ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಉಡಾನ್ ಯೋಜನೆಯಿಂದ ಬರುತ್ತಿದ್ದ ಸಹಾಯಧನ ಬಂದಾಗಿರುವ ಬೆನ್ನಲ್ಲೇ ಶಿವಮೊಗ್ಗದಲ್ಲಿ ಇದೀಗ ಅನೇಕ ವಿಮಾನಗಳು ಹಾರಾಟವನ್ನು ನಿಲ್ಲಿಸಿವೆ. ಇದರ ನಡುವೆ ಶಿವಮೊಗ್ಗದ ವಿಮಾನ ನಿಲ್ದಾಣ ಬಂದ್ ಆಗುತ್ತಾ ಎಂಬ ಚರ್ಚೆಯ ಬೆನ್ನಲ್ಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೊಸದಾದ ಮಾಹಿತಿಯನ್ನು ನೀಡಿದ್ದಾರೆ. ಅದೇನೆಂದರೆ ವಿಮಾನಗಳ ಸರ್ವಿಸ್ ಸೆಂಟರ್‌ಗಳನ್ನು ಶಿವಮೊಗ್ಗದಲ್ಲಿ ನಿರ್ಮಿಸುವುದರ ಕುರಿತಾಗಿ ಕಂಪನಿಯೊಂದರ ಜೊತೆ ಚರ್ಚೆ ನಡೆಸಿದ್ದೇನೆ, ಇದು ಸಾಮಾನ್ಯವಾದಂತಹ ಚರ್ಚೆಯಾಗಿದ್ದು ಮುಂದಿನ ದಿನಗಳಲ್ಲಿ ಸಾಧುವಾಗಬಹುದು ಎಂದು ಹೇಳಿದ್ದಾರೆ.
ಹೌದು, ಜಿಲ್ಲಾದ್ಯಂತ ವಿಮಾನ ನಿಲ್ದಾಣದ ಅಳಿವು ಉಳಿವಿನ ವಿಚಾರವಾಗಿ ಚರ್ಚೆ ನಡೆಯುತ್ತಿದ್ದ ಬೆನ್ನಲ್ಲೇ ವಿಮಾನ ನಿಲ್ದಾಣದ ಬಗ್ಗೆ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಸಿಎಸ್‌ಆರ್ ಸಭೆಯೊಂದರಲ್ಲಿ ಬೋಯಿಂಗ್ ಕಂಪನಿಯವರೊಂದಿಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರು ಹಾಗೂ ಇತರೆಡೆ ಹ್ಯಾಂಗರ್ ಮತ್ತು ಸರ್ವಿಸ್ ಸೆಂಟರ್‌ಗಳಿಗೆ ವಿಪರೀತ ಖರ್ಚು ಬರುವುದರಿಂದ, ಶಿವಮೊಗ್ಗದಲ್ಲಿ ಈ ಸೌಲಭ್ಯವನ್ನು ಮಾಡಿಕೊಳ್ಳುವಂತೆ ಬೋಯಿಂಗ್ ಕಂಪನಿಯವರಿಗೆ ತಾವು ಮನವಿ ಮಾಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗವು ಭೌಗೋಳಿಕವಾಗಿ ಮಧ್ಯಭಾಗದಲ್ಲಿದೆ ಮತ್ತು ವಿಮಾನ ನಿಲ್ದಾಣದ ಬಳಿ ಸಾಕಷ್ಟು ಜಾಗವಿರುವುದರಿಂದ, ಕಾರುಗಳ ಮಾರಾಟ ಕೇಂದ್ರ ನಗರದಲ್ಲಿದ್ದು ಸರ್ವಿಸ್ ಸೆಂಟರ್ ಬೇರೆಡೆ ಇರುವಂತೆ, ಬೋಯಿಂಗ್ ಸಂಸ್ಥೆಯು ತಮ್ಮ ಸರ್ವಿಸ್ ಸೆಂಟರ್ ಅನ್ನು ಶಿವಮೊಗ್ಗದಲ್ಲಿ ಸ್ಥಾಪಿಸಿದರೆ ಅಗತ್ಯವಿರುವ ಎಲ್ಲ ರೀತಿಯ ಸಂಪೂರ್ಣ ಬೆಂಬಲ ಹಾಗೂ ಸೌಲಭ್ಯಗಳನ್ನು ನೀಡುವುದಾಗಿ ತಿಳಿಸಿರುವುದಾಗಿ ಅವರು ವಿವರಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ನೈಟ್ ಲ್ಯಾಂಡಿಂಗ್ ರಾಜ್ಯ ಸರ್ಕಾರದಿಂದ 23 ಕೋಟಿ ರೂಪಾಯಿ ಖರ್ಚಾಗಿದೆ, ಉಡಾನ್ ಯೋಜನೆ ಯಾರದ್ದು? ಬಿಜೆಪಿ ನಾಯಕರು ಬಡವರ ಬಗ್ಗೆ ಮಾತನಾಡುವುದಿಲ್ಲ. ವಿಮಾನ ನಿಲ್ದಾಣದ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಬಳಿ ಹೋಗಿ ಒತ್ತಾಯಿಸಬೇಕಲ್ಲವೇ? ವಿಮಾನ ನಿಲ್ದಾಣದ ಸಮಸ್ಯೆಗಳನ್ನು ಸರಿಪಡಿಸುವ ಬಗ್ಗೆ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ಮಾತನಾಡಿದ್ದೇನೆ. ಅವರು ಕೂಡ ವಿಮಾನಯಾನ ಸಂಸ್ಥೆಗಳ ಏರ್‌ಲೈನ್ಸ್ ಜೊತೆ ಮಾತನಾಡಿದ್ದು, ಸೇವೆಯನ್ನು ಮುಂದುವರಿಸುವಂತೆ ತಿಳಿಸಿದ್ದಾರೆ.
