಹಾನಿಯಾಗಿದೆ. ಆನೆಗೆ ಓರ್ವ ಬಲಿಯಾಗಿದ್ದಾನೆ. ಗ್ರಾಮಸ್ಥರು ಆನೆಗಳನ್ನು ಸೆರೆಹಿಡಿಯುವಂತೆ ಆಗ್ರಹಿಸುತ್ತಿದ್ದರೂ, ಅರಣ್ಯಾಧಿಕಾರಿಗಳು ಕೇವಲ ಹ್ಮಿಮೆಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅದೇನೆ ಆಗಲಿ, ಶೆಟ್ಟಿ ಹಳ್ಳಿ ಕಾಡಿನಲ್ಲಿರುವ ದೈತ್ಯ ಕಾಡಾನೆಗಳನ್ನು ಸೆರೆಹಿಡಿಯುವುದರಿಂದ ಅವುಗಳ ಜೀವ ಉಳಿಸಿದಂತಾಗುತ್ತದೆ.
ಬಸವಾಪುರ ಈಚಲವಾಡಿ ಆಯನೂರು ಚನ್ನಹಳ್ಳಿ ತಮ್ಮಡಿಹಳ್ಳಿ ಭಾಗದ ಕೆಲ ಬಗರ್ ಹುಕುಂ ಹೊಲಗಳಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಅಳವಡಿಸಲಾಗಿದೆ. ವನ್ಯಜೀವಿ ವಲಯದಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಹೊಂದಿರುವ ರೈತರ ವಿರುದ್ಧ ಮೆಸ್ಕಾಂ ಕ್ರಮ ಕೈಗೊಳ್ಳಬೇಕು. ಆದರೆ ಆ ಕಾರ್ಯವಾಗುತ್ತಿಲ್ಲ.ಅದರ ಜೊತೆಗೆ ರೈತರಿಗೆ ಅರಿವು ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ.
