ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಬಾಳೆಹೊನ್ನೂರು ಭಾಗದಲ್ಲಿ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾಗಿದ್ದ ಕಾಡಾನೆ ಶೌರ್ಯ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಮೃತಪಟ್ಟಿದೆ. 2026ರ ಫೆಬ್ರವರಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಭಾಗದಲ್ಲಿ ನಡೆದ ಕಾಡಾನೆ ದಾಳಿಗಳ ಬಳಿಕ ಸೆರೆಹಿಡಿಯಲಾಗಿದ್ದ ಈ ಆನೆಯನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ತಂದು ಪಳಗಿಸಲಾಗಿತ್ತು.
ಬಾಳೆಹೊನ್ನೂರು ಸಮೀಪದ ಹ್ಯಾರಂಬಿಪುರ ಭಾಗದಲ್ಲಿರುವ ನಾಗೇಶ್ ಗೌಡ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಮೊದಲು ಹಾವೇರಿ ಮೂಲದ ಕಾರ್ಮಿಕ ಯಲ್ಲಪ್ಪ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಇದಾದ ಸುಮಾರು 7 ದಿನಗಳ ಬಳಿಕ ಅದೇ ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳಿದ್ದ ಹೊಸಪೇಟೆ ಮೂಲದ ಬೋರಮ್ಮ (34) ಅವರ ಮೇಲೂ ಕಾಡಾನೆ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬೋರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದರು. ಕೆಲವೇ ದಿನಗಳ ಅಂತರದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು.

ಘಟನೆಗಳ ಬಳಿಕ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ದೊಡ್ಡ ಮಟ್ಟದ ಕಾರ್ಯಾಚರಣೆ ಕೈಗೊಂಡಿತ್ತು. 7 ಪಳಗಿದ ಆನೆಗಳ ಜೊತೆಗೆ 75 ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆನೆಯನ್ನ ಸೆರೆ ಹಿಡಿಯಲಾಗಿತ್ತು. ಬಳಿಕ ಅದನ್ನ ಬಳಿಕ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಆನೆಗೆ ಶೌರ್ಯ ಎಂದು ಹೆಸರಿಟ್ಟು ಮರದ ಕ್ರಾಲ್‌ನಲ್ಲಿ ಇರಿಸಿ ಪಳಗಿಸುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಸುಮಾರು 3 ತಿಂಗಳ ಅವಧಿಯಲ್ಲಿ ಮಾವುತರು ಮತ್ತು ಕಾವಾಡಿಗಳು ಶೌರ್ಯನನ್ನು ಪಳಗಿಸಿದ್ದರು.
2026ರ ಮೇ ತಿಂಗಳಲ್ಲಿ ತರಬೇತಿ ಪೂರ್ಣಗೊಂಡ ನಂತರ ಶೌರ್ಯನನ್ನು ಮರದ ಕ್ರಾಲ್‌ನಿಂದ ಹೊರಗೆ ಬಿಡಲಾಗಿತ್ತು. ಈ ಕಾರ್ಯದಲ್ಲಿ ಸಕ್ರೆಬೈಲು ಬಿಡಾರದ ಬಾಲಣ್ಣ ಆನೆಯನ್ನು ಬಳಸಲಾಗಿತ್ತು. ಕಾಡಿನಿಂದ ಸೆರೆಹಿಡಿದು ತಂದ ಕೆಲವೇ ತಿಂಗಳಲ್ಲಿ ಶೌರ್ಯನನ್ನು ನಿಯಂತ್ರಣಕ್ಕೆ ತಂದು ಪಳಗಿಸುವಲ್ಲಿ ಸಕ್ರೆಬೈಲು ಬಿಡಾರದ ಸಿಬ್ಬಂದಿ ಯಶಸ್ವಿಯಾಗಿದ್ದರು.
ಹೀಗೆ ಬಾಳೆಹೊನ್ನೂರು ಭಾಗದಲ್ಲಿ ಇಬ್ಬರು ಕಾರ್ಮಿಕರ ಸಾವಿನ ಪ್ರಕರಣದ ಬಳಿಕ ಸೆರೆಸಿಕ್ಕು, ಸಕ್ರೆಬೈಲು ಆನೆ ಬಿಡಾರದಲ್ಲಿ ಹೊಸ ಬದುಕು ಆರಂಭಿಸಿದ್ದ ಶೌರ್ಯ ಇದೀಗ ಬಿಡಾರದಲ್ಲಿ ಮೃತಪಟ್ಟಿದೆ. ಅದು ಅನಾರೋಗ್ಯದಿಂದ ಸಾವನ್ನಪ್ಪಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ಅಧಿಕೃತ ವಿವರ ಲಭ್ಯವಾಗಬೇಕಿದೆ.
