Thirthahalli ತೀರ್ಥಹಳ್ಳಿ : ಕೆಲವೊಂದು ವಿಚಾರಗಳು ಕೇಳುವುದಕ್ಕೆ ವಿಚಿತ್ರವಾಗಿಯೇ ಇದ್ದರೂ ಸಹ ಅವು ಸತ್ಯವೇ ಆಗಿರುತ್ತವೆ. ಕೆಲವರಿಗೆ ಅದು ಹೀಗೆಲ್ಲಾ ಆಗುತ್ತಾ? ಅನ್ನುವಂತಹ ಪ್ರಶ್ನೆಯನ್ನು ಮೂಡಿಸುತ್ತದೆ. ಈಗ ತೀರ್ಥಹಳ್ಳಿಯಲ್ಲಿಯೂ ಸಹ ಈ ರೀತಿ ಎಲ್ಲಾ ಆಗುತ್ತಾ ಎಂದು ಯೋಚಿಸುವ ಘಟನೆಯೊಂದು ನಡೆದಿದೆ. ಏನೆಂದರೆ, ತೀರ್ಥಹಳ್ಳಿಯ ಕುರುವಳ್ಳಿ ಬಳಿ ಸ್ನೇಹಿತನೊಬ್ಬ ಬಿಯರ್ ಕುಡಿಯಲ್ಲ ಎಂದಿದ್ದಕ್ಕೆ ಚಾಕು ತೆಗೆದುಕೊಂಡು ಚುಚ್ಚಿಬಿಟ್ಟಿದ್ದಾನೆ ಈ ವಿಚಿತ್ರ ಘಟನೆ ಹೇಗೆ ನಡೆಯಿತು, ಏಕೆ ನಡೆಯಿತು ಮತ್ತು ಎಫ್‌ಐಆರ್‌ನಲ್ಲಿ ಏನಿದೆ ಎನ್ನುವಂತಹ ಸಂಪೂರ್ಣ ಸುದ್ದಿ ಇಲ್ಲಿದೆ ನೋಡಿ.
Thirthahalli ಎಫ್ ಐ ಆರ್ನಲ್ಲಿ ಏನಿದೆ?
ಹೌದು, ತೀರ್ಥಹಳ್ಳಿಯ ಕುರುವಳ್ಳಿ ಬಾರ್ ಒಂದರಲ್ಲಿ ವ್ಯಕ್ತಿಯೊಬ್ಬ ಬಿಯರ್ ಕುಡಿಲಿಲ್ಲ ಅನ್ನೋ ವಿಚಾರಕ್ಕೆ ಸ್ನೇಹಿತನ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಈ ವಿಚಾರವಾಗಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್ ಐ ಆರ್ ನಲ್ಲಿರುವ ವಿಚಾರ ಏನಪ್ಪ ಅಂತ ನೋಡೋದಾದರೆ
ದೂರುದಾರ ಅಂಜನಪ್ಪ (ಹೆಸರನ್ನು ಬದಲಿಸಲಾಗಿದೆ) ಕೂಲಿ ಕೆಲಸಗಾರ. ಈತ ಎಲ್ಲರಂತೆ ಕೆಲಸ ಮಾಡಿ ಮನೆಗೆ ಬಂದು ಮೈಕೈ ನೋವಿಗೆ ಸ್ವಲ್ಪ ಬಿಯರ್ ಕುಡಿಯೋಣ ಅಂತ ಕುರುವಳ್ಳಿ ಬಾರ್ ಒಂದಕ್ಕೆ ಹೋಗಿದ್ದಾರೆ. ನಂತರ ಒಬ್ಬರೇ ಬಿಯರ್ ಕುಡಿಯುತ್ತಾ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಅಂಜನಪ್ಪನ ಹಳೆ ಸ್ನೇಹಿತನೊಬ್ಬ ಬಾರ್‌ನಲ್ಲಿ ಅಂಜನಪ್ಪರಿಗೆ ಎದುರಾಗಿದ್ದಾನೆ. ಆತ ಅಂಜನಪ್ಪನನ್ನ ನೋಡಿದವನೇ ತಮಾಷೆಗೆಂದು ಚಾಕು ತೆಗೆದು, ಬಾರೋ ನಾನೇ ನಿನಗೆ ಬಿಯರ್ ಕೊಡಿಸ್ತೀನಿ, ನೀನು ಕುಡಿಬೇಕು”ಎಂದು ಒತ್ತಾಯಿಸಿದ್ದಾನೆ.
ಆಗ ಅಂಜನಪ್ಪ ಬೀಯರ್ ಬೇಡವೆಂದು ಸ್ನೇಹಿತನ ಆಫರ್ನ್ನು ನಯವಾಗಿಯೇ ನಿರಾಕರಿಸಿದ್ದಾನೆ. ಆಗ ಕೆರಳಿದ ಸ್ನೇಹಿತ, ನಾನು ಕೊಡ್ಸಿದ್ರೆ ನೀನು ಕುಡಿಯಲ್ಲ, ಬೇರೆಯವರು ಕೊಡ್ಸಿದ್ರೆ ಕುಡಿತೀಯಾ ಅಂತ ಜಗಳ ತೆಗೆದಿದ್ದಾನೆ. ಇದನ್ನ ಗಮನಿಸಿದ ಅಂಜನಪ್ಪ ಇಲ್ಲಿದ್ದರೆ ಸರಿ ಆಗಲ್ಲ ಅಂತ ಬಾರ್ನಿಂದ ಹೊರಡಲು ಸಿದ್ದರಾಗಿದ್ದಾರೆ. ಆದರೆ ಈ ವೇಳೆ ಕೋಪಗೊಂಡ ಆರೋಪಿ ಹಾಗೂ ಆತನ ಜತೆಗಿದ್ದ ಇನ್ನೊಬ್ಬಾತ ಅಂಜನಪ್ಪನ ಮೇಲೆ ಬಿಯರ್ ಬಾಟಲ್ನಿಂದ ಹಲ್ಲೆ ಮಾಡೋಕೆ ಮುಂದಾಗಿದ್ದಾರೆ. ಆಗ ಅಂಜನಪ್ಪ ಹೇ ನನಗೆ ಹೊಡಿಯೋಕೆ ಬರ್ತಿಯಾ, ನಿನ್ನ ಅಣ್ಣನಿಗೆ ಹೇಳ್ತೇನೆ ಎಂದಿದ್ದಾರೆ. ಇದರಿಂದ ಮತ್ತಷ್ಟು ಸಿಟ್ಟಾದ ಆರೋಪಿ ನೀನು ಬದ್ಕಿದ್ರೆ ತಾನೇ ನಿನ್ನ ಅಣ್ಣನಿಗೆ ಹೇಳೋದು ಅಂತ ಚಾಕನ್ನು ಚುಚ್ಚಲು ಮುಂದಾಗಿದ್ದಾನೆ.
ಈ ವೇಳೆ ಅಂಜನಪ್ಪ ತಪ್ಪಿಸಿಕೊಂಡಿದ್ದಾರೆ. ಆದರೂ ಸಹ ಚಾಕು ಅಂಜನಪ್ಪನವರ ಬೆನ್ನಿಗೆ ತಾಗಿ ಗಾಯಗಳಾಗಿವೆ. ಆಗ ಅಂಜನಪ್ಪ ಕೂಗಿಕೊಂಡಾಗ ಬಾರ್ ಮಾಲೀಕರು, ಕ್ಯಾಶಿಯರ್ ಮತ್ತು ಅಕ್ಕಪಕ್ಕದವರು ಉಪಚರಿಸಿ ಜೆ.ಸಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾವಾಯ್ತು ನಮ್ಮ ಪಾಡಾಯ್ತು ಅಂತ ಸುಮ್ಮನೆ ಇದ್ದರೂ ಸಹ ಕೆಲವೊಂದು ಸಣ್ಣ ಸಣ್ಣ ವಿಚಾರ ಹಾಗೆಯೇ ಅನಿರೀಕ್ಷಿತ ಘಟನೆಗಳು ನಮ್ಮ ಜೀವಕ್ಕೆ ಕಂಟಕವಾಗುತ್ತೆ, ಎಷ್ಟೇ ಜಾಗೃತರಾಗಿದ್ದರೂ ಸಹ ಸಾಲಲ್ಲ ಅನ್ನೋ ಈ ಮಾತಿಗೆ ಇದೊಂದು ಘಟನೆ ನಿದರ್ಶನವಾಗಿದೆ.





