ಮಲೆನಾಡುಟುಡೆ ಸುದ್ದಿ / ಸೊರಬ : ತಾಲೂಕಿನಲ್ಲಿ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರಸ್ತೆ ಅಪಘಾತ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿವಾಳಪ್ಪ (32) ಎಂಬ ವ್ಯಕ್ತಿಯನ್ನು ಆತನ ಊರಿನಲ್ಲಿಯೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆ ಹಿನ್ನೆಲೆ

2022ರಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಮಡಿವಾಳಪ್ಪ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ದಿನದಿಂದಲೂ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, ಸೊರಬದ ಪಿಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಸಿಸಿ ಕ್ರಮಾಂಕ 2342/2022 ರಲ್ಲಿ ಆರೋಪಿಯ ವಿರುದ್ಧ ಜಾಮೀನು ರಹಿತ ದಸ್ತಗಿರಿ ವಾರೆಂಟ್ ಹೊರಡಿಸಿತ್ತು.
ಸೊರಬ ವೃತ್ತದ ಸಿಪಿಐ ಮಹಾಂತೇಶ್ ಕೆ. ಲಂಬಿ ಅವರ ಮಾರ್ಗದರ್ಶನ ಹಾಗೂ ಸೊರಬ ಪೊಲೀಸ್ ಠಾಣೆಯ ಪಿಎಸ್‍ಐ ನವೀನ್ ಅವರ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಪ್ರೋಸೆಸ್ ವಿಭಾಗದ ಸಿಬ್ಬಂದಿ ಹೆಚ್‌ಸಿ ಸೋಮಾನಾಯ್ಕ್ ಕೆ. ಅವರು ಆರೋಪಿಯ ಚಲನವಲನದ ಮೇಲೆ ಕಣ್ಣಿಟ್ಟು, ಸ್ವಗ್ರಾಮದಲ್ಲಿದ್ದ ಆತನನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
