ಶಿವಮೊಗ್ಗ : ಪ್ರಮುಖ ಮೂರು ವಿಚಾರಗಳ ಕುರಿತಾಗಿ ಜೆಡಿಎಸ್​ ವತಿಯಿಂದ ಸೆಪ್ಟಂಬರ್​ 18 ರಂದು ಬೃಹತ್​ ಪ್ರತಿಭಟನೆ

ಹಂಚಿಕೊಳ್ಳಿ
WhatsApp Facebook X Telegram
ಜಿಲ್ಲಾ ಜೆಡಿಎಸ್_ ವತಿಯಿಂದ ಶಿವಮೊಗ್ಗದಲ್ಲಿ ಸೆ18 ರಂದು ಪ್ರತಿಭಟನೆ
ಜಿಲ್ಲಾ ಜೆಡಿಎಸ್_ ವತಿಯಿಂದ ಶಿವಮೊಗ್ಗದಲ್ಲಿ ಸೆ18 ರಂದು ಪ್ರತಿಭಟನೆ

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ಕಸ್ತೂರಿ ರಂಗನ್ ವರದಿ, ಕೆಪಿಎಸ್‌ಸಿ ಹಗರಣ ಹಾಗೂ ಬರದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಶಿವಮೊಗ್ಗದಲ್ಲಿ ಸೆಪ್ಟೆಂಬರ್ 18 ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಜೆಡಿಎಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಹೇಳಿದರು. 

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯು ಮಲೆನಾಡಿನ ರೈತರ ಬದುಕಿಗೆ ಮರಣಶಾಸನವಾಗಿದ್ದು, ಕೇಂದ್ರ ಸರ್ಕಾರ ಇದನ್ನು 7ನೇ ಬಾರಿಗೆ ಮಂಡಿಸಲು ಹೊರಟಿದೆ. ಸರ್ಕಾರ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಈ ಅಧಿಸೂಚನೆ ಮಂಡನೆಯಾಗುತ್ತಿದ್ದು, ಇದರಿಂದ 1,575 ಗ್ರಾಮಗಳ ರೈತರಿಗೆ ತೀವ್ರ ಅನ್ಯಾಯವಾಗಲಿದೆ. ಇದನ್ನು ಜೆಡಿಎಸ್ ವಿರೋಧಿಸುತ್ತದೆ ಎಂದರು.

ಇದೇ ವೇಳೆ ಕೆಪಿಎಸ್‌ಸಿ ಹಗರಣದ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದ ಅವರು, ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದರೂ ಸರ್ಕಾರ ಸ್ಪಷ್ಟ ನಿಲುವು ತಳೆದಿಲ್ಲ ಎಂದು ಕಿಡಿಕಾರಿದರು. ರಾಜ್ಯದ 200 ತಾಲೂಕುಗಳನ್ನು ಬರಪೀಡಿತ ಎಂದು ಡಿಸಿಎಂ ಹೇಳಿದ್ದಾರಷ್ಟೇ. ಆದರೆ ಶಿವಮೊಗ್ಗ ಜಿಲ್ಲೆಯ ಎಲ್ಲಾ 7 ತಾಲೂಕುಗಳನ್ನು ಅಧಿಕೃತವಾಗಿ ಬರಪೀಡಿತ ಪ್ರದೇಶವೆಂದು ತಕ್ಷಣ ಘೋಷಿಸಬೇಕು ಎಂದು ಆಗ್ರಹಿಸಿದರು.

ಈ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆಪ್ಟೆಂಬರ್ 18ರಂದು ಬೆಳಿಗ್ಗೆ 11 ಗಂಟೆಗೆ ಜೆಡಿಎಸ್ ಕಚೇರಿಯಿಂದ ಮೆರವಣಿಗೆ ಹೊರಟು, ಜಿಲ್ಲಾಧಿಕಾರಿಗಳ ಕಚೇರಿಯ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಶಾಸಕಿ ಶಾರದಾ ಪೂರ್ಯಾನಾಯ್ಕ್ ನೇತೃತ್ವದಲ್ಲಿ ನಡೆಯಲಿರುವ ಈ ಬೃಹತ್ ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಶಾರದಾ ಅಪ್ಪಾಜಿ ಗೌಡ ಹಾಗೂ ನರಸಿಂಹ ಗಂಧದಮನೆ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor