Chikkamagaluru / ಮಲೆನಾಡು ಟುಡೆ ಸುದ್ದಿ / ಚಿಕ್ಕಮಗಳೂರು / ಕೇರಳ ಲಾಟರಿಯಲ್ಲಿ ಬರೋಬ್ಬರಿ 8 ಲಕ್ಷ ರೂಪಾಯಿ ಬಹುಮಾನ ಬಂದಿರುವುದಾಗಿ ನಂಬಿಸಿದ ವಂಚಕರು, ಮಹಿಳೆಯೊಬ್ಬರಿಂದ 2.34 ಲಕ್ಷ ರೂಪಾಯಿಗೂ ಅಧಿಕ ಹಣ ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ನಗರದ ನಿವಾಸಿ ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.
ಘಟನೆ ವಿವರ ಹೀಗಿದೆ. ಅಪರಿಚಿತ ವ್ಯಕ್ತಿಯೊಬ್ಬರು ಸಂತ್ರಸ್ತೆಯ ಮೊಬೈಲ್ಗೆ ಕರೆಮಾಡಿ ತಾನು ಕೇರಳ ಲಾಟರಿ ಸಂಸ್ಥೆಯ ಕಡೆಯಿಂದ ಮಾತನಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡಿದ್ದ . ಆನಂತರ ಆನ್‌ಲೈನ್ ಮೂಲಕ ಲಾಟರಿ ಟಿಕೆಟ್ ಖರೀದಿಸುವಂತೆ ಪ್ರೇರೇಪಿಸಿದ ಆತ, ವಾಟ್ಸ್ ಆಪ್ ಮೂಲಕ ಸುಮಾರು 30 ಲಾಟರಿ ಕಳುಹಿಸಿಕೊಟ್ಟಿದ್ದ. ಆ ಪಟ್ಟಿಯಿಂದ ಒಂದು ನಿರ್ದಿಷ್ಟ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡ ದೂರುದಾರರು, ಟಿಕೆಟ್ ದರ 99 ರೂಪಾಯಿ ಆನ್‌ಲೈನ್ ಮೂಲಕವೇ ಪಾವತಿಸಿದ್ದರು.
ಟಿಕೆಟ್ ಹಣ ಪಾವತಿಸಿದ ದಿನವೇ ಮಧ್ಯಾಹ್ನದ ವೇಳೆಗೆ ಮತ್ತೆ ಕರೆ ಮಾಡಿದ ಆರೋಪಿ, ಲಾಟರಿ ಡ್ರಾ ಆಗಿದ್ದು 8 ಲಕ್ಷ ರೂಪಾಯಿ ಬಹುಮಾನ ಬಂದಿದೆ ಅಂತಾ ನಂಬಿಸಿದ್ದಾರೆ. ಅಲ್ಲದೆ ಇದನ್ನ ಪಕ್ಕಾ ಮಾಡಿಕೊಳ್ಳಲು ಗೂಗಲ್‌ನಲ್ಲಿ ನೋಡಿ ಅಂತಾ ಲಿಂಕ್ವೊಂದನ್ನ ನೀಡಿದ್ದಾರೆ. ಅದನ್ನ ನಂಬಿದ ಮಹಿಳೆಗೆ ಲಾಟ್ರಿ ದುಡ್ಡು ತೆಗೆದುಕೊಳ್ಳಲು ವಿವಿಧ ತೆರಿಗೆ ಮತ್ತು ಶುಲ್ಕ ಭರಿಸಬೇಕು ಎಂದು ನಂಬಿಸಿದ್ದಾರೆ.
ಬಳಿಕ ಹಂತಹಂತವಾಗಿ ಒಟ್ಟಾರೆ 2,34,200 ರೂಪಾಯಿ ಆರೋಪಿಗಳು ಹೇಳಿದ ಅಕೌಂಟ್ಗೆ ಹಾಕಿದ್ದಾರೆ. ಬಳಿಕ ಈ ಬಗ್ಗೆ ಸಂಶಯ ಬಂದು ತಕ್ಷಣ ಸೈಬರ್ ಸಹಾಯವಾಣಿ ಸಂಖ್ಯೆ 1930 ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.
