ಶಿವಮೊಗ್ಗ: ಡಿ ಸಿ ಕಚೇರಿ ಮುಂಭಾಗದಲ್ಲಿ ಆಟೋ ಚಾಲಕರ ದಿಡೀರ್​ ಪ್ರತಿಭಟನೆ: ಕಾರಣವೇನು

ಹಂಚಿಕೊಳ್ಳಿ
WhatsApp Facebook X Telegram
Shivamogga Auto Drivers Protest
Shivamogga Auto Drivers Protest

ಶಿವಮೊಗ್ಗ: ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಆಟೋಗಳ ಸಂಖ್ಯೆ ಹಾಗೂ ಆಟೋ ಚಾಲಕರು ಎದುರಿಸುತ್ತಿರುವ ನಾನಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ, ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಆಟೋ ಚಾಲಕರು ಮತ್ತು ಮಾಲೀಕರು ದಿಢೀರ್ ಪ್ರತಿಭಟನೆ ನಡೆಸಿದರು. ಶಿವಮೊಗ್ಗ ನಗರ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ನೇತೃತ್ವದಲ್ಲಿ ಜರುಗಿದ ಈ ಹೋರಾಟದಲ್ಲಿ ನೂರಾರು ಚಾಲಕರು ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ಭಾಗವಾಗಿ ನೂರಾರು ಆಟೋ ಚಾಲಕರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲೇ ಸಾಲಾಗಿ ಆಟೋಗಳನ್ನು ನಿಲ್ಲಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ರ್ಯಾಪಿಡೋ ನಿಲ್ಲಿಸಿ, ಅಯ್ಯಯ್ಯೋ ಅನ್ಯಾಯ ಎಂಬ ಘೋಷವಾಕ್ಯಗಳನ್ನು ಕೂಗುವ ಮೂಲಕ ನಗರದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಚಾಲಕರು ಒತ್ತಾಯಿಸಿದರು .

Shivamogga ಆಟೋ ಚಾಲಕರ ಪ್ರಮುಖ ಬೇಡಿಕೆಗಳು ಇಲ್ಲಿವೆ

ಶಿವಮೊಗ್ಗ ನಗರದಲ್ಲಿ ಈಗಾಗಲೇ ಆಟೋಗಳ ಸಂಖ್ಯೆ ಮಿತಿ ಮೀರಿದ್ದು, ಹೊಸ ಆಟೋಗಳಿಗೆ ನೀಡಲಾಗುತ್ತಿರುವ ಪರವಾನಿಗೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು.

ಶಿವಮೊಗ್ಗ ನಗರದ ವ್ಯಾಪ್ತಿ ಅತ್ಯಂತ ಕಿರಿದಾಗಿದ್ದು, ಇಲ್ಲಿ ರಾಪಿಡೋ ಹಾಗೂ ನಮ್ಮ ಯಾತ್ರಿ ಬೈಕ್ ಸೇವೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು.

ಗ್ಯಾಸ್ ದರ ಹಾಗೂ ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಆಟೋಗಳ ಕನಿಷ್ಠ ಬಾಡಿಗೆಯನ್ನು 50 ರೂಪಾಯಿಗಳಿಗೆ ನಿಗದಿಪಡಿಸಬೇಕು ಹಾಗೂ ಎಲ್ಲಾ ಗ್ಯಾಸ್ ಬಂಕ್‌ಗಳಲ್ಲಿ ಒಂದೇ ರೀತಿಯ ದರ ಇರಬೇಕು.

ಪ್ರೀಪೇಡ್ ಆಟೋ ನಿಲ್ದಾಣದ ವ್ಯವಸ್ಥೆಯನ್ನು ಮರು ಸರ್ವೆ ಮಾಡಬೇಕು. ಜೊತೆಗೆ ಪ್ರಾಮಾಣಿಕ ಚಾಲಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು.

ಶಿವಮೊಗ್ಗ ರೈಲ್ವೆ ನಿಲ್ದಾಣದ ಆಟೋ ಸ್ಟ್ಯಾಂಡ್ ಬಳಿ ಪರವಾನಿಗೆ ಇಲ್ಲದೆ ಸಂಚರಿಸುವ ಸಿಟಿ ಬಸ್‌ಗಳಿಗೆ ಬ್ರೇಕ್ ಹಾಕಬೇಕು.

ಪ್ರತಿಭಟನೆಯ ಕೊನೆಯಲ್ಲಿ ಚಾಲಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸಂಘಟನೆಯ ಪ್ರಮುಖರು ಎಚ್ಚರಿಸಿದ್ದಾರೆ.

Shivamogga Auto Drivers Protest

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor