ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ / ಶಿವಮೊಗ್ಗ/ ನಗರದಲ್ಲಿ ಆಟೊ ರಿಕ್ಷಾಗಳ ಸಂಖ್ಯೆ ಹೆಚ್ಚಾಗಿದ್ದು, ಚಾಲಕರು ಜೀವನ ನಿರ್ವಹಣೆಗೂ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಹೊಸ ಆಟೊ ರಿಕ್ಷಾಗಳಿಗೆ ಪರ್ಮಿಟ್ ನೀಡುವುದನ್ನು ಮುಂದಿನ 10 ವರ್ಷಗಳವರೆಗೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ ಮಂಗಳವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ನಗರದಲ್ಲಿ ಸುಮಾರು 8 ಸಾವಿರ ಆಟೊ ರಿಕ್ಷಾಗಳು ಹಾಗೂ ಹೆಚ್ಚಿನ ಸಂಖ್ಯೆಯ ನಗರ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ. ನಗರ ವಿಸ್ತೀರ್ಣವೂ ಕಡಿಮೆ ಇರುವುದರಿಂದ ಆಟೊ ಚಾಲಕರಿಗೆ ಸಾಕಷ್ಟು ಬಾಡಿಗೆ ದೊರೆಯುತ್ತಿಲ್ಲ. ಸಾಲ ಮಾಡಿ ಆಟೊ ಖರೀದಿಸಿರುವ ಚಾಲಕರು, ದಿನದ ದುಡಿಮೆಯಲ್ಲಿ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಹಾಗೂ ವಾಹನದ ನಿರ್ವಹಣೆಯ ವೆಚ್ಚ ಭರಿಸುವುದು ಕಷ್ಟವಾಗಿದೆ. ದಿನಕ್ಕೆ ₹300 ಉಳಿಸುವುದೂ ದುಸ್ತರವಾಗಿದೆ ಎಂದು ಮನವಿಯಲ್ಲಿ ತಿಳಿಸಿದರು.
ಹೊಸ ಪರ್ಮಿಟ್ ನೀಡುವುದನ್ನು ನಿಲ್ಲಿಸುವಂತೆ ಹಲವು ವರ್ಷಗಳಿಂದ ಸಂಘವು ಒತ್ತಾಯಿಸುತ್ತಿದೆ. ಆದರೆ, ಜುಲೈ 15ರಂದು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಹೊಸ ಆಟೊ ರಿಕ್ಷಾಗಳಿಗೆ ಒಬ್ಬರಿಗೆ ಒಂದು ಪರ್ಮಿಟ್ ನೀಡುವ ನಿರ್ಣಯ ಕೈಗೊಂಡಿರುವುದು ಚಾಲಕರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ನಿರ್ಣಯವನ್ನು ತಕ್ಷಣ ಹಿಂಪಡೆಯಬೇಕು. ಮುಂದಿನ 10 ವರ್ಷಗಳವರೆಗೆ ಹೊಸ ಆಟೊ ರಿಕ್ಷಾಗಳಿಗೆ ಪರ್ಮಿಟ್ ನೀಡದಂತೆ ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಿಗೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಸಂಘದ ಸಂಸ್ಥಾಪಕ ಆಟೋ ಬಕ್ಷಿ, ಉಪಾಧ್ಯಕ್ಷ ಇಕ್ಬಾಲ್, ಮಂಜಣ್ಣ, ಪ್ರಧಾನ ಕಾರ್ಯದರ್ಶಿ ಹರೀಶ್, ಸಂಘಟನಾ ಕಾರ್ಯದರ್ಶಿ ಫೈರೋಜ್, ಸಹ ಕಾರ್ಯದರ್ಶಿ ಅಪ್ಸರ್ ಪಾಷ, ನಿರ್ದೇಶಕ ಯಾಸಿನ್, ಹಿರಿಯ ಆಟೋ ಚಾಲಕರಾದ ಪಂಚಾಕ್ಷರಿ ಹಾಗೂ ಎಂ.ವಿ. ಸುಭಾನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಆಟೋ ಚಾಲಕರು ಉಪಸ್ಥಿತರಿದ್ದರು.
ಜಿಲ್ಲೆಗೆ ನೂತನವಾಗಿ ಆಗಮಿಸಿದ ಜಿಲ್ಲಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ ಅವರನ್ನು ಶಿವಮೊಗ್ಗ ನಗರದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಮಂಗಳವಾರ ಸ್ವಾಗತಿಸಲಾಯಿತು.
