ಸುಬ್ಬಯ ಆಸ್ಪತ್ರೆಯಲ್ಲಿ ನಾಳೆಯಿಂದ ಅಂತರರಾಷ್ಟ್ರೀಯ ಸಮ್ಮೇಳನ! ಏನೆಲ್ಲಾ ಇರಲಿದೆ! ಗಮನಿಸಿ

ಹಂಚಿಕೊಳ್ಳಿ
WhatsApp Facebook X Telegram
International Disaster Management Conference at Subbaiah Medical College
International Disaster Management Conference at Subbaiah Medical College

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಿಂದ ಜಪಾನ್‌ನ ಏಷ್ಯಾ ವೈದ್ಯರ ಸಂಘಟನೆ (AMDA) ಸಹಯೋಗದಲ್ಲಿ ನ.18 ಮತ್ತು 19ರಂದು ವಿಪತ್ತು ನಿರ್ವಹಣೆ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ನಾಗೇಂದ್ರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾಗತಿಕ ವಾಸ್ತವಗಳು, ಪ್ರಾದೇಶಿಕ ಸ್ಥಿತಿಸ್ಥಾಪಕತ್ವ’ ಎಂಬ ಧ್ಯೇಯವಾಕ್ಯದಡಿ ನಡೆಯುವ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ಬೆಳಿಗ್ಗೆ 9 ಗಂಟೆಗೆ ಹೊಳೆಹೊನ್ನೂರು ರಸ್ತೆಯ ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ ಎಂದರು.

ಸುಬ್ಬಯ ಆಸ್ಪತ್ರೆಯಲ್ಲಿ ನಾಳೆಯಿಂದ ಅಂತರರಾಷ್ಟ್ರೀಯ ಸಮ್ಮೇಳನ!

ವೈಜ್ಞಾನಿಕ ಗೋಷ್ಠಿಗಳು ಇದೇ ಸಭಾಂಗಣದಲ್ಲಿ ಹಾಗೂ ಪ್ರಾಯೋಗಿಕ ಕಾರ್ಯಾಗಾರಗಳು ಸಮುದಾಯ ವೈದ್ಯಶಾಸ್ತ್ರ ಸಭಾಂಗಣದಲ್ಲಿ ನಡೆಯಲಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮ್ಮೇಳನಕ್ಕೆ ಸಹಭಾಗಿತ್ವ ನೀಡಿವೆ. ಜಪಾನ್ ಸೇರಿದಂತೆ ದೇಶದ ವಿವಿಧ ಭಾಗಗಳ ತಜ್ಞರು ಭಾಗವಹಿಸಲಿದ್ದಾರೆ ಎಂದರು.

ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ಒದಗಿಸಿ ಜೀವ ಉಳಿಸುವಲ್ಲಿ ಮೊದಲ ಕೆಲವು ಗಂಟೆಗಳು ನಿರ್ಣಾಯಕವಾಗಿವೆ. ಹೀಗಾಗಿ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಮುಂಚಿತವಾಗಿ ಅಗತ್ಯ ತರಬೇತಿ ನೀಡುವ ಮೂಲಕ ವಿಪತ್ತು ನಿರ್ವಹಣಾ ಸನ್ನದ್ಧತೆ ಹೆಚ್ಚಿಸುವುದು ಸಮ್ಮೇಳನದ ಪ್ರಮುಖ ಉದ್ದೇಶ ಎಂದರು.

ವಿಪತ್ತು ಅಪಾಯ ತಗ್ಗಿಸುವಿಕೆ, ಮುನ್ನೆಚ್ಚರಿಕೆ, ತುರ್ತು ಪ್ರತಿಸ್ಪಂದನೆ, ಪುನರ್ವಸತಿ, ಸಮುದಾಯದ ಸ್ಥಿತಿಸ್ಥಾಪಕತ್ವ ಹಾಗೂ ವಿಪತ್ತಿನ ಸಂದರ್ಭದ ಮಾನಸಿಕ ಆರೋಗ್ಯದ ಬಗ್ಗೆಯೂ ವಿಚಾರ ವಿನಿಮಯ ನಡೆಯಲಿದೆ ಎಂದರು.

ನ.18ರಂದು ಮಧ್ಯಾಹ್ನ ಇಲ್ಲಿನ ಆರು ಕೇಂದ್ರಗಳಲ್ಲಿ ಪ್ರಾಯೋಗಿಕ ಕಾರ್ಯಾಗಾರ ಆಯೋಜಿಸಲಾಗಿದೆ. ಘಟನಾ ಸ್ಥಳದ ನಿರ್ವಹಣೆ, ಗಾಯಾಳುಗಳ ಆದ್ಯತಾ ವಿಂಗಡಣೆ (ಟ್ರಯಾಜ್), ಮೂಲ ಜೀವರಕ್ಷಕ ಚಿಕಿತ್ಸೆ, ಆಸ್ಪತ್ರೆ ಪೂರ್ವ ಗಾಯಾಳು ಆರೈಕೆ, ಸುರಕ್ಷಿತ ಸ್ಥಳಾಂತರ ಹಾಗೂ ಮನೋಸಾಮಾಜಿಕ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ನೀಡಲಾಗುವುದು ಎಂದರು.

ಜಪಾನ್‌ನ AMDA ಸಂಸ್ಥಾಪಕ ಡಾ. ಶಿಗೆರು ಸುಗನಾಮಿ ಮುಖ್ಯ ಅತಿಥಿಯಾಗಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಡಾ. ಪೂಜಾ ಸಕ್ಷೇನಾ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಡಾ. ಸುಗನಾಮಿ ಅವರು ವಿಪತ್ತು ಪರಿಹಾರ ಕಾರ್ಯದಲ್ಲಿ AMDA ಸಂಸ್ಥೆಯ ಜಾಗತಿಕ ಅನುಭವ ಮತ್ತು ಪ್ರತಿಸ್ಪಂದನಾ ವ್ಯವಸ್ಥೆ ಕುರಿತು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

ಸಮ್ಮೇಳನಕ್ಕೆ ಒಟ್ಟು 268 ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಸುಬ್ಬಯ್ಯ ಸಂಸ್ಥೆಯ 153 ಹಾಗೂ ಇತರ ಸಂಸ್ಥೆಗಳ 115 ಪ್ರತಿನಿಧಿಗಳಿದ್ದಾರೆ. ಸಂಶೋಧನಾ ಪ್ರಬಂಧ ಮತ್ತು ಪೋಸ್ಟರ್ ಮಂಡನೆ, ‘ಭಾರತದಲ್ಲಿ ವಿಪತ್ತು ಸನ್ನದ್ಧತೆ ಬಲಪಡಿಸುವುದು’ ವಿಷಯದ ಕುರಿತು ಸಂವಾದ ಹಾಗೂ ಯುವ ಸಂಶೋಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಸಮ್ಮೇಳನಕ್ಕೆ ಕರ್ನಾಟಕ ವೈದ್ಯಕೀಯ ಪರಿಷತ್ತಿನ ಮೂರು ಕ್ರೆಡಿಟ್ ಅಂಕಗಳ ಮಾನ್ಯತೆ ದೊರೆತಿದೆ ಎಂದರು.

ಎಎಂಡಿಎ ಇಂಡಿಯಾ ಅಧ್ಯಕ್ಷ ಡಾ. ಎಂ. ಎಸ್. ಕಾಮತ್, ಡಾ. ರಾಮಚಂದ್ರ ಕಾಮತ್, ಡಾ. ಲತಾ ಆರ್. ತೆಲಂಗ್, ನಿರಂಜನ್ ಕಾಂಬ್ಳೆ, ಡಾ. ಜಿ. ವಿನಾಯಕ್, ಡಾ. ವಿನಯ ಶ್ರೀನಿವಾಸ್, ಜಪಾನ್ ನ ಟ್ರಾನ್ಲಲೇಟರ್ ತುಮೊಕು ಇದ್ದರು.

ವಿಪತ್ತು ನಿರ್ವಹಣೆಗೆ ಸುಬ್ಬಯ ಆಸ್ಪತ್ರೆ–ಎಎಂಡಿಎ ಒಡಂಬಡಿಕೆ

ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಎಎಂಡಿಎ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ವಿಪತ್ತು ನಿರ್ವಹಣೆಯಲ್ಲಿ ಆರೋಗ್ಯ ಕ್ಷೇತ್ರದ ವೃತ್ತಿಪರರಿಗೆ ತರಬೇತಿ ನೀಡಿ, ಜಿಲ್ಲಾ ಮಟ್ಟದಲ್ಲಿ ಪರಿಣತ ತಂಡ ಸಿದ್ಧಪಡಿಸುವುದು ಒಡಂಬಡಿಕೆಯ ಮುಖ್ಯ ಉದ್ದೇಶ ಎಂದು ಜಪಾನ್‌ನ ಎಎಂಡಿಎ (AMDA) ಸಂಸ್ಥಾಪಕ ಡಾ. ಶಿಗೆರು ಸುಗನಾಮಿ ತಿಳಿಸಿದರು. ವಿಪತ್ತು ವೈದ್ಯಕೀಯವನ್ನು ಪ್ರಮುಖ ವಿಷಯವಾಗಿ ಪರಿಗಣಿಸಿ ಕಾರ್ಯನಿರ್ವಹಿಸುವ ವೈದ್ಯಕೀಯ ಕಾಲೇಜುಗಳು ಜಪಾನ್‌ನಲ್ಲಿಯೂ ವಿರಳವಾಗಿವೆ. ಈ ಹಿನ್ನೆಲೆಯಲ್ಲಿ ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸಕ್ತಿ ತೋರಿರುವುದು ಮಹತ್ವದ ಬೆಳವಣಿಗೆ. ಸಂಸ್ಥೆಯ ವೈದ್ಯರು ಮತ್ತು ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಹೇಳಿದರು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor