ಮಲೆನಾಡು ಟುಡೆ ಸುದ್ದಿ / ಬಾಳೆಹೊನ್ನೂರು / ಪರಿಚಯಸ್ಥರಿಂದ ಕೊಡಿಸಿದ್ದ ₹50 ಸಾವಿರ ಸಾಲ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಆರೋಪದಡಿ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುದುಗುಣಿ ಗ್ರಾಮದ ರಾಜು ಹಲ್ಲೆಗೊಳಗಾದ ವ್ಯಕ್ತಿ. ಇದೇ ಗ್ರಾಮದ ಸುರೇಶ್ ಹಾಗೂ ಹರಿಪ್ರಸಾದ್ ವಿರುದ್ಧ ಹಲ್ಲೆ ಮತ್ತು ಕೊಲೆ ಬೆದರಿಕೆ ಆರೋಪ ಕೇಳಿಬಂದಿದೆ.
ಸುಮಾರು 5 ತಿಂಗಳ ಹಿಂದೆ ಮುದುಗುಣಿ ಗ್ರಾಮದ ಸುರೇಶ್ ಅವರು ಹಣದ ಅವಶ್ಯಕತೆಯಿದ್ದು, ಯಾರ ಬಳಿಯಾದರೂ ಸಾಲ ಕೊಡಿಸುವಂತೆ ರಾಜು ಅವರನ್ನು ಕೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರಾಜು ತಮ್ಮ ಪರಿಚಯಸ್ಥರಾದ ಕಾಡುಸಿಗಸೆ ಗ್ರಾಮದ ಚಂದ್ರೇಗೌಡ ಅವರಿಂದ ಸುರೇಶ್ ಅವರಿಗೆ ₹50,000 ಸಾಲ ಕೊಡಿಸಿದ್ದರು.
ನವೆಂಬರ್ 8ರಂದು ರಾಜು ಅವರು ಸುರೇಶ್ ಅವರನ್ನು ಭೇಟಿಯಾಗಿ ಸಾಲದ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದರು. ಇದಕ್ಕೆ ಸುರೇಶ್ ಮರುದಿನ ಹಣ ಹಿಂದಿರುಗಿಸುವುದಾಗಿ ತಿಳಿಸಿ ಕಳುಹಿಸಿದ್ದರು.
ಆದರೆ, ಮರುದಿನ ಸುರೇಶ್ ಅವರು ಹರಿಪ್ರಸಾದ್ ಎಂಬುವವರೊಂದಿಗೆ ರಾಜು ಅವರ ಮನೆ ಬಳಿ ಬಂದು ಗಲಾಟೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಾಲದ ಹಣವನ್ನು ವಾಪಸ್ ಕೇಳಿದ್ದಕ್ಕೆ ಆಕ್ರೋಶಗೊಂಡು ರಾಜು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಕತ್ತಿಯಿಂದ ತಲೆಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಸುರೇಶ್ ಹಾಗೂ ಹರಿಪ್ರಸಾದ್ ಇಬ್ಬರೂ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ರಾಜು ಆರೋಪಿಸಿದ್ದಾರೆ.
ತಮ್ಮ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಇಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಜು ಬಾಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
