ಮಲೆನಾಡು ಟುಡೆ ಸುದ್ದಿ / ಕಾರ್ಕಳ / ಜೀವವೈವಿಧ್ಯ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ವಿಶೇಷ ಮನ್ನಣೆಯೊಂದು ದೊರೆತಿದೆ. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ವಿಶಿಷ್ಟ ಪ್ರಭೇದದ ಮಲೆನಾಡಿನ ಮರಗಂತಿ ಕಪ್ಪೆ (Malabar Tree Toad) ಯನ್ನು ಕರ್ನಾಟಕ ರಾಜ್ಯದ ಅಧಿಕೃತ ಉಭಯಜೀವಿ ಎಂದು ಸರ್ಕಾರ ಘೋಷಣೆ ಮಾಡಿದೆ.
ಅಕ್ಟೋಬರ್ 27ರಂದು ಈ ಕುರಿತಾದ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಮೂಲಕ ರಾಜ್ಯ ಉಭಯಜೀವಿಯನ್ನು ಪ್ರಕಟಿಸಿದ ಭಾರತದ ಮೊಟ್ಟಮೊದಲ ರಾಜ್ಯ ಎಂಬ ಹೆಸರು ಕರ್ನಾಟಕದ್ದಾಗಿದೆ.
ಈ ಅಪರೂಪದ ಕಪ್ಪೆಯನ್ನ ಪೆಟು ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಪೆಡೋಸ್ಟಿಬೆಸ್ ಟ್ಯುಬರ್‌ಕ್ಯುಲೋಸಸ್ (Pedostibes tuberculosus) ಎಂಬುದಾಗಿದೆ.
ಪಶ್ಚಿಮ ಘಟ್ಟ ಸಾಲಿನ ವಿಶಿಷ್ಟ ಜೀವವೈವಿಧ್ಯವನ್ನು ಪ್ರತಿನಿಧಿಸುವ ಈ ಉಭಯಜೀವಿ ಹೆಚ್ಚಾಗಿ ಮರಗಳು, ಪೊದೆಗಳು ಮತ್ತು ದಟ್ಟವಾದ ಸಸ್ಯವರ್ಗಗಳ ನಡುವೆ ವಾಸಸ್ಥಾನವನ್ನು ಕಂಡುಕೊಂಡಿದೆ.
ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಇದು ಅತ್ಯಂತ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ. ಪರಿಸರಕ್ಕೆ ತಕ್ಕಂತೆ ತನ್ನ ಬಣ್ಣವನ್ನು ಬದಲಾಯಿಸಿಕೊಳ್ಳುವ ಅಥವಾ ಹೊಂದಿಕೊಳ್ಳುವ ವಿಶೇಷ ಲಕ್ಷಣವನ್ನು ಇದು ಹೊಂದಿದೆ.
