ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ತಾಲೂಕಿನ ಬಸವಾಪುರ ಸಮೀಪದ ಈಚಲವಾಡಿಯಲ್ಲಿ ಕರೆಂಟ್ ವಯರ್ ತುಳಿದು ಗಂಡಾನೆಯೊಂದು ಸಾವನ್ನಪ್ಪಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಘಟನೆಯ ಸಂಪೂರ್ಣ ವಿವರದ ಬಗ್ಗೆ ಮಾಹಿತಿ ನೀಡಿದರು. ಬೆಳಗಿನ ಜಾವ ಆನೆ ಸತ್ತಿರುವ ವಿಚಾರವಾಗಿ ನಮಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಅಂದಾಜಿನ ಪ್ರಕಾರ ಬೆಳಗಿನ ಜಾವ 3 ಗಂಟೆಗೆ ಜಮೀನಿನಲ್ಲಿ ಮರದ ಕೋಲುಗಳನ್ನು ಬಳಸಿಕೊಂಡು ನಿರ್ಮಿಸಲಾಗಿದ್ದ ವಿದ್ಯುತ್ ತಂತಿಯನ್ನು ತುಳಿದು 13 ವರ್ಷದ ಆನೆ ಸಾವನ್ನಪ್ಪಿರುವುದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಅಲಿಮಿಯಾ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನನ್ನು ವಿಚಾರಣೆ ನಡೆಸಿದ್ದೇವೆ. ಆಗ ಆತ ಭತ್ತದ ಪೈರು ಬೆಳೆದು ಫಸಲಿಗೆ ಸಿದ್ಧವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಡುಪ್ರಾಣಿಗಳ ಕಾಟ ಹೆಚ್ಚಾಗಿದ್ದು, ಬೆಳೆ ನಷ್ಟವಾಗಬಹುದು ಎಂಬ ದೃಷ್ಟಿಯಿಂದ ಕರೆಂಟ್ ವಯರ್ ಅಳವಡಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಈಗಾಗಲೇ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ನಮ್ಮ ಎಸ್.ಓ.ಪಿ. (SOP) ನಿಯಮದಂತೆ ಆನೆಯ ಮರಣೋತ್ತರ ಪರೀಕ್ಷೆ ನಡೆಸುತ್ತೇವೆ, ಹಾಗೆಯೇ ಆರೋಪಿಯ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿರುವ ನಿಯಮದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇನ್ನು ಸ್ಥಳೀಯರಾದ ಬಾಲಕೃಷ್ಣ ಎಂಬುವವರು ಮಾತನಾಡಿ, ಹಂದಿ ಶಿಕಾರಿಗೋ ಅಥವಾ ಬೆಳೆ ರಕ್ಷಣೆಗೋ ಎಲ್.ಟಿ. ಕರೆಂಟ್‌ಗೆ ಡೈರೆಕ್ಟ್ ಆಗಿ ಕನೆಕ್ಷನ್ ಕೊಟ್ಟಿದ್ದಾರೆ. ಅದು ನೋಡಿದರೆ ಜಮೀನಿನ ಮಧ್ಯದಲ್ಲಿ ಕೊಟ್ಟಿದ್ದಾರೆ. ಕಾಡುಪ್ರಾಣಿಗಳ ಬಗ್ಗೆ ಫಾರೆಸ್ಟ್‌ನವರು ಜನರಿಗೆ ಅವೇರ್‌ನೆಸ್ (ಅರಿವು) ಮೂಡಿಸಬೇಕು. ಕಾಡಂಚಿನ ಜನರಿಗೆ ಮಾಹಿತಿ ನೀಡಿ ಜಾಸ್ತಿ ಕಾರ್ಯಕ್ರಮಗಳನ್ನು ಮಾಡಬೇಕು. ನೀರು ಮತ್ತು ಆಹಾರ ಹುಡುಕಿ ಕಾಡುಪ್ರಾಣಿಗಳು ಹೊರಗೆ ಬರುತ್ತವೆ. ಶಿವಮೊಗ್ಗ ಅಭಿವೃದ್ಧಿ ಆಗುತ್ತಲೇ ಇದೆ. ಕಾಡಂಚಿನಲ್ಲಿ ಒತ್ತುವರಿಯಾಗಿ ಜಮೀನು ಜಾಸ್ತಿಯಾಗುತ್ತಿದೆ. ಜನರೂ ತಮ್ಮ ಆಸೆಯನ್ನು ಕಡಿಮೆ ಮಾಡಿಕೊಂಡು ಪ್ರಾಣಿಗಳೊಡನೆ ಸಂಘರ್ಷ ಕಡಿಮೆ ಮಾಡಿಕೊಂಡು, ನಾವು ಬದುಕಿ ಅವುಗಳನ್ನೂ ಬದುಕಲು ಬಿಡಬೇಕು ಎಂದರು.
