ಬಿಯರ್ ಕುಡಿಯಲು ಕರೆದು, ಚಾಕುವಿನಿಂದ ಇರಿದ ಮಿತ್ರ

Thirthahalli ತೀರ್ಥಹಳ್ಳಿ : ಕೆಲವೊಂದು ವಿಚಾರಗಳು ಕೇಳುವುದಕ್ಕೆ ವಿಚಿತ್ರವಾಗಿಯೇ ಇದ್ದರೂ ಸಹ ಅವು ಸತ್ಯವೇ ಆಗಿರುತ್ತವೆ. ಕೆಲವರಿಗೆ ಅದು ಹೀಗೆಲ್ಲಾ ಆಗುತ್ತಾ? ಅನ್ನುವಂತಹ ಪ್ರಶ್ನೆಯನ್ನು ಮೂಡಿಸುತ್ತದೆ. ಈಗ ತೀರ್ಥಹಳ್ಳಿಯಲ್ಲಿಯೂ ಸಹ ಈ ರೀತಿ ಎಲ್ಲಾ ಆಗುತ್ತಾ ಎಂದು ಯೋಚಿಸುವ ಘಟನೆಯೊಂದು ನಡೆದಿದೆ. ಏನೆಂದರೆ, ತೀರ್ಥಹಳ್ಳಿಯ ಕುರುವಳ್ಳಿ ಬಳಿ ಸ್ನೇಹಿತನೊಬ್ಬ ಬಿಯರ್​ ಕುಡಿಯಲ್ಲ ಎಂದಿದ್ದಕ್ಕೆ ಚಾಕು ತೆಗೆದುಕೊಂಡು ಚುಚ್ಚಿಬಿಟ್ಟಿದ್ದಾನೆ ಈ ವಿಚಿತ್ರ ಘಟನೆ ಹೇಗೆ ನಡೆಯಿತು, ಏಕೆ ನಡೆಯಿತು ಮತ್ತು ಎಫ್‌ಐಆರ್‌ನಲ್ಲಿ ಏನಿದೆ ಎನ್ನುವಂತಹ ಸಂಪೂರ್ಣ ಸುದ್ದಿ ಇಲ್ಲಿದೆ ನೋಡಿ.

Thirthahalli ಎಫ್​​ ಐ ಆರ್​​ನಲ್ಲಿ ಏನಿದೆ?

ಹೌದು, ತೀರ್ಥಹಳ್ಳಿಯ ಕುರುವಳ್ಳಿ ಬಾರ್​​ ಒಂದರಲ್ಲಿ ವ್ಯಕ್ತಿಯೊಬ್ಬ ಬಿಯರ್​​ ಕುಡಿಲಿಲ್ಲ ಅನ್ನೋ ವಿಚಾರಕ್ಕೆ ಸ್ನೇಹಿತನ ಮೇಲೆ ಚಾಕುವಿನಿಂದ  ಇರಿದಿದ್ದಾನೆ. ಈ ವಿಚಾರವಾಗಿ ತೀರ್ಥಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್​​ ಐ ಆರ್​ ನಲ್ಲಿರುವ ವಿಚಾರ ಏನಪ್ಪ ಅಂತ ನೋಡೋದಾದರೆ

ದೂರುದಾರ ಅಂಜನಪ್ಪ (ಹೆಸರನ್ನು ಬದಲಿಸಲಾಗಿದೆ)  ಕೂಲಿ ಕೆಲಸಗಾರ. ಈತ ಎಲ್ಲರಂತೆ ಕೆಲಸ ಮಾಡಿ ಮನೆಗೆ ಬಂದು ಮೈಕೈ ನೋವಿಗೆ ಸ್ವಲ್ಪ ಬಿಯರ್ ಕುಡಿಯೋಣ ಅಂತ ಕುರುವಳ್ಳಿ ಬಾರ್​ ಒಂದಕ್ಕೆ ಹೋಗಿದ್ದಾರೆ. ನಂತರ ಒಬ್ಬರೇ ಬಿಯರ್​ ಕುಡಿಯುತ್ತಾ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಅಂಜನಪ್ಪನ ಹಳೆ ಸ್ನೇಹಿತನೊಬ್ಬ ಬಾರ್‌ನಲ್ಲಿ ಅಂಜನಪ್ಪರಿಗೆ ಎದುರಾಗಿದ್ದಾನೆ. ಆತ ಅಂಜನಪ್ಪನನ್ನ ನೋಡಿದವನೇ ತಮಾಷೆಗೆಂದು ಚಾಕು ತೆಗೆದು, ಬಾರೋ ನಾನೇ ನಿನಗೆ ಬಿಯರ್​ ಕೊಡಿಸ್ತೀನಿ, ನೀನು ಕುಡಿಬೇಕು”ಎಂದು ಒತ್ತಾಯಿಸಿದ್ದಾನೆ.

ಆಗ ಅಂಜನಪ್ಪ ಬೀಯರ್​ ಬೇಡವೆಂದು ಸ್ನೇಹಿತನ ಆಫರ್​ನ್ನು ನಯವಾಗಿಯೇ ನಿರಾಕರಿಸಿದ್ದಾನೆ. ಆಗ ಕೆರಳಿದ ಸ್ನೇಹಿತ, ನಾನು ಕೊಡ್ಸಿದ್ರೆ ನೀನು ಕುಡಿಯಲ್ಲ, ಬೇರೆಯವರು ಕೊಡ್ಸಿದ್ರೆ ಕುಡಿತೀಯಾ ಅಂತ ಜಗಳ ತೆಗೆದಿದ್ದಾನೆ. ಇದನ್ನ ಗಮನಿಸಿದ ಅಂಜನಪ್ಪ ಇಲ್ಲಿದ್ದರೆ ಸರಿ ಆಗಲ್ಲ ಅಂತ ಬಾರ್​ನಿಂದ ಹೊರಡಲು ಸಿದ್ದರಾಗಿದ್ದಾರೆ. ಆದರೆ ಈ ವೇಳೆ ಕೋಪಗೊಂಡ ಆರೋಪಿ ಹಾಗೂ ಆತನ ಜತೆಗಿದ್ದ ಇನ್ನೊಬ್ಬಾತ ಅಂಜನಪ್ಪನ ಮೇಲೆ ಬಿಯರ್ ಬಾಟಲ್​ನಿಂದ ಹಲ್ಲೆ ಮಾಡೋಕೆ ಮುಂದಾಗಿದ್ದಾರೆ. ಆಗ ಅಂಜನಪ್ಪ ಹೇ ನನಗೆ ಹೊಡಿಯೋಕೆ ಬರ್ತಿಯಾ, ನಿನ್ನ ಅಣ್ಣನಿಗೆ ಹೇಳ್ತೇನೆ ಎಂದಿದ್ದಾರೆ. ಇದರಿಂದ ಮತ್ತಷ್ಟು ಸಿಟ್ಟಾದ  ಆರೋಪಿ ನೀನು ಬದ್ಕಿದ್ರೆ ತಾನೇ ನಿನ್ನ ಅಣ್ಣನಿಗೆ ಹೇಳೋದು ಅಂತ ಚಾಕನ್ನು ಚುಚ್ಚಲು ಮುಂದಾಗಿದ್ದಾನೆ.

ಈ ವೇಳೆ ಅಂಜನಪ್ಪ ತಪ್ಪಿಸಿಕೊಂಡಿದ್ದಾರೆ. ಆದರೂ ಸಹ ಚಾಕು ಅಂಜನಪ್ಪನವರ ಬೆನ್ನಿಗೆ ತಾಗಿ ಗಾಯಗಳಾಗಿವೆ. ಆಗ ಅಂಜನಪ್ಪ ಕೂಗಿಕೊಂಡಾಗ ಬಾರ್ ಮಾಲೀಕರು, ಕ್ಯಾಶಿಯರ್ ಮತ್ತು ಅಕ್ಕಪಕ್ಕದವರು ಉಪಚರಿಸಿ  ಜೆ.ಸಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾವಾಯ್ತು ನಮ್ಮ ಪಾಡಾಯ್ತು ಅಂತ ಸುಮ್ಮನೆ ಇದ್ದರೂ ಸಹ ಕೆಲವೊಂದು ಸಣ್ಣ ಸಣ್ಣ ವಿಚಾರ ಹಾಗೆಯೇ ಅನಿರೀಕ್ಷಿತ ಘಟನೆಗಳು ನಮ್ಮ ಜೀವಕ್ಕೆ ಕಂಟಕವಾಗುತ್ತೆ, ಎಷ್ಟೇ ಜಾಗೃತರಾಗಿದ್ದರೂ ಸಹ ಸಾಲಲ್ಲ ಅನ್ನೋ ಈ ಮಾತಿಗೆ ಇದೊಂದು ಘಟನೆ ನಿದರ್ಶನವಾಗಿದೆ.

Thirthahalli Man Stabbed By Friend For Refusing Beer