ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಖಾಸಗಿ ಕಂಪನಿಯೊಂದು ಶಿವಮೊಗ್ಗದ ಮಹಿಳೆಯೊಬ್ಬರಿಗೆ ಲೋನ್ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ವಂಚಕರ ವಿರುದ್ಧ ದೂರು ದಾಖಲಾಗಿದೆ.
ಟೈಲರಿಂಗ್ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರಿಗೆ ಸಾಲದ ಅನಿವಾರ್ಯತೆ ಇದ್ದಿದ್ದರಿಂದ ಕ್ಯಾಶ್ ಲೋನ್’ ಮತ್ತು ಲೀಡ್ ಮಿ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಆಗ ಕಂಪನಿಯವರು ಮಹಿಳೆಯ ಮೊಬೈಲ್‌ನಲ್ಲಿ ಆ್ಯಪ್ ಒಂದನ್ನು ಇನ್‌ಸ್ಟಾಲ್ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ, ಲೋನ್ ಕೊಡುವುದಾಗಿ ನಂಬಿಸಿ ದೂರುದಾರರ ಖಾತೆಯಿಂದ ಅಕ್ರಮವಾಗಿ ವಿವಿಧ ಕಂತುಗಳಲ್ಲಿ ಒಟ್ಟು 4,14,772 ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ದೂರುದಾರರು ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ವಂಚಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
