ಹಾಲಾಡಿ ಸೇತುವೆ ಮೇಲೇ ಆಕಳಿಸಿದ ಹುಲಿರಾಯ ವಿಡಿಯೋ ಅಸಲಿಯತ್ತು ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram
haladi tiger video viral fact check fact
haladi tiger video viral fact check fact

viral fact check / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸೇತುವೆಯ ತಡೆಗೋಡೆಯ ಮೇಲೆ ಮಳೆಯ ನಡುವೆ ಹುಲಿಯೊಂದು ಆಕಳಿಸುತ್ತಿರುವ ದೃಶ್ಯವೊಂದು ಹೊಸದಾಗಿ ವೈರಲ್ ಆಗುತ್ತಿದೆ. ಆದರೆ ಈ ದೃಶ್ಯಕ್ಕೂ ಉಡುಪಿ ಜಿಲ್ಲೆಯ ಕುಂದಾಪುರದ ಹಾಲಾಡಿಗೂ ಯಾವುದೇ ಸಂಬಂಧವಿಲ್ಲ. ಈ ವಿಡಿಯೋ ಎರಡು-ಮೂರು ವರ್ಷಗಳ ಹಿಂದಿನ ಹಳೆಯ ವಿಡಿಯೋ ಆಗಿದ್ದು, ಕಾಲಕಾಲಕ್ಕೆ ಬೇರೆ ಬೇರೆ ಊರುಗಳ ಹೆಸರಿನಲ್ಲಿ ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಬಂದಿದೆ.

ಈ ವಿಡಿಯೋ ಮಲೆನಾಡು ಟುಡೆಗೂ ಬಂದಿತ್ತು, ಹೀಗಾಗಿ ಗೂಗಲ್​ ಹಾಗೂ ಗೂಗಲ್ ಜೆಮಿನಿ ಮೂಲಕ ವಿಡಿಯೋದ ಫ್ಯಾಕ್ಟ್ ಚೆಕ್ ಮಾಡಿದಾಗ ವಿಡಿಯೋದ ಅಸಲಿಯತ್ತು ಹೊರಬಿದ್ದಿದೆ. ಈ ವಿಡಿಯೋ ಇದೇ ಮೊದಲ ಬಾರಿಗೆ ವೈರಲ್ ಆಗುತ್ತಿಲ್ಲ. 2022 ರ ಜೂನ್ ತಿಂಗಳಿನಲ್ಲಿ ಇದೇ ವಿಡಿಯೋ ಭಾರಿ ಸುದ್ದಿಯಾಗಿತ್ತು. ಆಗ ಇದು ತೆಲಂಗಾಣದ ವಾಂಕಿಡಿ ಮಂಡಲದ ರುದ್ರರಾಮ ಗ್ರಾಮದ ಬಳಿಯ ಸೇತುವೆ ಮೇಲೆ ಕಾಣಿಸಿಕೊಂಡ ಹುಲಿ ಎಂದು ಪ್ರಚಾರ ಪಡೆದಿತ್ತು. ಅದೇ ಸಮಯದಲ್ಲಿ ತೆಲಂಗಾಣ ಟುಡೇ ಸೇರಿದಂತೆ ಹಲವು ಪ್ರಮುಖ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದವು. ಅಂದು ತೆಲಂಗಾಣದ ಜಿಲ್ಲಾ ಅರಣ್ಯಾಧಿಕಾರಿ ಬಿ. ಲಾವಣ್ಯ ಅವರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿ, ಈ ವಿಡಿಯೋ ತಮ್ಮ ಜಿಲ್ಲೆಗೆ ಸೇರಿದ್ದಲ್ಲ, ಇದೊಂದು ಸುಳ್ಳು ವದಂತಿ ಎಂದು ಸ್ಪಷ್ಟಪಡಿಸಿದ್ದರು.

ಅದಾದ ಬಳಿಕ 2023 ರ ಸೆಪ್ಟೆಂಬರ್ ತಿಂಗಳಿನಲ್ಲಿ ಇದೇ ವಿಡಿಯೋ ಮತ್ತೆ ಮುನ್ನೆಲೆಗೆ ಬಂತು. ಆಗ ಇದು ಕರ್ನಾಟಕದ ದಾಂಡೇಲಿ – ಖಾನಾಪುರ ರಸ್ತೆಯಲ್ಲಿ ಪ್ರತ್ಯಕ್ಷವಾದ ವ್ಯಾಘ್ರ ಎಂಬ ಟೈಟಲ್​ನೊಂದಿಗೆ ವೈರಲ್ ಆಗಿತ್ತು. ಆಗಲೂ ಅರಣ್ಯ ಇಲಾಖೆಯ ಅಧಿಕಾರಿಗಳು ಇದು ಸುಳ್ಳು, ಆ ಭಾಗದಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈ ಘಟನೆಯ ಕುರಿತು ತೆಲುಗು ಪೋಸ್ಟ್ ಸೇರಿದಂತೆ ಹಲವು ವೆಬ್‌ಸೈಟ್‌ಗಳು ಫ್ಯಾಕ್ಟ್-ಚೆಕ್ ಪ್ರಕಟಿಸಿ, ಈ ವಿಡಿಯೋ ಹಳೆಯದು ಸಾಬೀತು ಮಾಡಿದ್ದವು.

ಈ ಮೂಲ ವಿಡಿಯೋ ನಿಖರವಾಗಿ ಯಾವ ಅರಣ್ಯ ಪ್ರದೇಶದ್ದು ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ, ಬಹಳಷ್ಟು ಪ್ಯಾಕ್ಟ್ ಚೆಕ್ ವರದಿಗಳು ಹಾಗೂ ವನ್ಯಜೀವಿ ತಜ್ಞರು ಇದನ್ನು ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಅಥವಾ ಮಧ್ಯಪ್ರದೇಶದ ಹುಲಿ ಸಂರಕ್ಷಿತ ಪ್ರದೇಶದ ಮಾರ್ಗದಲ್ಲಿ ಪ್ರವಾಸಿಗರು ಸೆರೆಹಿಡಿದ ದೃಶ್ಯ ಎಂದು ಗುರುತಿಸಿದ್ದಾರೆ.

ಒಟ್ಟಾರೆಯಾಗಿ, ವಿಡಿಯೋದಲ್ಲಿರುವುದು ನಿಜವಾದ ಹುಲಿಯೇ ಆದರೂ, ಅದು ಹಾಲಾಡಿಯದ್ದಲ್ಲ ಎಂಬುದು ದೃಢಪಟ್ಟ ಸತ್ಯ. ಹಳೆಯ ವಿಡಿಯೋಗೆ ಸ್ಥಳೀಯ ಊರಿನ ಹೆಸರನ್ನು ಸೇರಿಸಿ ಜನರಲ್ಲಿ ಆತಂಕ ಸೃಷ್ಟಿಸಲು ವಾಟ್ಸ್‌ಆ್ಯಪ್‌ನಲ್ಲಿ ಇದನ್ನು ಹರಿಬಿಡಲಾಗುತ್ತಿದೆಯಷ್ಟೆ

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor